50 ಸ್ಥಳೀಯ ಸಂಸ್ಥೆಗಳ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸ್ವೀಕಾರ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ - ಸಚಿವ ಬಿ.ಎಸ್.ಸುರೇಶ್
ಸುವರ್ಣಸೌಧ 13: ರಾಜ್ಯದ ವಿವಿಧ ಕಡೆಗಳಿಂದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ, ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ, ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ 50ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದ ವೇಳೆ ಅವರು ಸದನಕ್ಕೆ ಮಾಹಿತಿ ನೀಡಿದರು.
20,000 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದರೆ ಮಾತ್ರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬಹುದು. ಇದರೊಂದಿಗೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾದ ಮೇಲೆ ಅಗತ್ಯ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಅನುದಾನವನ್ನು ಸಹ ನೀಡಬೇಕು. ಸ್ವೀಕೃತವಾದ ಎಲ್ಲ ಪ್ರಸ್ತಾವನೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ಭರವಸೆ ನೀಡಿದರು.
ಗೋಕರ್ಣ ಪಟ್ಟಣ ಪಂಚಾಯಿತಿ ರಚನೆಗೆ ಮನವಿ: ಕುಮುಟ ಕ್ಷೇತ್ರದ ಶಾಸಕ ದಿನಕರ್ ಕೇಶವ್ ಶೆಟ್ಟಿಯವರು ಧಾರ್ಮಿಕ ಶ್ರದ್ಧಾ ಕ್ಷೇತ್ರವಾದ ಗೋಕರ್ಣ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆ ಏರಿಸುವಂತೆ ಕೋರಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರಲ್ಲಿ ಕೋರಿದರು.
ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕರುಗಳಾದ ವಿಜಯೇಂದ್ರ, ಡಾ.ಅಶ್ವತ್ ನಾರಾಯಣ, ಸುನೀಲ್ ಕುಮಾರ್, ಭೈರತಿ ಬಸವರಾಜ್ ಅವರು ಗೋಕರ್ಣ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಸರ್ಕಾರ ಕೂಡಲೇ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಆದ್ದರಿಂದ ಸರ್ಕಾರ ಸ್ವಚ್ಛತೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. 2011 ರ ಜನಗಣತಿಯಂತೆ ಗೋಕರ್ಣದಲ್ಲಿ 13,539 ಜನಸಂಖ್ಯೆ ಇದೆ. ವಿಸ್ತೀರ್ಣ 33.1 ಚದರ ಕಿ.ಮೀ. ಇದ್ದು, ಜನಸಾಂದ್ರತೆ ಪ್ರತೀ ಚದರ ಕಿ.ಮೀ.ಗೆ 409 ಇದೆ. 2015ರಲ್ಲಿ ಸಚಿವ ಸಂಪುಟ ಸಭೆಯಲ್ಲಿ 2011ರ ಜನಗಣತಿಯಲ್ಲಿ 15,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೆ ಏರಿಸಲು ಪರಿಗಣಿಸಲು ನಿರ್ಧರಿಸಲಾಗಿದೆ. ಆದಾಗ್ಯೂ ಗೋಕರ್ಣದ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಶಾಸಕರು, ಅಧಿಕಾರಿಗಳೊಂದಗೆ ಸಭೆ ನಡೆಸಿ ಸಕಾರಾತ್ಮವಾಗಿ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.
ಇದೇ ವೇಳೆ, ಶಾಸಕ ಪ್ರಭು ಚವ್ಹಾಣ್ ಓರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಹಾಗೂ ಕಮಲ್‌ನಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವ ರಹೀಂ ಖಾನ್ ಅವರಲ್ಲಿ ಮನವಿ ಮಾಡಿದರು.
*********
ಗಾಜನೂರು ನೀರು ಶುದ್ಧೀಕರಣ ಘಟಕ ನಿರ್ಮಾಣ ಅರಣ್ಯ ಇಲಾಖೆ ಎನ್.ಓ.ಸಿ ಪಡೆಯಲು ಪ್ರಯತ್ನ -ಸಚಿವ ಬಿ.ಎಸ್.ಸುರೇಶ್
