‘ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವುದಕ್ಕೆ ಆಧ್ಯಾತ್ಮ ಸಾಧನೆ ನೆರವಾಗುತ್ತದೆ’
'Spiritual achievement helps one move forward on the path of success'
ವಿಜಯಪುರ 23: ಪ್ರಸ್ತುತ ಸನ್ನಿವೇಶದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಯಶಸ್ವಿಯಾಗುವುದಕ್ಕೆ ಆಧ್ಯಾತ್ಮಿಕ ಸಾಧನೆಯು ಅತ್ಯಂತ ಸಹಾಯಕಾರಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶಿಸ್ತನ್ನು ರೂಢಿಸಿಕೊಳ್ಳುವುದಕ್ಕೆ ಧ್ಯಾನ ಹಾಗೂ ಯೋಗಸಾಧನೆಯನ್ನು ಮಾಡಬೇಕು. ಆಗ ಮಾತ್ರ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವುದಕ್ಕೆ ಸುಲಭವಾಗುತ್ತದೆ ಎಂದು ಬೆಳಗಾವಿಯ ರಾಮಕೃಷ್ಣ ಮಿಶನ ಆಶ್ರಮದ ಪರಮ ಪೂಜ್ಯ ಮೋಕ್ಷಾತ್ಮಾನಂದಜಿ ಮಹಾರಾಜ್ ಹೇಳಿದರು.
ನಗರದ ಎಕ್ಸಲಂಟ್ ಪ. ಪೂ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ಅವರು; ವಿವೇಕವೆಂದರೆ ಮಾತೃತ್ವ, ಭ್ರಾತೃತ್ವ ಹಾಗೂ ಸಮಾನತೆಯ ತತ್ವವಾಗಿದೆ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡ ನರೇಂದ್ರರು ಸ್ವಾಮಿ ವಿವೇಕಾನಂದರಾದರು. ಹೀಗಾಗಿ ವಿದ್ಯಾರ್ಥಿಯಲ್ಲಿಯ ವಿವೇಕ ಜಾಗೃತವಾದರೆ ಅವರೂ ಸಹ ವಿವೇಕಾನಂದರಾಗಬಹುದು. ಅದಕ್ಕಾಗಿ ಏಕಾಗ್ರತೆಯನ್ನು ಸಾಧಿಸಬೇಕು.
ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಾಡುವ ಕಾರ್ಯವನ್ನು ಪರಿಪೂರ್ಣ ಹಾಗೂ ದೋಷರಹಿತವಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಅದಕ್ಕೆ ಆಧ್ಯಾತ್ಮಿಕ ಸಾಧನೆಯು ನೆರವಾಗುತ್ತದೆ. ನಿರಂತರ ಧ್ಯಾನದಿಂದ ನಿತ್ಯವೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿಯೆ ಉದ್ದಿಮೆದಾರರು ಆಧ್ಯಾತ್ಮಿಕ ಸಾಧನೆಯನ್ನು ಅಳವಡಿಸಿಕೊಂಡು ಯಶಸ್ವಿ ಉದ್ದಿಮೆದಾರರಾಗಿ ಬೆಳೆದಿದ್ದಾರೆ. ಅದೇ ರೀತಿಯಲ್ಲಿಯೇ ವಿದ್ಯಾರ್ಥಿ ಜೀವನದಲ್ಲಿಯೂ ಒಂದಷ್ಟು ಆಧ್ಯಾತ್ಮಿಕ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಬಹುದು. ಹಾಗೂ ನಿರ್ಧಿಷ್ಟ ಗುರಿಯ ಕಡೆಗೆ ಪಯಣ ಬೆಳೆಸಬಹುದು ಎಂದು ಹೇಳಿದರು.
