5 ವರ್ಷದ ಕಂದಮ್ಮನ ಮೇಲೆ ಮಾಡಿದ ಅತ್ಯಾಚಾರ ಖಂಡಿಸಿ ಎಐಎಮ್‌ಎಸ್‌ಎಸ್‌ನಿಂದ ಪ್ರತಿಭಟನೆ

AIMSS protests against rape of 5-year-old Kandamma

5 ವರ್ಷದ ಕಂದಮ್ಮನ ಮೇಲೆ ಮಾಡಿದ ಅತ್ಯಾಚಾರ ಖಂಡಿಸಿ ಎಐಎಮ್‌ಎಸ್‌ಎಸ್‌ನಿಂದ ಪ್ರತಿಭಟನೆ 

ಬಳ್ಳಾರಿ 15: ತೋರಣಗಲ್ಲಿನಲ್ಲಿ 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರಗೈದವನನ್ನು ಈ ಕೂಡಲೇ ಬಂಧಿಸಿ, ಅತ್ಯುಗ್ರ ಶಿಕ್ಷೆ ಖಾತ್ರಿಪಡಿಸಿ ಮಗುವಿಗೆ ನ್ಯಾಯ ದೊರಕಿಸಲು ಆಗ್ರಹಿಸಿ ಂಋಖಖ ನಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  

ಂಋಖಖ ನ ಜಿಲ್ಲಾಧ್ಯಕ್ಷರಾದ ಕೆ. ಎಮ್‌. ಈಶ್ವರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಾ " ಕಾರ್ಖಾನೆಯಲ್ಲಿ ಕೆಲಸಕ್ಕೆಂದು  ಜಾಖಂರ್ಡದಿಂದ ತೋರಣಗಲ್ಲಿಗೆ ಬಂದು ನೆಲೆಸಿದ್ದ ದಂಪತಿಯ ಐದು ವರ್ಷದ ಕಂದಮ್ಮ ಮನೆಯ ಬಳಿ ಮಕ್ಕಳೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಮಗುವನ್ನು ಪುಸಲಾಯಿಸಿ  ಕರೆದೊಯ್ದಿರುವ ದುಷ್ಕರ್ಮಿ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಲೈಂಗಿಕ ದೌರ್ಜನ್ಯದಿಂದಾಗಿ ಆಂತರಿಕ ಗಾಯಗಳಾಗಿದ್ದು ತೀವ್ರ ರಕ್ತಸ್ರಾವದಿಂದ ನಲುಗುತ್ತಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  

 ಅತ್ಯಾಚಾರ ನಡೆದಿರುವುದು ವೈದ್ಯಕೀಯ ಮೂಲಗಳಿಂದ ದೃಢಪಟ್ಟು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಎರಡು ದಿನಗಳಾದರೂ ಕೂಡ ಅತ್ಯಾಚಾರಿಯನ್ನು ಬಂಧಿಸಿಲ್ಲ. ಜಿಲ್ಲಾಡಳಿತ ಈ ಕೂಡಲೇ ಅತ್ಯಾಚಾರಿಯನ್ನು ಬಂಧಿಸಿ, ಅತ್ಯುಗ್ರ ಶಿಕ್ಷೆಯನ್ನು ಖಾತ್ರಿಪಡಿಸಿ, ಮಗುವಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಮಗುವಿನ ಭವಿಷ್ಯದ ಎಲ್ಲಾ ಜವಾಬ್ದಾರಿಗಳನ್ನು ಸರ್ಕಾರವೇ ಹೊತ್ತುಕೊಳ್ಳಬೇಕು" ಎಂದು ಆಗ್ರಹಿಸಿದರು. 

 ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ  ಂಋಖಖ ನ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ "ಬೆಂಗಳೂರಿನಲ್ಲಿಯೂ ಕೂಡ ಐದು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಅವ್ಯಾಹತವಾಗಿ ಹೆಚ್ಚಾಗುತ್ತಿವೆ.  ಸಾಮಾಜಿಕ ಮಾಧ್ಯಮ, ಇಂಟರ್ನೆಟ್, ಟಿವಿಗಳ ಮೂಲಕ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ ಮತ್ತು ಮದ್ಯ ಮಾದಕ ವಸ್ತುಗಳು ಇಂತಹ ಅಪರಾಧಗಳಿಗೆ ಕಾರಣವಾಗುತ್ತಿವೆ. ಇನ್ನೊಂದೆಡೆ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಈ ಸಾಂಸ್ಕೃತಿಕ ಅಧಪತನದಿಂದಾಗಿ ವಿದ್ಯಾರ್ಥಿ- ಯುವಜನರು ಇಂತಹ ಹೀನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಪಂಚವರಿಯದ ಪುಟ್ಟ ಕಂದಮ್ಮನ ಮೇಲೂ ಕ್ರೌರ್ಯ  ಎಸಗುವ ಪಶುತ್ವದ ಮಟ್ಟಕ್ಕೆ ತಲುಪುತ್ತಿದ್ದಾರೆ. ಈ ಎಲ್ಲದಕ್ಕೂ ನೈತಿಕ ಜವಾಬ್ದಾರರಾಗಿರುವ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕು, ಅಶ್ಲೀಲ ಸಿನಿಮಾ-ಸಾಹಿತ್ಯಗಳನ್ನು ನಿಷೇಧಿಸಬೇಕು,ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ಖಾತ್ರಿಪಡಿಸಿ ಮತ್ತೆ ಇಂತಹ ಅಪರಾಧಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಂಋಖಖ ನ ಪದಾಧಿಕಾರಿಗಳಾದ  ಪದ್ಮಾ, ವಿದ್ಯಾ, ಗಿರಿಜಾ, ಸೌಮ್ಯ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.