‘ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವ ಮನೋಭಾವವೇ ಮುಖ್ಯ’

‘ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವ ಮನೋಭಾವವೇ ಮುಖ್ಯ’ 'The spirit of participation is more important than victory in sports'

ವಿಜಯಪುರ 28: ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವ ಮನೋಭಾವವೇ ಮುಖ್ಯ. ನಿರಂತರ ಪ್ರಯತ್ನಗಳ ನಡುವೆ ಎದುರಾಗುವ ವಿಫಲತೆಗಳೇ ಕೊನೆಗೆ ಯಶಸ್ಸಿನ ಮೆಟ್ಟಿಲಾಗುತ್ತವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರ್‌ಗೌಡ ರಮತ್ನಾಳ್ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಇವರ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಿಶೋರಿ ಮತ್ತು ಕಿಶೋರ ನಾಯಕರ ಕ್ರೀಡಾ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಮಕ್ಕಳು ಸಮಾಜದಲ್ಲಿ ವಿವಿಧ ತೊಂದರೆಗಳನ್ನು ಎದುರಿಸುತ್ತಿದ್ದು, ಅವರ ಉಜ್ವಲ ಭವಿಷ್ಯಕ್ಕಾಗಿ ಪ್ರೋತ್ಸಾಹ ಮತ್ತು ತರಬೇತಿ ಅಗತ್ಯವಾಗಿದೆ. ಡಿಜಿಟಲ್ ತಂತ್ರಜ್ಞಾನ ಉಪಯುಕ್ತವಾಗಿದ್ದರೂ ಅದರ ಸುರಕ್ಷತೆ ಹಾಗೂ ಅರಿವು ಅನಿವಾರ್ಯವಾಗಿದ್ದು, ಕ್ರೀಡೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಸಮರ​‍್ಕವಾಗಿ ಬಳಸಿಕೊಂಡರೆ ಘನತೆಯ ಬದುಕು ಸಾಧ್ಯವೆಂದು ಅವರು ತಿಳಿಸಿದರು.  

ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ ಅಗತ್ಯವಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ತಂದಿರುವ ವಿವಿಧ ಯೋಜನೆಗಳ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು. ಸೋಲು ಗೆಲುವಿನ ಸೋಪಾನವಾಗಿದ್ದು, ನಕಾರಾತ್ಮಕತೆಯಿಂದ ಸಕಾರಾತ್ಮಕತೆಯ ಕಡೆಗೆ ನಮ್ಮ ನಡೆ ಇರಬೇಕು. ನಾಯಕತ್ವ ಹಾಗೂ ಜೀವನ ಸಾಧನೆಗೆ ಅಗತ್ಯವಾದ ಗುಣಗಳನ್ನು ಕಿಶೋರಾವಸ್ಥೆಯಲ್ಲೇ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ರಸಪ್ರಶ್ನೆಗಳನ್ನು ಆಯೋಜಿಸಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕಿಶೋರಿ ಹಾಗೂ ಕಿಶೋರ ನಾಯಕರಿಗಾಗಿ ಕಬ್ಬಡಿ, ಖೋ-ಖೋ, ಥ್ರೋ ಬಾಲ್, ಹ್ಯಾಂಡ್ ಬಾಲ್,  ಥಗ್‌ಆಫ್ ವಾರ್, 200 ಮೀಟರ್ ರನ್ನಿಂಗ್, ರಿಲೆ, ಉದ್ದಜಿಗಿತ ಹೀಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿಲಾಗಿತ್ತು. 

ಕಾರ್ಯಕ್ರಮದಲ್ಲಿ ಶಿಕ್ಷಣ ನಿಕಾಯದ ಡೀನ್ ಪ್ರೊ. ಸಕ್ಪಾಲ್ ಹೂವಣ್ಣ, ಕ್ರೀಡಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಜಕುಮಾರ ಮಾಲಿ ಪಾಟೀಲ್, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ, ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಜ್ಯೋತಿ ಎ. ಉಪಾದ್ಯೆ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಲಕ್ಷೀದೇವಿ ವಾಯ್, ಮುಖ್ಯಸ್ಥರು, ವಿದ್ಯಾರ್ಥಿನಿಯರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 500ಕ್ಕೂ ಹೆಚ್ಚು ಕಿಶೋರಿ ನಾಯಕಿ ಹಾಗೂ ಕಿಶೋರ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರೀಡಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಾದ ಪ್ರೀಯಂಕಾ ಪ್ರಾರ್ಥನಾಗೀತೆ ಹಾಡಿದರು, ಅಶ್ವಿನಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.