ಬಾಯಿಪಾಠ ಮಾಡುವುದರಿಂದ ಅದು ದೀರ್ಘ ಕಾಲದ ವರೆಗೂ ನೆನಪಿನಲ್ಲಿ ಇಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿಯೇ ಮಕ್ಕಳು ನಮಗೆ ಓದಿದ್ದು ನೆನಪಿನಲ್ಲಿ ಇಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಷ್ಟೇ ಓದಿದರು ಪರೀಕ್ಷಾ ಸಮಯದಲ್ಲಿ ನೆನಪಿಗೆ ಬರುವುದಿಲ್ಲ ಎನ್ನುವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ ಏಕಾಗ್ರತೆಯ ಕೊರತೆಯಾಗಿದ್ದು ಓದುವ ಮುನ್ನ ಸಂಕಲ್ಪ ಮಾಡಿ ಓದಿದರೆ ಅದು ದೀರ್ಘವಾಗಿ ನಮ್ಮಲ್ಲಿ ಉಳಿದುಕೊಳ್ಳುತ್ತದೆ. ಯಾವುದೇ ಕೆಲಸವನ್ನಾಗಲಿ ಮನಸ್ಸಿಟ್ಟು ಮಾಡಿದಾಗ ಮಾತ್ರ ಅದಕ್ಕೊಂದು ಮೌಲ್ಯ ಬರುತ್ತದೆ. ಹೀಗಾಗಿ ಓದಿನಲ್ಲಿ ಏಕತಾನತೆಯನ್ನು ಅಳವಡಿಸಿಕೊಂಡರೆ ಓದಿದ್ದೆಲ್ಲವೂ ಅರ್ಥವಾಗುತ್ತದೆ. ಯಾವ ಸಮಯಕ್ಕೆ ಬೇಕೋ ಆ ಸಮಯಕ್ಕದು ನೆರವಿಗೆ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್‌ರಾದ ಬಸವರಾಜ ಕೌಲಗಿ; ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿದರೆ ಅವರು ದೇಶದ ಆಸ್ತಿಯಾಗಿ ಪರಿವರ್ತನೆಯಾಗುತ್ತಾರೆ. ಹೀಗಾಗಿ ಶಿಕ್ಷಣದಲ್ಲಿ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಮೌಲ್ಯವನ್ನು ಬಿತ್ತಬೇಕು. ಆ ಕಾರ್ಯವನ್ನು ಮೊದಲು ಸ್ವಾಮಿ ವಿವೇಕಾನಂದರು ಮಾಡಿದರು. ಇಂದು ಅವರ ವಿಚಾರ ಧಾರೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಮೋಕ್ಷಾತ್ಮಾನಂದಜಿ ಮಹಾರಾಜರಂತ ಪೂಜ್ಯರಿಂದ ಮಕ್ಕಳು ಮಾರ್ಗದರ್ಶನ ಪಡೆದಲ್ಲಿ ಅತ್ಯುತ್ತಮ ಬದುಕು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇವರ ವಿಚಾರಗಳು ಮಕ್ಕಳಲ್ಲಿನ ಸೂಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಅವರನ್ನು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸರಳವಾಗಿ ಹೆಜ್ಜೆ ಹಾಕುವುದಕ್ಕೆ ಸಜ್ಜು ಗೊಳಿಸುತ್ತವೆ ಎಂದು ಹೇಳಿದರು.
ಖ್ಯಾತ ಹೊಟೇಲ್ ಉದ್ದಿಮೆದಾರರಾದ ಶಾಂತೇಶ ಕಳಸಗೊಂಡ, ಭಾರತೀಯ ಶಿಕ್ಷಣ ಮಂಡಳದ ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಗುಡ್ಡದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ ಪ್ರಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ವಿಭಾಗದ ಮುಖ್ಯಸ್ಥರಾದ ಶ್ರದ್ಧಾ ಜಾಧವ ಹಾಗೂ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸದರು. ವಿದ್ಯಾರ್ಥಿ ಸಾಹಿಲ್ ಬನಸೂಡೆ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 