ಉ.ಪ್ರ. ಪ್ರಯಾಗರಾಜ ಸಂಗಮದಲ್ಲಿ ಕಾಶೀಪೀಠದ ಶಾಖಾ ಜಂಗಮವಾಡಿಮಠದ ಲೋಕಾರೆ್ಣ
ಧಾರವಾಡ 09: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠಕ್ಕೆ ತನ್ನದೇ ಆದ ಪ್ರಾಚೀನ ಘನ ಗುರುಪರಂಪರೆ ಇದ್ದು, ಭಾರತದ ಬಹುಪಾಲು ರಾಜ್ಯಗಳಲ್ಲಿ ತನ್ನ ಶಾಖಾಮಠಗಳನ್ನು ಹೊಂದಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಶನಿವಾರ ಉತ್ತರ ಪ್ರದೇಶದ ಪ್ರಯಾಗರಾಜ ತ್ರಿವೇಣಿಸಂಗಮ ಕ್ಷೇತ್ರದಲ್ಲಿ ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ನವೀಕೃತ ಕಟ್ಟಡವನ್ನು ಉಜ್ಜಯಿನಿ ಪೀಠದ ಜಗದ್ಗುರುಗಳೊಂದಿಗೆ ಜಂಟಿಯಾಗಿ ಲೋಕಾರೆ್ಣಗೊಳಿಸಿ ಆಶೀರ್ವಚನ ನೀಡಿ ಮಾತನಾಡಿದರು. ಕಾಶಿ ಪೀಠವು ತನ್ನ ಹೆಸರಿಗೆ ತಕ್ಕಂತೆ ಸಾವಿರಾರು ವರ್ಷಗಳಿಂದಲೂ ಜ್ಞಾನ ದಾಸೋಹಕ್ಕೆ ತೆರೆದುಕೊಂಡಿದೆ. ಭಾರತದ ವಿವಿಧ ರಾಜ್ಯಗಳ ಅನೇಕ ಮಠಾಧೀಶರುಗಳ ಅಧ್ಯಯನಕ್ಕೆ ಆಶ್ರಯ ನೀಡಿದ ಹಿರಿಮೆ ಕಾಶಿ ಪೀಠಕ್ಕೆ ಇದೆ ಎಂದೂ ಅವರು ಹೇಳಿದರು.
ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಅಭಿನವ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಸರಸ್ವತಿಯ ಸ್ವಕ್ಷೇತ್ರವೆಂದೇ ಪ್ರಖ್ಯಾತಿ ಪಡೆದಿರುವ ವಾರಾಣಾಸಿಯಲ್ಲಿರುವ ಕಾಶಿ ಜ್ಞಾನ ಪೀಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ಶತಮಾನೋತ್ಸವ ಆಚರಿಸಿದ ಹಿರಿಮೆ ಇದೆ. 1801 ರಿಂದ 1810ರವರಗೆ ಇದೇ ಗುರುಕುಲದ ವಿದ್ಯಾರ್ಥಿಯಾಗಿದ್ದ ಧಾರವಾಡ ತಾಲೂಕು ಗರಗದ ಮಡಿವಾಳ ಶಿವಯೋಗಿಗಳು ತಮ್ಮ ವಿಶಿಷ್ಟ ಶಿವಯೋಗ ಸಾಧನೆಯಿಂದಾಗಿ ಲೋಕವಿಖ್ಯಾತರಾದವರು. ಜಗದ್ಗುರು ಪಂಚಪೀಠಗಳ ಗುರುಪರಂಪರೆ, ವಿರಕ್ತ ಪರಂಪರೆಯ ಮಠಾಧೀಶರು, ಸಿದ್ಧಾರೂಢ ಪರಂಪರೆಯ ಮತ್ತು ಶಿವಾನಂದ ಪರಂಪರೆಯ ಅನೇಕ ಮಠಾಧೀಶರು ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾರ್ಥಿಗಳಾಗಿದ್ದವರು ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ವಿದ್ಯಾವಾಚಸ್ಪತಿಗಳು : ಸತತ ಅಧ್ಯಯನ ಶೀಲತೆ, ಪೂಜೆ, ತಪೋಷ್ಠಾನ ಮತ್ತು ಶಿವಯೋಗ ಸಾಧನೆಯ ಮೂಲಕ ಅಪಾರ ಪಾಂಡಿತ್ಯವನ್ನು ಹೊಂದಿರುವ ಪ್ರಸ್ತುತ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿದ್ಯಾವಾಚಸ್ಪತಿಗಳು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ವಿದ್ವತ್ತನ್ನು ಸಂಪಾದಿಸಿರುವ ಹಿರಿಯ ಜಗದ್ಗುರುಗಳು ವಿಶೇಷವಾಗಿ ವೀರಶೈವ ವಾಙ್ಮಯ ಲೋಕದಲ್ಲಿ ತಮ್ಮದೇ ಆದ ಪಾಂಡಿತ್ಯದ ನೆಲೆಯಲ್ಲಿ ಮೇರು ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ವಾರಾಣಾಸಿಯ ವಿವಿಧ ವಿಶ್ವವಿದ್ಯಾಲಯಗಳು ಅವರನ್ನು ಗೌರವಿಸಿವೆ. ವೀರಶೈವ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಉದ್ಗ್ರಂಥವು ದೇಶದ ಬಹುಪಾಲು ಭಾಷೆಗಳಲ್ಲಿ ಮುದ್ರಣವಾಗಿರುವುದು ಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸತತ ಪರಿಶ್ರಮವೇ ಕಾರಣವಾಗಿದೆ ಎಂದರು.
ಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಪ್ರಯಾಗರಾಜ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಂಗಲಸ್ನಾನಗೈದು ಕಾಶಿ ಪೀಠದ ಶಾಖಾ ಜಂಗಮವಾಡಿಮಠದ ನವೀಕೃತ ಕಟ್ಟಡವನ್ನು ಲೋಕಾರೆ್ಣಗೊಳಿಸಿ ಆಗಮಿಸಿದ್ದ ಸಮಸ್ತ ಭಕ್ತಗಣಕ್ಕೆ ಆಶೀರ್ವದಿಸಿರುವ ಉಜ್ಜಯಿನಿ ಮತ್ತು ಶ್ರೀಶೈಲ ಪೀಠಗಳ ಉಭಯ ಜಗದ್ಗುರುಗಳ ನೆನಹು ಕಾಶಿ ಪೀಠದ ಗುರುಪರಂಪರೆಯಲ್ಲಿ ಪ್ರಸ್ತುತ ವಿಶೇಷವಾಗಿ ದಾಖಲಾಗಿದೆ. ಇದು ತಮಗೆ ವೈಯಕ್ತಿಕವಾಗಿ ವ್ಯಾಪಕ ಖುಷಿ ತಂದಿದೆ ಎಂದರು.
ಬಾರ್ಶಿ ದೈವಾಡಕರಮಠದ ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ಕಡಬಗಾಂವ ಓಂಕಾಸಿದ್ಧ ಶಿವಾಚಾರ್ಯ ಸ್ವಾಮೀಜಿ, ಮೊರಬದ ಜಡೆಮಠದ ಪಟ್ಟಾಧ್ಯಕ್ಷರು, ಕಾಶಿ ವೀರಶೈವ ವಿದ್ವತ್ ಸಂಘದ ವಿದ್ಯಾರ್ಥಿಗಳು, ಪ್ರಯಾಗರಾಜ ಕ್ಷೇತ್ರದ ಪ್ರಯಾಗರಾಜೇಶ್ವರ ಮಹಿಳಾ ಭಜನಾ ಮಂಡಳದ ತಾಯಂದಿರು ಹಾಗೂ ವಿವಿಧ ರಾಜ್ಯಗಳಗಳ ಭಕ್ತಾದಿಗಳು ಇದ್ದರು.