84 ಕುಟುಂಬಗಳು ಬೀದಿಪಾಟಂಗಲು ಪುರಸಭೆ ನೇರ ಹೊಣೆ: ರಮೇಶ ಭೂಸನೂರ

84 ಕುಟುಂಬಗಳು ಬೀದಿಪಾಟಂಗಲು ಪುರಸಭೆ ನೇರ ಹೊಣೆ: ರಮೇಶ ಭೂಸನೂರ  84 families are homeless, the municipality is directly responsible: Ramesh Bhusanura

84 ಕುಟುಂಬಗಳು ಬೀದಿಪಾಟಂಗಲು ಪುರಸಭೆ ನೇರ ಹೊಣೆ: ರಮೇಶ ಭೂಸನೂರ  

ಸಿಂದಗಿ 12: ಸ.ನಂ 842/2 ರಲ್ಲಿ 20 ವರ್ಷಗಳಿಂದ ವಾಸ ಮಾಡುತ್ತಿದ್ದ 84 ಕುಟುಂಬಗಳು ಬೀದಿಪಾಲು ಆಗಲು ಪುರಸಭೆ ನೇರ ಹೊಣೆ. ಹೀಗಾಗಿ ಪುರಸಭೆ ವಿರುದ್ಧ ನಿರಾಶ್ರಿತರ ಪರವಾಗಿ ನ್ಯಾಯಕ್ಕಾಗಿ ಹೈಕೋರ್ಟ್‌ ಮೊರೆ ಹೋಗಲಾಗುವುದು ಎಂದು ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಕುರಿತು ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ 84 ಕುಟುಂಬಗಳಿಗೆ ಹಕ್ಕುಪತ್ರ ನಾನು ಹಂಚಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಖಂಡನೀಯ. ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಈಗ ಅವರನ್ನು ಒಕ್ಕಲೆಬ್ಬಿಸಿರುವುದು ಕೂಡ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದರು. 

ಸಿಂದಗಿ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಮುಂದುವರಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಭೇಟಿ ನೀಡಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ‘84 ಕುಟುಂಗಳಿಗೆ ಸೂರು ಇಲ್ಲದೇ ನಿರಾಶ್ರಿತರಾಗಿದ್ದಾಗ ಜನಪ್ರತಿನಿಧಿಯಾದವರು ಅವರ ಪರವಾಗಿ ನಿಂತುಕೊಳ್ಳಬೇಕು’ ಎಂದರು. 

ನಾನು ಶಾಸಕನಾಗಿದ್ದ ಅವಧಿಯಲ್ಲಿ ಅಂತರಗಂಗಿ ಬಳಿ 10 ಎಕರೆ ಜಮೀನು ಮತ್ತೆ 13 ಎಕರೆ ಜಮೀನು ಆಶ್ರಯ ವಸತಿ ಯೋಜನೆಯಡಿ ಖರೀದಿಸಲಾಗಿತ್ತು. ನಿರಾಶ್ರಿತರಿಗೆ ಅಲ್ಲಿ ನಿವೇಶನ ಹಂಚಿಕೆಯಾಗಬೇಕು. ಅದನ್ನು ಬಿಟ್ಟು ಜನಸಂಖ್ಯೆ ಆಧಾರದ ಮೇಲೆ ಬೇರೆ ಜಿಲ್ಲೆಗಳಲ್ಲಿ ಮೇಲ್ದರ್ಜೆಗೇರಿಸಿದಂತೆ ಸಿಂದಗಿ ಪುರಸಭೆಯನ್ನು ಕೂಡ ನಗರಸಭೆಯನ್ನಾಗಿ ಮಾಡಲಾಗಿದೆ. ಈ ಕೆಲಸಕ್ಕೆ ಶಾಸಕ ಅಶೋಕ ಮನಗೂಳಿ ವೈಭವ, ಡಂಭಾಚಾರದ ಮೆರವಣಿಗೆ ಮಾಡಿಸಿಕೊಳ್ಳುವುದು ಬೇಕಿತ್ತಾ. ಬಡವರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಬೇಕಿತ್ತು. ಆಶ್ರಯ ಕಳೆದುಕೊಂಡ ಕುಟುಂಬಗಳು ಡಾ.ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿವೆ. ತಕ್ಷಣವೇ ಸ.ನಂ 24 ರಲ್ಲಿನ ಪುರಸಭೆ ಜಮೀನಿನಲ್ಲಿ 84 ಕುಟುಂಬಗಳು ವಾಸಿಸಲು ಶೆಡ್ ನಿರ್ಮಿಸಿಕೊಡಬೇಕು’ ಎಂದು ಹೇಳಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ಸಿಂದಗಿ ಪಟ್ಟಣದ ನಿರಾಶ್ರಿತರ ನೋವಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸ್ಪಂದಿಸದೇ ಇರುವುದು ಖಂಡನಾರ್ಹ ಎಂದು ಟೀಕಿಸಿದರು. 

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜಿ.ಪಂ, ಮಾಜಿ ಸದಸ್ಯ ಬಿ.ಆರ್‌. ಯಂಟಮಾನ ಬಿಜೆಪಿ ಜಿಲ್ಲಾ ಪ್ರಮುಖರಾದ ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗೂರ, ಸಿಂದಗಿ ಬಿಜೆಪಿ ಪ್ರಮುಖರಾದ ಬಿ.ಎಚ್‌. ಬಿರಾದಾರ, ಗುರು ತಳವಾರ, ಸಿದ್ರಾಮ ಆನಗೊಂಡ, ಶಿದ್ಲಿಂಗಯ್ಯ ಹಿರೇಮಠ ಇದ್ದರು.