ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ 76 ನೇ ಗಣರಾಜ್ಯೋತ್ಸವದ ಆಚರಣೆ

76th Republic Day Celebration at Dharwad Bench of Karnataka High Court

ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ  76 ನೇ ಗಣರಾಜ್ಯೋತ್ಸವದ ಆಚರಣೆ

ಧಾರವಾಡ 26 : ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದರ ಉದ್ದೇಶ ಜಾರಿ ಮಾಡುವವರು ಸರಿ ಇಲ್ಲದೇ ಇದ್ದರೆ, ಉತ್ತಮ ಆಡಳಿತ ನೀಡುವಲ್ಲಿ ಸಫಲ ಆಗದು. ಮತ್ತು ಸಂವಿಧಾನ ಎಷ್ಟೇ ಕೆಟ್ಟದ್ದು ಇದ್ದರೂ ಅದರ ಉದ್ದೇಶ ಜಾರಿ ಮಾಡುವವರು ಉತ್ತಮ ಇದ್ದರೆ, ಉತ್ತಮ ಆಡಳಿತ ನೀಡುವಲ್ಲಿ ಸಫಲ ಆಗಬಹುದು ಎಂದು ಡಾ.ಅಂಬೇಡ್ಕರ್ ಅವರ ಮಾತನ್ನು ಹಿರಿಯ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರು ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ನಡೆದ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿ, ಹೇಳಿದರು. 

ಭಾರತದ ಸ್ವಾತಂತ್ರ್ಯದ ಹೋರಾಟದ ಹಾದಿ ದೀರ್ಘ ಮತ್ತು ಕಷ್ಟಕರವಾಗಿತ್ತು ಎಂದು ನೀವೆಲ್ಲರೂ ಬಲ್ಲಿರಿ. ಶತಮಾನ ಮೀರಿದ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಂಡ ಜನ ಸಮುದಾಯ ಸಹಜವಾಗಿಯೇ ಹೊಸ ನೀರೀಕ್ಷೆಗಳನ್ನು ಕನಸಿನ ಭಾರತದ ಬಗ್ಗೆ ಹೊಂದಿದ್ದರಲ್ಲಿ ವಿಶೇಷವೇನೂ ಇರಲಿಲ್ಲ ಮತ್ತು ಅದು ಪ್ರಕೃತಿ ಸಹಜವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಈ ದಿನ ಪ್ರತಿಯೊಬ್ಬ ಪ್ರಜೆಗೂ ವಿಶೇಷವಾದ ದಿನ ಹಾಗೂ ಮಹತ್ವದ ದಿನ ಎಂದೇ ಹೇಳಬೇಕು ಎಂದರು.  

ಸಮಾಜದಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯು ತಾನು ಸುಖವಾಗಿ ಜೀವಿಸಬೇಕೆಂದು ಬಯಸುತ್ತಾನೆ. ಸುಖವಾಗಿ ಜೀವನ ನಡೆಸಬೇಕಾದರೆ ವ್ಯವಸ್ಥಿತವಾದ ಸಮಾಜದ ವ್ಯವಸ್ಥೆ ಇರಬೇಕು. ಹಾಗಾದಲ್ಲಿ ಮಾತ್ರ ಸುಗಮ ಜೀವನ ಸಾದ್ಯ. ಸಮಾಜದಲ್ಲಿ ನೆಮ್ಮದಿ ಶಾಂತಿ ಇದ್ದರೆ ಮಾತ್ರ ಪ್ರತಿಯೊಬ್ಬ ವ್ಯಕ್ತಿಯು ಸುಖಿಯಾಗಿರಲು ಸಾದ್ಯ. ಸುಖಿ ಜೀವನಕ್ಕೆ ಸಮಾಜದ ಶಾಂತಿಗೆ ಕಟ್ಟುಕಟ್ಟಳೆಗಳು, ನಿಯಮಾವಳಿಗಳು, ನಿಯಂತ್ರಣಗಳು, ಹಕ್ಕುಗಳು, ಬಾದ್ಯತೆಗಳು ಅನಿವಾರ್ಯ. ಹಾಗೆಂದೇ ಕಾನೂನುಗಳ ರಚನೆಯಾಗುತ್ತಿವೆ. ಕಾನೂನುಗಳು ಪ್ರಜೆಯನ್ನು, ಸರ್ಕಾರವನ್ನು ಏಕಕಾಲಕ್ಕೆ ನಿಯಂತ್ರಿಸುತ್ತಿವೆ. ಸರ್ಕಾರದ ನಿಯಂತ್ರಣಕ್ಕೆ ಇರುವ ದಾರೀದೀಪವೇ ಸಂವಿಧಾನ. ಹಾಗೆಂದೇ ಸಂವಿಧಾನವನ್ನು ನಾವು ಸಕಲ ಕಾನೂನುಗಳ ಮಹಾತಾಯಿ ಎಂದೇ ಕರೆಯುತ್ತೇವೆ ಮತ್ತು ಆರಾಧಿಸುತ್ತೇವೆ ಎಂದು ನ್ಯಾಯಮೂರ್ತಿಗಳು ನುಡಿದರು.  

