16 ನೇ ಆಯವ್ಯಯ ಐತಿಹಾಸಿಕ ಮೈಲುಗಲ್ಲಾಗಿದೆ; ಪ್ರೊ. ಅಶೋಕ ಪಾಟೀಲ
ಕಾಗವಾಡ, 08; ಕರ್ನಾಟಕ ರಾಜ್ಯ ಸರ್ಕಾರದ 2025-26 ನೇ ಸಾಲಿನ ಆಯವ್ಯಯವು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದಂತಹ ವಾತಾವರಣವನ್ನು ಸೃಷ್ಟಿಸುವ ಗುರಿ ಹೊಂದಿದ್ದು, ತನ್ಮೂಲಕ ರಾಜ್ಯದ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 16 ನೇ ಆಯವ್ಯಯ ಐತಿಹಾಸಿಕ ಮೈಲುಗಲ್ಲಾಗಿದೆ ಎಂದು ಪ್ರೊ. ಅಶೋಕ ಪಾಟೀಲ ತಿಳಿಸಿದ್ದಾರೆ. ಅವರು, ಶುಕ್ರವಾರ ದಿ. 07 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಆಯವ್ಯಯ 2025-26 ನೇರ್ರಸಾರ ಮತ್ತು ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಹಿರಿಯ ಪ್ರಾಧ್ಯಾಪಕ ಡಾ.ಎಸ್.ಪಿ. ತಳವಾರ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಜನ ಸಾಮಾನ್ಯರ ಬಜೆಟ್ ಆಗಿದ್ದು, ಈ ಮೂಲಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇನ್ನಷ್ಟು ಗಟ್ಟಿಯಾಗಿ ನಿಲ್ಲಬಲ್ಲವು ಎಂಬುದನ್ನು ತೋರಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಎಸ್.ಎ. ಕರ್ಕಿ ವಹಿಸಿ, ಮಾತನಾಡಿದರು. ಈ ವೇಳೆ ಪ್ರೊ.ಸಾಜಿದ ಇನಾಮದಾರ, ಪ್ರೊ. ರಿತೇಶ ಮಾಳಿ ಸೇರಿದಂತೆ ಅಪಾರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಕು.ಪೂಜಾ ಮಂಡಾಗಣೆ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ ವೈ., ನಿರೂಪಿಸಿದರು. ಕು. ವೈಶಾಲಿ ಮಂಗಸೂಳೆ ವಂದಿಸಿದರು.