‘ದೇಶದ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ’

‘ದೇಶದ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ’ 'The education sector is of great importance in the progress of the country'


          ಬೀಳಗಿ 06: ದೇಶದ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಶಿಕ್ಷಕ ವೃತ್ತಿಯೇ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ಸಮಾಜವನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು. 

         ತಾಲೂಕಿನ ಕೊರ್ತಿ (ಆರ್‌.ಸಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ  ಜಿ.ಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಬೀಳಗಿ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರ್ತಿ (ಆರ್‌.ಸಿ) ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

           ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಪ್ರೋತ್ಸಾಹ ನೀಡಿ ಬೆಳೆಸಿದರೆ ಮಾತ್ರ ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲಿಕ್ಕೆ ಸಾಧ್ಯವಾಗುತ್ತದೆ ಮತ್ತು ಇತಿಹಾಸದ ಮಹತ್ವದ ಘಟನೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬಹುದು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಸಾಕಷ್ಟು ಸೌಲಭ್ಯಗಳನ್ನು, ತಂದಿದೆ. ಶಾಲೆಗಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಪೌಷ್ಟಿಕ ಆಹಾರ ಯೋಜನೆಯನ್ನು ಜಾರಿಗೆ ತರಲಾಗಿದೆ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ದಡ್ಡ ಆಂತ ಪದ ಬಳಕೆ ಮಾಡಬೇಡಿ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಬದಲಾಗಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು ಎಂದರು.