ಒಂದು ದೇಶದ ಸಂವಿಧಾನದಲ್ಲಿ ಸರ್ಕಾರವು ಯಾವ ನಿಯಮಗಳಿಗೆ ಅನುಸಾರವಾಗಿ ಆಡಳಿತ ನಡೆಸಬೇಕು, ಪ್ರಜೆಗಳು ಯಾವ ನಿಯಮಗಳಿಗೆ ಒಳಪಟ್ಟು ತಮ್ಮ ಹಕ್ಕುಗಳನ್ನು ಅನುಬವಿಸಬೇಕು ಎನ್ನುವುದನ್ನು ವಿವರಿಸಲಾಗಿರುತ್ತದೆ. ಸರ್ಕಾರವಿದ್ದಲ್ಲಿ ಸಂವಿಧಾನ ಇರಲೇಬೇಕು. ಸರ್ಕಾರದ ಎಲ್ಲಾ ನಡವಳಿಕೆಗಳು ಸಂವಿಧಾನಕ್ಕೆ ಬದ್ಧವಾಗಿರಬೇಕು. ಕಾನೂನು ಜನರನ್ನು ನಿಯಂತ್ರಣಕ್ಕೆ ಒಳಪಡಿಸಿದರೆ, ಸಂವಿಧಾನವು ಸರ್ಕಾರಗಳನ್ನು ನಿಯಂತ್ರಣಕ್ಕೆ ಒಳಪಡಿಸುತ್ತದೆ. ಹಾಗೆಂದೇ ಸಂವಿಧಾನವೆಂದರೆ ರಾಜ್ಯವನ್ನಾಳುವ ಕಾನೂನು ಎಂದು ವಿವರಿಸಲಾಗಿದೆ ಎಂದರು.  

ಭಾರತದ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ನಮ್ಮ ಕನಸಿನ ವೈಶಾಲ್ಯತೆಗೆ ದಿಕ್ಸೂಚಿಯಿದೆ ಎಂದೇ ಹೇಳಬಹುದು. ಸಂವಿಧಾನದಲ್ಲಿ ಭಾರತವನ್ನು ಸಂಪೂರ್ಣ ಸ್ವತಂತ್ರ ಪ್ರಬುತ್ವದ ಗಣರಾಜ್ಯವೆಂದು ಘೋಷಿಸಲ್ಪಟ್ಟಿದೆ. ನಿಜವಾದ ಅರ್ಥದಲ್ಲಿ ಪ್ರಜೆಗಳೇ ಪ್ರಬುಗಳು ಎಂದು ಸಂವಿಧಾನವು ಪ್ರಜೆಗಳ ಪರಮಾಧಿಕಾರವನ್ನು ಸೂಚಿಸಿದೆ. ಭಾರತದ ಎಲ್ಲಾ ಪರಮಾಧಿಕಾರದ ಮೂಲವೇ ಪ್ರಜೆಗಳು ಎನ್ನುವುದನ್ನು ವಿಶೇಷವಾಗಿ ಹೇಳಲಾಗಿದೆ ಎಂದರು.  

ಸಂವಿಧಾನದ ಪೀಠಿಕೆಯು ಸರ್ವಜನರ ಹಿತಾಯ, ಸರ್ವಜನ ಸುಖಾಯ ಮಂತ್ರವನ್ನು ಒಮ್ಮೆಗೆ ಉಲಿಂುುವುದನ್ನು ನಾವು ಕೇಳಬಹುದಾಗಿದೆ. ಆದರ್ಶ ರಾಜ್ಯದ ಕಲ್ಪನೆ ಅದರಲ್ಲಿ ಅಡಗಿದೆ. ನಮ್ಮ ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಪ್ರಬುತ್ವ ರಾಷ್ಟ್ರವಾಗಿದ್ದು ಬಾಹ್ಯ ಮತ್ತು ಆಂತರಿಕ ವಿಚಾರಗಳಲ್ಲಿ ಸರ್ವ ಸ್ವತಂತ್ರವಾಗಿದ್ದು ಯಾವುದೇ ವಿದೇಶಕ್ಕೆ ಅಡಿಯಾಳಾಗಿಲ್ಲ. ಹಾಗಾಗಿಯೇ ಇದು ಸಾರ್ವಭೌಮ ರಾಷ್ಟ್ರವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.  

