‘ಮನುಷ್ಯರಿಲ್ಲದ ನೆಲ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ

'Manushiya Lada Nela' poetry collection release program


 ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ 

ಸವದತ್ತಿ 10: ಮನುಷ್ಯನಲ್ಲಿ ಪ್ರೀತಿ, ದಯೆ, ಸಹನೆ, ಅನುಕಂಪ, ಸಹಬಾಳ್ವೆ, ಕರುಣೆಯಂತಹ ಗುಣಗಳಿದ್ದವರು ಮಾತ್ರ ಮನುಷ್ಯರೆನಿಸಿಕೊಳ್ಳುತ್ತಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಇವುಗಳು ಕಡಿಮೆಯಾಗಿವೆ. ನಾಗೇಶ್ ಜೆ. ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನದ ಕವಿತೆಗಳು ಮಾನವೀಯತೆಗೆ ಹಂಬಲಿಸುವ ಕನ್ನಡಿಯಾಗಿವೆ ಎಂದು ಗೋಕಾಕದ ವಿಶ್ರಾಂತ ಪ್ರಾಚಾರ್ಯರೂ ಹಾಗೂ ಜಾನಪದ ವಿದ್ವಾಂಸರೂ ಆಗಿರುವ ಡಾ.ಸಿ.ಕೆ.ನಾವಲಗಿ ನುಡಿದರು. 

ಇಲ್ಲಿನ ಕೆ.ಎಲ್‌.ಇ.ಸಂಸ್ಥೆಯ ಎಸ್‌.ವಿ.ಎಸ್‌.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಸವದತ್ತಿಯ ಸಹೃದಯ ಪ್ರತಿಷ್ಠಾನ ಸಹಯೋಗದಲ್ಲಿ ಏರಿ​‍್ಡಸಿದ ನಾಗೇಶ್ ಜೆ. ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಭಾರತವು ಹಳ್ಳಿಗಳ ದೇಶವಷ್ಟೇ ಅಲ್ಲ, ಸಮಸ್ಯೆಗಳ ದೇಶವೂ ಹೌದು. ಇಲ್ಲಿ ಜಾತಿ, ಪರಿಸರ, ಶಿಕ್ಷಣ, ಲಿಂಗ ತಾರತಮ್ಯ, ಆಹಾರ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಇಂತಹ ಸಮಸ್ಯೆಗಳ ನಿರ್ಮೂಲನೆಗಾಗಿ ಪ್ರಯತ್ನಿಸಬೇಕಾಗಿದೆ. ಇಂತಹವುಗಳನ್ನು ನಾಗೇಶ್ ಜೆ. ನಾಯಕರಂತಹ ಸಾಹಿತಿಗಳು ತಮ್ಮ ಬರವಣಿಗೆ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಕಲನದ ಎಲ್ಲ ಕವಿತೆಗಳು ನಾಗೇಶ್ ನಾಯಕ ಒಬ್ಬ ಪ್ರಬುದ್ಧ ಕವಿ ಎಂಬುದನ್ನು ಸಾಬೀತುಪಡಿಸುವುದರ ಜೊತೆಗೆ ಅವರು ಮಾನವೀಯತೆಯ ಕವಿಯಾಗಿಯೂ ಕಾಣಿಸುವಲ್ಲಿ ಸಫಲವಾಗಿವೆ. ತುಳಿತಕ್ಕೊಳಗಾದವರ ಪರ ಧ್ವನಿಯೆತ್ತುವುದರ ಮೂಲಕ ಸಮತೆಯ ಹಂಬಲಕ್ಕೆ ಹಾತೊರೆಯುವುದು ಇಲ್ಲಿನ ಕವಿತೆಗಳ ಪ್ರಧಾನ ಗುಣ. ನಾಗೇಶ್ ಜಿಲ್ಲೆಯ ಬಹುಮುಖ್ಯ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯವನ್ನು ಅವರ ಕವಿತೆಗಳು ಪ್ರತಿಬಿಂಬಿಸುತ್ತವೆ. ಮನುಷ್ಯರಿಲ್ಲದ ನೆಲ ಗಟ್ಟಿಯಾಗಿ ಉಳಿಯಬಹುದಾದ ಸಂಕಲನ ಎಂದು ಅವರು ನುಡಿದರು. 

ನೇಸರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಫ್‌. ಡಿ. ಗಡ್ಡಿಗೌಡರ ಕೃತಿ ಪರಿಚಯ ಮಾಡಿಕೊಡುತ್ತಾ ಮಾತನಾಡಿ ಮಾನವೀಯತೆಯ, ಅನುಕಂಪ ತೋರುವ ಅಂಶಗಳನ್ನು ನಾಗೇಶ್ ಜೆ.ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನದಲ್ಲಿ ಢಾಳಾಗಿ ಕಾಣಿಸುತ್ತದೆ.  

ಮನುಷ್ಯತ್ವ ಇದ್ದವರು ಮಾತ್ರ ದೇವರಾಗಲು ಸಾಧ್ಯ. ನಮ್ಮೊಳಗೆ ಹೃದಯ ಶ್ರೀಮಂತಿಕೆ, ಪ್ರೀತಿ, ಬಂಧುತ್ವ, ಸಾಮರಸ್ಯ, ಸಹಬಾಳ್ವೆಯ ಮೂಲಕ ನಾವು ಭದ್ರವಾದ ಸಮಾಜವನ್ನು ಕಟ್ಟಬೇಕಾಗಿದೆ. ಇಂತಹ ಅಂಶಗಳನ್ನು ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನ ಕೃತಿಯಲ್ಲಿ ಕಾಣುತ್ತೇವೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎನ್‌. ಆರ್‌. ಸವತಿಕರ ವಹಿಸಿದ್ದರು, ರಮ್ಯಾ ಹಿರೇಮಠ ಮತ್ತು ರಾಜೇಶ್ವ್ವರಿ ಕೊಳ್ಳಿ ಪ್ರಾರ್ಥಿಸಿದರು, ಪ್ರೊ.ಕೆ.ರಾಮರೆಡ್ಡಿ ಸ್ವಾಗತಿಸಿದರು, ಈ ವೇಳೆ ರಂಗ ನಿರ್ದೇಶಕ ಝಾಕೀರ್ ನದಾಫ್ ಮತ್ತು ಧಾರವಾಡದ ಆರ್ಟ ಪಾಯಿಂಟ್‌ನ ಶ್ರೀ ವಿಠಲ ಬಸಲಿಗುಂದಿ ಅವರನ್ನು ಸಹೃದಯ ಪ್ರತಿಷ್ಠಾನ ಮತ್ತು ಸವದತ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಾಗೇಶ್ ಜೆ. ನಾಯಕ ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ಜೆ. ನಾಯಕ ಅವರ ಕವಿತೆಗಳನ್ನು ವಿದ್ಯಾರ್ಥಿಗಳು ವಾಚನ ಮಾಡಿದರು. ಐಐಸಿ ಘಟಕದ ಅಧ್ಯಕ್ಷರಾದ ಡಾ. ಅರುಂಧತಿ ಬದಾಮಿ, ಐಕ್ಯೂಎಸಿ ಸಂಯೋಜಕರಾದ  ಎ.ಎ.ಹಳ್ಳೂರ ಉಪಸ್ಥಿತರಿದ್ದರು.  ವಚನ ಬಸಿಡೋಣಿ ನಿರೂಪಿಸಿದರು, ಡಾ. ಅರುಂಧತಿ ಬದಾಮಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ಡಾ.ವಾಯ್‌.ಎಂ. ಯಾಕೊಳ್ಳಿ, ಮೋಹನ್ ಪಾಟೀಲ,  ಮಲ್ಲಿಕಾರ್ಜುನ ಬೀಳಗಿ, ಬಸವರಾಜ ಪಟ್ಟಣಶೆಟ್ಟಿ, ಸಹೃದಯ ಪ್ರತಿಷ್ಠಾನದ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.