ಮುರಳೀಧರ್ ರಾವ್ ಅವರನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿಲ್ಲ: ಬಿಜೆಪಿ ಸ್ಪಷ್ಟನೆ

ಬೆಂಗಳೂರು 13: ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಅವರ ಜತೆಗೂಡಿ ರಾಜ್ಯ ಬಿಜೆಪಿ ಉಸ್ತುವಾರಿ ಕೆ. ಮುರಳಿಧರ ರಾವ್ ಅವರು ಜೆಡಿಎಸ್ ಮುಖಂಡ, ಸಚಿವ ಸಾ ರಾ ಮಹೇಶ್ ಅವರನ್ನು ಭೇಟಿಮಾಡಿದ ಕಾರಣಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವರದಿಗಳನ್ನು ರಾಜ್ಯ ಬಿಜೆಪಿ ಅಲ್ಲಗಳೆದಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಹಾಗೂ ಮೇಲ್ಮನೆ ಸದಸ್ಯ ಎನ್. ರವಿ ಕುಮಾರ್ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕೆಲವು ಮಾಧ್ಯಮಗಳು ಮುರಳಿಧರ ರಾವ್ ಅವರನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾಡಿರುವ ವರದಿಗಳು ಆಧಾರರಹಿತ. ವಾಸ್ತವಿಕತೆಗೆ ದೂರ ಎಂದಿದ್ದಾರೆ. ಈ ವರದಿಗಳು ಸುಳ್ಳು ಅಲ್ಲದೇ ದುರುದ್ದೇಶ ಪೂರಿತ ಮತ್ತು ಚೇಷ್ಟೆಯಿಂದ ಕೂಡಿದೆ. ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ವರದಿ ಮಾಡಿವೆ. ಕಾಂಗ್ರೆಸ್ ನಾಯಕರು ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿರುವುದಾಗಿ ಆಪಾದಿಸಿದ್ದಾರೆ. ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸದೇ ವರದಿ ಮಾಡಿವೆ. ಇದರಲ್ಲಿ ಕಾಂಗ್ರೆಸ್ ಪ್ರೇರಣೆ ಇದೆ. ಬಿಜೆಪಿ ಕೇಂದ್ರ ನಾಯಕತ್ವ ಒಗ್ಗಟ್ಟಾಗಿದ್ದು, ನಮ್ಮಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲ. ಪಕ್ಷದ ಎಲ್ಲಾ ಹಂತಗಳಲ್ಲಿ ನಾವು ಐಕ್ಯತೆಯಿಂದ ಇದ್ದೇವೆ ಎಂದು ರವಿ ಕುಮಾರ್ ಹೇಳಿದ್ದಾರೆ.