ಭಾರತದ ಇಂದಿನ ದಿನಮಾನದಲ್ಲಿ ಸುತ್ತಲೂ ಆತಂಕಕಾರಿ ಸಂದರ್ಬಗಳಿವೆ. ಆತಂಕವಾದಿಗಳು ನಿರ್ದಯರಾಗಿದ್ದಾರೆ. ಬಡತನ ದೂರಹೋಗಲು ನಿರಾಕರಿಸುತ್ತಿದೆ. ಅನಕ್ಷರತೆ ಬಾಧಿಸುತ್ತಿದೆ, ನಿರುದ್ಯೋಗ ಸತತವಾಗಿ ನಮ್ಮ ಯುವ ಪೀಳಿಗೆಯನ್ನು ಹಿಂಸಿಸುತ್ತಿದೆ ಮತ್ತು ಮಾನವ ಸಂಪನ್ಮೂಲದ ಸದುಪಯೋಗವಾಗದೇ ವ್ಯರ್ಥವಾಗಿ ಉಳಿದಿರುವುದು ಕಾಣುತ್ತಿದೆ. ಅಸಮಾನತೆ ಇನ್ನೂ ಉಳಿದಿದೆ. ಎಲ್ಲಾ ಸಂಪತ್ತಿದ್ದೂ ಸಮನಾಗಿ ಹಂಚಿಕೆಯಾಗದೇ ದೇಶದ ಅಭಿವೃದ್ಧಿ ನೀರೀಕ್ಷಿತ ಓನತ್ಯವನ್ನು ತಲುಪದಾಗಿದೆ ಎಂದು ನುಡಿದರು.  

ಈ ದಿನ ನಮ್ಮದೇ ದಿನ ಅಂದರೆ ಗಣರಾಜ್ಯದ ದಿನ. ಹಾಗಾಗಿಯೇ ನಾವು ಸಾರ್ವಜನಿಕ ಜೀವನದಲ್ಲಿ ಶುದ್ದತೆಯನ್ನು ಕಾಪಾಡಿಕೊಳ್ಳುವ ಪಣ ತೊಡೋಣ. ಮನೆಗಳು ಮತ್ತು ರಸ್ತೆಗಳು ಶುದ್ದವಾದರೇ ಸಾಲದು, ಆಂತರಿಕ ನೆಲೆಗಳು, ಸಾಮಾಜಿಕ ಸಂಸ್ಥೆಗಳು ಬ್ರಷ್ಟತೆ ಮತ್ತು ಸ್ವಹಿತಾಸಕ್ತಿಗಳಿಂದ ಮುಕ್ತವಾಗಿ ಎಲ್ಲೆಡೆ ಪರಿಶುದ್ಧತೆ, ಶಾಂತಿ ಮತ್ತು ಸಮಾಧಾನ ಮೂಡಬೇಕಿದೆ. ಅಂತಹ ಕ್ರಿಯಾತ್ಮಕ ನಿಲುವಿನಲ್ಲಿ ನಾವು ಹೊಸ ದಿನಗಳನ್ನು ಕಟ್ಟೋಣ ಎಂದು ಬಿ.ಎಂ.ಶ್ಯಾಮಪ್ರಸಾದ್ ಅವರು ಹೇಳಿದರು.  

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಶೋಕ ಎಸ್‌. ಕಿಣಗಿ, ನ್ಯಾಯಮೂರ್ತಿ ಹೇಮಂತ ಚಂದನಗೌಡರ, ನ್ಯಾಯಮೂರ್ತಿ ರವಿ. ವಿ. ಹೊಸಮನಿ, ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ, ನ್ಯಾಯಮೂರ್ತಿ ರವಿ ಹೊಸಮನಿ, ನ್ಯಾಯಮೂರ್ತಿ ಉಮೇಶ ಅಡಿಗ, ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕ ಮಹಾ ವಿಲೇಖಾನಾಧಿಕಾರಿ ಶಾಂತವೀರ ಶಿವಪ್ಪ ಹಾಗೂ ಅಧಿಕ ಮಹಾ ವಿಲೇಖಾನಾಧಿಕಾರಿ (ನ್ಯಾಯಾಂಗ) ಶ್ರೀ. ಜೆ.ಆರ್‌.ಮೆಂಡೋನ್ಸಾರ, ಕೇಂದ್ರ ಸರ್ಕಾರದ ಡೆಪ್ಯೂಟಿ ಸಾಲಿಸಿಟರ ಜನರಲ್, ರಾಜ್ಯ ಸರ್ಕಾರ ವಕೀಲರು, ರಾಜ್ಯ ಪಬ್ಲಿಕ ಪ್ರಾಸಿಕ್ಯುಟರ ಮತ್ತು ವಕೀಲರ ಸಂಘದ ಪದಾಧಿಕಾರಿಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದ ಸಿಬ್ಬಂದಿಗಳು ಮತ್ತು ವಕೀಲರು ಹಾಜರಿದ್ದರು.