ಸುವರ್ಣಸೌಧ 13: ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಗಾಜನೂರು ಬಳಿ ಹೊಸದಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸ್ಥಳ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಶೀಘ್ರವೇ ಅರಣ್ಯ ಇಲಾಖೆಯಿಂದ ಎನ್.ಓ.ಸಿ ಪಡೆದು ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಎನ್.ಓ.ಸಿ ಲಭಿಸದಿದ್ದರೆ, ಸೂಕ್ತವಾದ ಬದಲಿ ಜಾಗವನ್ನು ಸಹ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಚನ್ನಬಸಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಕೃಷ್ಣ ರಾಜೇಂದ್ರ ನೀರು ಸರಬರಾಜು ಕೇಂದ್ರದಲ್ಲಿ 1976ರಲ್ಲಿ 13.62 ಎಂ.ಎಲ್.ಡಿ, 1996ರಲ್ಲಿ 13.38 ಎಂ.ಎಲ್.ಡಿ ಹಾಗೂ 2009 ರಲ್ಲಿ 57 ಎಂ.ಎಲ್.ಡಿ ಸೇರಿ ಒಟ್ಟು 84 ಎಂ.ಎಲ್.ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1976 ಮತ್ತು 1996ರಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ಬದಲು ಹೊಸದಾಗಿ ಶುದ್ಧೀಕರಣ ಘಟಕ ನಿರ್ಮಿಸಲು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ, ಗಾಜನೂರು ಅರಣ್ಯ ಪ್ರದೇಶದಲ್ಲಿ ಸ್ಥಳ ಗುರುತಿಸಲಾಗಿದೆ. ಈ ಸ್ಥಳದಿಂದ ಗುರುತ್ವಾಕರ್ಷಣೆ ಮೂಲಕ ಶಿವಮೊಗ್ಗ ನೀರು ಸರಬರಾಜು ಮಾಡಬಹುದು. ಈ ಸಂಬಂಧ ಸರ್ವೆ ಕಾರ್ಯ ಹಾಗೂ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಸಚಿವ ಬಿ.ಎಸ್.ಸುರೇಶ ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಶೇ.74 ರಷ್ಟು ಒಳಚರಂಡಿ ವ್ಯವಸ್ಥೆ ಇದೆ. ರೂ.115 ಕೋಟಿ ವೆಚ್ಚದಲ್ಲಿ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ, ಏರೇಟೆಡ್ ಲಗೂನ್ ತಂತ್ರಜ್ಞಾನ ಆಧರಿಸಿ 35.58 ಎಂ.ಎಲ್.ಡಿ ತ್ಯಾಜ್ಯ ನೀರು ಶುದ್ದೀಕರಣ ಘಟಕ, 03 ವೆಟ್‌ವೆಲ್, 262 ಕಿ.ಮೀ ಉದ್ದದ ಗ್ರಾಮಸಾರ ಕೊಳವೆ ಮಾರ್ಗವನ್ನು ನಿರ್ಮಿಸಲಾಗಿದೆ. ಅಮೃತ್ ಯೋಜನೆಯಡಿ ರೂ.58 ಕೋಟಿ ಹಾಗೂ ರೂ.7 ಕೋಟಿ ಹೆಚ್ಚುವರಿ ಅನುದಾನದಡಿ ಮಹಾನಗರ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಗೃಹ ಸಂಪರ್ಕಿತ ಓಳಚರಂಡಿ ಕೊಳವೆ ಮಾರ್ಗ, ಹಳೆ ಕೊಳವೆ ಮಾರ್ಗಗಳ ಪುನರುಜ್ಜೀವನ, 4 ವೆಟ್‌ವಲ್, 6 ಪಂಪಿಂಗ್ ಮೆಷನರಿ, ಡಿ.ಜಿ. ರೂಮ್, ಡಿ.ಜೆ.ಸೆಟ್ ಮತ್ತು ಟ್ರಾನ್ಸ್ ಫಾರ್ಮರ್ ಸಬ್ ಸ್ಟೇಷನ್, 11 ಕೆ.ವಿ. ಎಕ್ಸ್ ಪ್ರೆಸ್ ಫೀಡರ್ ವಿದ್ಯುತ್ ಲೈನ್, 5.13 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ದೀಕರಣ ಘಟಕ ನಿರ್ಮಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳು ಸುಸ್ಥಿತಿಯಲ್ಲಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಹಾದುಹೋಗಿರುವ ತುಂಗಾ ನದಿಗೆ ಕೊಳಚೆ ನೀರು ಸೇರೆದಂತೆ ತಡೆಯಲು ಒಳಚರಂಡಿ ವ್ಯವಸ್ಥೆಯಲ್ಲಿನ ಮಿಸಿಂಗ್ ಲಿಂಕ್ಸ್ ಸ್ಥಳಗಳಲ್ಲಿಯೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರೂ.40 ಕೋಟಿ ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿ, ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸುವುದಾಗಿ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಮಹಾನಗರಗಳಿಗೆ ರೂ.2000 ಕೋಟಿ ಅನುದಾನ: ಸರ್ಕಾರ ರಾಜ್ಯ ಹಣಕಾಸು ನಿಮಗದಿಂದ ಬೃಹತ್ ಬೆಂಗಳೂರು ಸೇರಿ ಇತರೆ 10 ಮಹಾನಗರ ಪಾಲಿಕೆಗಳಿಗೆ ಒಟ್ಟು ರೂ.2000 ಕೋಟಿ ಅನುದಾನ ನೀಡಿದೆ. ಇದರಲ್ಲಿ ಶಿವಮೊಗ್ಗ ನಗರಕ್ಕೆ ರೂ.140 ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ಸಚಿವ ಬಿ.ಎಸ್.ಸುರೇಶ್ ಸದನದಲ್ಲಿ ಮಾಹಿತಿ ನೀಡಿದರು.
ಶಾಸಕ ಚನ್ನಬಸಪ್ಪ ನವರು ರಾಜ್ಯ ಹಣಕಾಸು ನಿಮಗದಿಂದ ನಿಗಮದಿಂದ ನೀಡಿದ ಅನುದಾನದಲ್ಲಿ ಶೇ.20 ರಷ್ಟು ಮಾತ್ರ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಈ ಮಿತಿಯನ್ನು ಸಡಿಲಗೊಳಿಸಿ ಹೆಚ್ಚಿನ ಅನುದಾನವನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡುವಂತೆ ಕೋರಿದರು.