ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಮಾತಿನ ಸಮರ
ಶಿಗ್ಗಾವಿ 27: ತಾಲೂಕಾಡಳಿತದಿಂದ ತಾಲೂಕ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ 76 ನೇ ಗಣರಾಜ್ಯೋತ್ಸವ ಸಮಾರಂಭ ರಾಜಕೀಯ ಜಟಾಪಟಿಗೆ ಕಾರಣವಾಗಿ ಕೆಲ ಸಮಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಮಾತಿನ ಸಮರ ನಡೆಯಿತು. ತಹಸೀಲ್ದಾರ ಧನಂಜಯ ಎಂ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಂತರ ಕುಳಿತುಕೊಳ್ಳುವ ಕುರ್ಚಿಗಾಗಿ ನಡೆದ ಈ ಕಿತ್ತಾಟವು ಅಧಿಕಾರಿಗಳನ್ನು ಒಳಗೊಂಡಂತೆ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಕೆಸರಚಾಟದ ವೇದಿಕೆಯಾಗಿ ಮಾರ್ಪಟಟಿತು.
ನಿಗದಿತ ಸಮಯಕ್ಕೆ ವೇದಿಕೆಗೆ ಬಂದಿದ್ದ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಅವರನ್ನೊಳಗೊಂಡ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಶ್ರೀಕಾಂತ ಬುಳ್ಳಕನವರ, ಸುಭಾಷ ಚೌಹಾಣ ಮಾಜಿ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ದಯಾನಂದ ಅಕ್ಕಿ ಸೇರಿದಂತೆ ಬಿಜೆಪಿಯ ಸದಸ್ಯರು ತಮ್ಮ ಹಾಸನದಲ್ಲಿ ಕುಳಿತಿದ್ದರು. ನಂತರ ಆಗಮಿಸಿದ ಸರ್ಕಾರದ ಗ್ಯಾರೆಂಟಿ ಯೋಜನೆ ಅಧ್ಯಕ್ಷ ಶೇಖಪ್ಪ ಮಣಕಟ್ಟಿ ಅವರಿಗೆ ಆಸನದ ವ್ಯವಸ್ಥೆ ಮಾಡಿಲ್ಲವೆಂದು ಶಾಸಕರ ಎದುರಲ್ಲಿ ಕೆಲವರು ತಹಸೀಲ್ದಾರ ಧನಂಜಯ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಗ ತಹಸೀಲ್ದಾರ ಅವರು ಪಕ್ಕದಲ್ಲಿಯೇ ಕುಳಿತಿದ್ದ ಮಾಜಿ ಅಧ್ಯಕ್ಷ ಶ್ರೀಕಾಂತ ಬುಳ್ಳಕನವರ ಅವರನ್ನು ಎಬ್ಬಿಸಿ ಶೇಖಪ್ಪ ಮಣಕಟ್ಟಿ ಅವರನ್ನು ಕುಳಿತುಕೊಳ್ಳಲು ಹೇಳುತ್ತಿದ್ದಂತೆ, ಆಕ್ರೋಶಗೊಂಡ ಪುರಸಭೆಯ ಇತರ ಸದಸ್ಯರು ಕಾರ್ಯಕ್ರಮ ಆಯೋಜನೆ ಪೂರ್ವದಲ್ಲಿ ಸಮರ್ಕವಾಗಿ ಎಲ್ಲ ಮಾರ್ಾಡುಗಳನ್ನು ಮಾಡಿಕೊಳ್ಳಬೇಕಿತ್ತು. ವೇದಿಕೆ ಮೇಲೆ ಕುಳಿತವರನ್ನು ಎಬ್ಬಿಸಿ ಅವಮಾನ ಮಾಡುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದೀರಿ ಎಂದು ವಾದ ನಡೆಸುತ್ತಿದ್ದಂತೆ, ವೇದಿಕೆ ಮುಂದೆ ಇದ್ದ ಕೆಲವು ಶಾಸಕರ ಬೆಂಬಲಿಗರು ಗ್ಯಾರಂಟಿ ಯೋಜನೆಯ ಅಧ್ಯಕ್ಷರಿಗೆ ಕುಳಿತುಕೊಳ್ಳಲು ಪುರಸಭೆ ಸದಸ್ಯರು ಸ್ಥಳ ಕೊಡುತ್ತಿಲ್ಲ ಎಂದು ಜಗಳಕ್ಕೆ ಮುಂದಾಗಿ ಕೆಲ ಸಮಯ ಗಣರಾಜ್ಯೋತ್ಸವ ಸಮಾರಂಭ ರಾಜಕೀಯ ಜಟಾಪಟಿಗೆ ಕಾರಣವಾಯಿತು. ಮಾತಿನ ಸಮರ ಜೋರಾಗುತ್ತಿದ್ದಂತೆ, ಮಾಧ್ಯಮ ಪ್ರತಿನಿಧಿಗಳು ವೇದಿಕೆ ಮೇಲೆ ಬಂದು ಮೈಕ್ ಹಿಡಿದು ಇದು ರಾಷ್ಟ್ರೀಯ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮ ಅಲ್ಲ, ಗೊಂದಲ ಮಾಡುವುದು ಬೇಡ ಎಲ್ಲರೂ ಕೆಳಗಿಳಿಯಿರಿ ಎಂದು ವಿನಂತಿ ಮಾಡಿಕೊಂಡರು. ನಂತರ ಕಾರ್ಯಕ್ರಮ ಮುಂದುವರಿಯುತ್ತಿದ್ದಂತೆ. ಪುರಸಭೆ ಅಧ್ಯಕ್ಷರನ್ನೊಳಗೊಂಡ ಎಲ್ಲ ಸದಸ್ಯರು ವೇದಿಕೆಯಿಂದ ನಿರ್ಗಮಿಸಿ ಮುಂದೆ ಇರುವ ಸಾರ್ವಜನಿಕರ ಸ್ಥಳದಲ್ಲಿ ಕುರಿತು ಕಾರ್ಯಕ್ರಮ ವೀಕ್ಷಣೆ ಮಾಡಿದರು.