ಜನಸಾಗರದ ಮಧ್ಯೆ ‘ಮ್ಯಾಕ್ಸ್‌’ ಟ್ರೇಲರ್, ಹಾಡಿನ ಸಂಭ್ರಮ

Amidst the crowd, 'Max' trailer, song celebration

ಜನಸಾಗರದ ಮಧ್ಯೆ ‘ಮ್ಯಾಕ್ಸ್‌’ ಟ್ರೇಲರ್, ಹಾಡಿನ ಸಂಭ್ರಮ 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನೀರೀಕ್ಷಿತ ‘ಮ್ಯಾಕ್ಸ್‌’ ಸಿನಿಮಾ ಇದೇ ಕ್ರಿಸ್ಮಸ್ ಹಬ್ಬದಂದು (ಡಿ.25) ವಿಶ್ವಾದ್ಯಂತ ತೆರೆಗೆ ಬರುತ್ತಿರುವುದು ನಿಮಗೆಲ್ಲ ಗೊತ್ತೆ ಇದೆ. ಹಾಗಾಗಿ ಬಹು ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಂದರ್ಭದಲ್ಲಿ ಸುದೀಪ್ ‘ಮ್ಯಾಕ್ಸ್‌ ಚಿತ್ರ ಒಂದು ಸಿಂಪಲ್ ಕಥೆ ಇರೋ ಚಿತ್ರವೇ ಆಗಿದೆ. ನಾನು ಆ ರೀತಿಯ ಕಥೆಯನ್ನೆ ಹುಡುಕುತ್ತಿದ್ದೆ. ಆಗಲೇ ಈ ಮ್ಯಾಕ್ಸ್‌ ಕಥೆ ಬಂತು ಒಪ್ಪಿಕೊಂಡಿದ್ದೇನೆ. ಆದರೆ, ನಾನು ಯಾವುದೇ ಚಿತ್ರ ಮಾಡಿದ್ರು ಅದನ್ನ ಲೆಕ್ಕಾಚಾರ ಮಾಡಿ ನೋಡೋಕೆ ಹೋಗಿಲ್ಲ. ನಾನು ಒಬ್ಬ ಕ್ರಿಯೇಟರ್ ಆಗಿದ್ದೇನೆ. ಒಳ್ಳೆ ಕಥೆ ಅಂತ ಬಂದ್ರೆ ಅದನ್ನ ಸಿನಿಮಾ ಮಾಡುತ್ತೇವೆ. ಸಿನಿಮಾ ಗೆದ್ದರೆ ಮತ್ತೊಂದು ಚಿತ್ರ ಮಾಡುತ್ತೇವೆ. ಸೋತರೂ ಮತ್ತೊಂದು ಚಿತ್ರ ಮಾಡುತ್ತೇವೆ. ಹಾಗೆ ಸಿನಿಮಾಗಳನ್ನ ಮಾಡ್ತಾನೇ ಇರುತ್ತೇವೆ. ಅದೇ ರೀತಿನೇ ಮ್ಯಾಕ್ಸ್‌ ಚಿತ್ರವನ್ನೂ ಮಾಡಿದ್ದೇವೆ’ ಎಂದಿದ್ದಾರೆ. 

ವಿಜಯ್ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್‌ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ತಮಿಳು ಹಾಗೂ ಕನ್ನಡದಲ್ಲಿ 'ಮ್ಯಾಕ್ಸ್‌' ಸಿನಿಮಾ ನಿರ್ಮಾಣ ಆಗಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರೀಲೀಸ್ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆಗಲಿದೆ. ಮತ್ತೊಮ್ಮೆ ಖಡಕ್ ಪಾತ್ರದಲ್ಲಿ ಅಬ್ಬರಿಸಲು ಸುದೀಪ್ ಅಣಿಯಾಗಿದ್ದಾರೆ. ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಇಲ್ಲಿ ಸುದೀಪ್‌ಗೆ ನಾಯಕಿ ಇರಲ್ಲ. ಒಂದು ರಾತ್ರಿಯಲ್ಲಿ ನಡೆಯುವ ಕತೆ ಇದು ಎನ್ನಲಾಗ್ತಿದೆ.  

ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಿಚ್ಚ ಅಬ್ಬರಿಸಿದ್ದಾರೆ. ಸಂಯುಕ್ತಾ ಹೊರನಾಡ್, ಉಗ್ರಂ ಮಂಜು ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗಾಗಲೇ ಎರಡು ಟೀಸರ್ ಹಾಗೂ ಒಂದು ಸಾಂಗ್ ರೀಲೀಸ್ ಆಗಿ ಸದ್ದು ಮಾಡಿದೆ.