ಕಸದ ತೊಟ್ಟಿಯಲ್ಲಿ ಸಿಕ್ಕ ವಿಶೇಷ ಚೇತನ ಮಗು ಇಟಲಿಯ ದಂಪತಿಯಿಂದ ದತ್ತು
ಬೆಳಗಾವಿ 18: ಬೆಳಗಾವಿಯ ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಇಟಲಿ ಮೂಲದ ದಂಪತಿಗಳು ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಟಲಿಯ ಫ್ಲಾರೆನ್ಸ್ ನಗರದ ನಿವಾಸಿ ಕೋಸ್ಟಾಂಜಾ ಹಾಗೂ ಬುಜಾರ್ ಡೆಡೆ ಎಂಬವರು ವಿಶೇಷಚೇತನ ಮಗುವನ್ನು ದತ್ತು ಪಡೆದಿದ್ದಾರೆ. ಫ್ಲಾರೆನ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋಸ್ಟಾಂಜಾ ಅವರು ಫಿಜಿಯೋಥೆರಪಿ ವೈದ್ಯರಾಗಿದ್ದರೆ, ಬುಜಾರ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರಿಂದ ಮನೆಯಲ್ಲೇ ಇದ್ದುಕೊಂಡು ಅಂಗವಿಕಲರಿಗೆ ಈಜು ಸೇರಿ ಮತ್ತಿತರ ಕ್ರೀಡೆಗಳ ತರಬೇತಿ ನೀಡುತ್ತಾರೆ. ಈ ದಂಪತಿ 2015ರಲ್ಲಿ ಮದುವೆ ಆಗಿದ್ದು, ಮಕ್ಕಳಿಲ್ಲ. ತಾವು ಸ್ವತಃ ದಿವ್ಯಾಂಗರಾಗಿದ್ದರೂ ವಿಶೇಷಚೇತನ ಮಗುವನ್ನು ದತ್ತು ಪಡೆದಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ಬೆಳಗಾವಿಯಲ್ಲಿ ವಿಶೇಷಚೇತನ ಎನ್ನುವ ಕಾರಣಕ್ಕೆ ನವಜಾತ ಶಿಶುವನ್ನು ಹೆತ್ತವರು ಕಸದ ತಿಪ್ಪೆಗೆ ಎಸೆದು ಹೋಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ್ದ ಸಿಡಿಪಿಒ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದಾದ ಬಳಿಕ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಆ ಮಗು ಆರೈಕೆ ಪಡೆಯುತ್ತಿತ್ತು. ಈಗ ಎರಡೂವರೆ ವರ್ಷದ್ದಾಗಿರುವ ಮಗು ಬೆಳಗಾವಿಯಿಂದ ದೂರದ ಇಟಲಿಗೆ ತೆರಳಲು ಸಜ್ಜಾಗಿದೆ.
ಆಶ್ರಮದಲ್ಲಿನ ಯಾವುದಾರು ಒಂದು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದ ಇಟಲಿ ದಂಪತಿ ಆರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದೆ ವಿಶೇಷ ಚೇತನ ಮಗುವಿನ ಬಗ್ಗೆ ಆಶ್ರಮದಿಂದ ಮಾಹಿತಿ ಪಡೆದಿದ್ದರು. ಬಳಿಕ, ವಿಶೇಷ ಚೇತನ ಮಗುವಿನ ಆರೈಕೆ, ಚಿಕಿತ್ಸೆಗೆ ಇಟಲಿ ಮೂಲದ ಪಿಜಿಷಿಯನ್ ಡಾ. ಕೂಸ್ತಾಂನ್ಸಾ ಮತ್ತು ಬುಯಾರ್ ಡೆಡೆ ದಂಪತಿ ಸಹಾಯ ಮಾಡುತ್ತಿದ್ದರು. ಇದೀಗ, ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆಯನ್ನು ದಂಪತಿ ಮಗುವನ್ನು ದತ್ತು ಪಡೆದಿದ್ದಾರೆ.
ಬೆಳಗಾವಿಯ ಚಿಕ್ಕುಂಬಿ ಮಠದ ಆಶ್ರಮದಿಂದ ವಿದೇಶಕ್ಕೆ ಹಾರಿರುವ 13ನೇ ಮಗು ಇದಾಗಿದೆ. ನಂಬಿಕಸ್ಥರು, ಸುಸಂಸ್ಕೃತರೆಂಬ ಕಾರಣಕ್ಕೆ ಭಾರತೀಯ ಮಗು ದತ್ತು ಪಡೆಯುತ್ತಿದ್ದೇವೆ. ವಿಶೇಷ ಚೇತನ ಮಗುವಿನ ಭವಿಷ್ಯ ರೂಪಿಸಿದ ಧನ್ಯತೆಯ ಕಾರಣಕ್ಕೆ ನಮ್ಮ ಆಯ್ಕೆ ಇದಾಗಿದೆ ಎಂದು ಡಾ. ಕೂಸ್ತಾಂನ್ಸಾ ದಂಪತಿ ಹರ್ಷ ವ್ಯಕ್ತಪಡಿಸಿದರು.