ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ 70ನೇ ಹುಟ್ಟುಹಬ್ಬ; ಉಚಿತ ಮಹಾ ಆರೋಗ್ಯ ಶಿಬಿರ
ಕಾಗವಾಡ 29: ಮಾಜಿ ಸಚಿವರು ಹಾಗೂ ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಜ.31 ಮತ್ತು ಫೆ. 01 ರಂದು ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಕಾರ್ಖಾನೆಯ ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ಬೃಹತ ಮಹಾ ಆರೋಗ್ಯ ತಪಾಸನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಂತ ಪಾಟೀಲ ಫೌಂಡೇಶನ್‌ನ ಅಧ್ಯಕ್ಷ ಶ್ರೀನಿವಾಸ ಪಾಟೀಲ ತಿಳಿಸಿದ್ದಾರೆ. ಅವರು, ಬುಧವಾರ ದಿ.29 ರಂದು ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಅಥಣಿ ಶುಗರ್ಸ್ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಕಾಗವಾಡ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರ 70ನೇ ಜನ್ಮದಿನದ ನಿಮಿತ್ಯ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಮತ್ತು ಉಷಃಕಾಲ ಅಭಿನವ ಆಸ್ಪತ್ರೆ ಹಾಗೂ ನಂದಾದೀಪ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಮಹಾಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸಾ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಈ ಶಿಬಿರದಲ್ಲಿ ಮಹಿಳೆಯರಿಗಾಗಿ ಮಹಿಳಾ ವೈದ್ಯರಿಂದ ಪ್ರತ್ಯೇಕ ತಪಾಸನೆ ಕೇಂದ್ರದ ಸೌಲಭ್ಯವಿದ್ದು, ಶಿಬಿರಕ್ಕೆ ಆಗಮಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತೆಗೆದುಕೊಂಡು ಬರಬೇಕೆಂದು ತಿಳಿಸಿದ್ದಾರೆ.