ಶಹಪೂರ ಗ್ರಾಮದಲ್ಲಿ 24*7 ಕುಡಿಯುವ ನೀರು ಸರಬರಾಜು: ಘೋಷಣೆ

24*7 drinking water supply in Shahpur village: Announcement

ಶಹಪೂರ ಗ್ರಾಮದಲ್ಲಿ 24*7 ಕುಡಿಯುವ ನೀರು ಸರಬರಾಜು: ಘೋಷಣೆ 

ಕೊಪ್ಪಳ 09: ಜಲಜೀವನ್ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಹಪೂರ ಗ್ರಾಮವನ್ನು 24*7 ಕುಡಿಯುವ ನೀರು ಸರಬರಾಜು ಗ್ರಾಮವೆಂದು ಬುಧವಾರ ಘೋಷಣೆ ಮಾಡಲಾಯಿತು.    

ಕೊಪ್ಪಳ ಸಂಸದರಾದ ಕೆ.ರಾಜಶೇಖರ್ ಹಿಟ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸಿ, ಶಹಾಪುರ ಗ್ರಾಮವು ದಿನದ 24ಗಂಟೆ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದೆ ಎಂದು ಘೋಷಿಸಿದರು. ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 700 ಗ್ರಾಮಗಳಲ್ಲಿ ಜೆ.ಜೆ.ಎಂ. ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಕಾಮಗಾರಿಗಳು ಸರಿಯಾದ ಕ್ರಮದಲ್ಲಿ ಅನುಷ್ಠಾನವಾಗುತ್ತಿಲ್ಲ ಎಂಬ ಕೂಗುಗಳು ಕೇಳಿ ಬರುತ್ತಿದ್ದವು. ಈ ಸಮಸ್ಯೆಗಳನ್ನು ಹೋಗಲಾಡಿಸಲು ವಿಶೇಷ ಕ್ರಮ ಕೈಗೊಂಡು ಪ್ರತಿ ಗ್ರಾಮದಲ್ಲಿ ಯೋಜನೆಯನ್ನು ಸಮರ​‍್ಕವಾಗಿ ಅನುಷ್ಠಾನಗೊಳಸಲಾಗುತ್ತಿದೆ ಎಂದರು.  

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೋಳೂರು ಗ್ರಾಮವನ್ನು 24*7 ನೀರು ಸರಬರಾಜು ಗ್ರಾಮ ಎಂದು ಘೋಷಣೆ ಮಾಡಲಾಗಿದೆ. ಇದರ ಭಾಗವಾಗಿ ಶಹಾಪುರನ್ನು ಎರಡನೆಯ ಗ್ರಾಮವಾಗಿ ಘೋಷಿಸಿರುವುದಕ್ಕೆ ಅತ್ಯಂತ ಸಂತೋಷವಾಗುತ್ತಿದೆ. ಎಲ್ಲಾ ಗ್ರಾಮಗಳಲ್ಲಿ ದಿನದ 24ಗಂಟೆ ನೀರು ಸರಬರಾಜು ಮಾಡಬೇಕಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಜೆಜೆಎಂ ಕಾಮಗಾರಿಗಳನ್ನು ಗುಣಮಟ್ಟದ ಜೊತೆಗೆ ತ್ವರಿತವಾಗಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ವಾರದಲ್ಲಿ ಒಂದು ಗ್ರಾಮವನ್ನು 24*7 ಗ್ರಾಮ ಎಂದು ಘೋಷಣೆ ಮಾಡಲು ಕ್ರಮ ವಹಿಸಬೇಕು. ನೀರು ಮಿತವಾಗಿ ಬಳಸಬೇಕು ಹಾಗೂ ಈ ವ್ಯವಸ್ಥೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಸದರು ಸೂಚನೆ ನೀಡಿದರು.  

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, 24*7 ನೀರು ಸರಬರಾಜು ಗ್ರಾಮ ಎಂದು ಘೋಷಣೆ ಮಾಡಲಾದ ಶಹಾಪುರ ಗ್ರಾಮದ ಗ್ರಾಮಸ್ಥರು ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಮಾನವ ದೈನಂದಿನ ಜೀವನಕ್ಕೆ ನೀರು ಅವಶ್ಯಕವಾಗಿರುವ ಸಂಪನ್ಮೂಲವಾಗಿದ್ದು, ನೀರನ್ನು ಮಿತವಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿ ಮನೆಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಗ್ರಾಮದ ಸ್ವಚ್ಛತೆಗೂ ಹೆಚ್ಚಿನ ಗಮನ ನೀಡಬೇಕು ಎಂದರು.  

ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು  ಮಾತನಾಡಿ, ಗ್ರಾಮದ ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸ್ವಸಹಾಯ ಸಂಘಗಳ ಬಳಕೆ ಮಾಡಿಕೊಂಡು ನಿರ್ವಹಿಸಬೇಕು. ನೀರಿನ ಕರ ವಸೂಲತಿಯ ಮೇಲೆ ಶೇ.10ರಷ್ಟು ಕಮಿಷನ್ ನೀಡಬೇಕು ಎಂದು ಸಲಹೆ ನೀಡಿದರು. 

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಮಹೇಶ್ ಶಾಸ್ತ್ರಿ ಅವರು ಮಾತನಾಡಿ, ದಿನದ 24 ಗಂಟೆ ನೀರು ಸರಬರಾಜು ಯೋಜನೆಯಿಂದ ಪ್ರತಿ ಮನೆಗೆ ಮೀಟರ್ ಅಳವಡಿಸಲಾಗಿದ್ದು, ದಿನ ನಿತ್ಯ ಪ್ರತಿ ವ್ಯಕ್ತಿಗೆ 55 ಲೀಟರ್ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ನೀರು ಪೂರೈಕೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸ್ವಸಹಾಯ ಸಂಘಗಳ ಬಳಕೆ ಮಾಡಿಕೊಳ್ಳಲಾಗುವುದು. ಸುಸ್ಥಿರ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಗಳಿಗೆ ತರಬೇತಿ ನೀಡಿ ಬಲಪಡಿಸಲಾಗಿದೆ ಹಾಗೂ ಪ್ರತಿ ನಲ್ಲಿಯಿಂದ ಒಂದು ನಿಮಿಷಕ್ಕೆ 10 ಲೀಟರ್ ನೀರು ಪೂರೈಸಲಾಗುತ್ತದೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಲಾಸ್‌ರಾವ್ ಬೋಸ್ಲೆ, ಗ್ರಾಮ ಪಂಚಾಯತ ಅಧ್ಯಕ್ಷರಾದ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷರಾದ ಮುರಳಿಧರ ಬಸಿರಾಳ, ಪಿ.ಡಿ.ಓ ಗೀತಾಕುಮಾರಿ ಧುತ್ತರಗಿ, ಡಿಪಿಎಂ ಶರಣು, ಬೆಂಗಳೂರ ಫೀಡ್ ಬ್ಯಾಕ್ ಫೌಂಡೇಶನ್ ರಾಜ್ಯ ಸಂಯೋಜಕ ಡಾ.ನಂದಕುಮಾರ, ಸಿಬ್ಬಂದಿ ಓಂಕಾರ, ರವಿಚಂದ್ರ ಹಾಗೂ ಶಶಿಕುಮಾರ ಸೇರಿದಂತೆ ಗ್ರಾಮ ಸದಸ್ಯರು, ಜಲಜೀವನ್ ಮಷಿನ್ ತಂಡದವರು, ಶಾಲಾ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.