‘ಅವ್ವ’ನ ಹೆಸರಿನ ಕಾರ್ಯಕ್ರಮ ‘ಮಾದರಿ’

‘ಅವ್ವ’ನ ಹೆಸರಿನ ಕಾರ್ಯಕ್ರಮ ‘ಮಾದರಿ’ 'Madari' is a program named after 'Avva'.

ಗದಗ 26 : ತಮ್ಮ ಸುಖ ತ್ಯಾಗ ಮಾಡಿದ ತಾಯಿ-ತಂದೆಯರನ್ನು ವೃದ್ಧಾಶ್ರಮ ಕಾಣುವಂತಾಗಿರುವುದು ಬೇಸರದ ಸಂಗತಿ. ಆದರೆ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ ಅವ್ವ ಸೇವಾ ಟ್ರಸ್ಟ್‌ ಸ್ಥಾಪಿಸಿ ಆ ಮೂಲಕ ಸಮಾಜದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಕಾರಣೀಕರ್ತರಾಗಿರುವುದು ಮಾದರಿ ಎಂದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್  ಶ್ಲಾಘಿಸಿದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್‌ ಮಾತೋಶ್ರೀ ಗಂಗವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದಲ್ಲಿ ಮಹಿಳಾ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿಸಿರುವ 2025 ನೇ ಸಾಲಿನ ‘ದತ್ತಿ ನಿಧಿ’ ಪ್ರಶಸ್ತಿಯನ್ನು ನಗರದ ಹೊರವಲಯದಲ್ಲಿರುವ ಗ್ರಾಮ ಗಂಗೋತ್ರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತೆ ತನುಜಾ ನಾಯಕ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.  

ಮಾತೋಶ್ರೀ ಗುರುವ್ವ ಶಿವಲಿಂಗಪ್ಪ ಅವ್ವ ಹೊರಟ್ಟಿ ಈ ಕಾರ್ಯಕ್ರಮದ ನೈತಿಕ ಶಕ್ತಿ ಆಗಿದ್ದಾರೆ. ಈ ತಾಯಿಯ ಕಾಳಜಿ, ಸಂಸ್ಕಾರ ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುತ್ತಾ ಇವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವ ಸುನಂದಾ ನಾಯಕ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದರು. ಇವತ್ತಿನ ಈ ಕಾರ್ಯಕ್ರಮವೇ ಅವ್ವ ಗುರವ್ವ ಅವರ ಸಂಸ್ಕಾರ ಮತ್ತು ಚೈತನ್ಯ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.  

ನಿಜವಾದ ಅಭಿವೃದ್ಧಿ ಎಂದರೆ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವುದು ಮತ್ತು ಗ್ರಾಮೀಣ ಆರ್ಥಿಕತೆ ಬೆಳವಣಿಗೆಯೇ ನಿಜವಾದ ಅಭಿವೃದ್ಧಿ ಎನ್ನುವುದನ್ನು ನಾವು ಮರೆಯಬಾರದು ಎಂದರು. 

ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದಾಗ ನಗರ ಕೇಂದ್ರಿತ ಆರ್ಥಿಕತೆ, ದುಡಿಮೆ ಎಲ್ಲಾ ನೆಲಕಚ್ಚಿತು. ಆದರೆ, ಇಡೀ ದೇಶದ ಆರ್ಥಿಕತೆ ಪೂರ್ತಿ ನೆಲ ಕಚ್ಚದಂತೆ ಕಾಪಾಡಿದ್ದು ನಮ್ಮ ಗ್ರಾಮೀಣ ಆರ್ಥಿಕತೆ. ಸಾಸಿವೆ ಡಬ್ಬಿ, ಎಲೆ ಅಡಿಕೆ ಚೀಲದಲ್ಲಿ ಗ್ರಾಮೀಣ ಮಹಿಳೆಯರು ಕಾಪಿಡುವ, ಉಳಿತಾಯ ಮಾಡುವ ಹಣ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿದ್ದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.  

ಹೀಗಾಗಿ ಭಾರತದ ಗ್ರಾಮೀಣಾಭಿವೃದ್ಧಿಗೆ ಪತ್ರಿಕೋದ್ಯಮ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಪತ್ರಿಕೋದ್ಯಮವು ಮೇಲ್ಮಟ್ಟದ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿ, ಹಳ್ಳಿಗಳ ಜನರ ಆರೋಗ್ಯ, ಶಿಕ್ಷಣ ಮತ್ತು ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಗಮನ ಹರಿಸಬೇಕಿದೆ ಎಂದರು.  

ಮುಖ್ಯಮಂತ್ರಿಗಳು  ಯಾವುದೇ ಜಿಲ್ಲೆಯ ಏಆಕ ಸಭೆಗಳನ್ನು ನಡೆಸುವಾಗ  ಆಯಾ ಜಿಲ್ಲೆಗಳ ಗ್ರಾಮೀಣ ಬದುಕಿನ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಮೊದಲು ಗಮಿಸುತ್ತಾರೆ. ಇಂಥಾ ಪತ್ರಿಕೆಯಲ್ಲಿ,  ಇಂಥಾ ದಿನ, ಇಂಥಾ ವರದಿ ಬಂದಿದೆ ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುವುದನ್ನು ನೀವೂ ಗಮನಿಸೀರ್ತೀರಿ.  

ಕಲುಷಿತ ನೀರು ಕುಡಿದು ಸಾವನ್ನಪ್ಪಿದ ವರದಿಗಳು ಸರ್ಕಾರವನ್ನು ಎಚ್ಚರಿಸಿವೆ. ಬೆಳೆರೋಗದ ಬಗ್ಗೆ ಬಂದ ವರದಿಗಳು ಸಾವಿರಾರು ರೈತ ಕುಟುಂಬಗಳಿಗೆ ಪರಿಹಾರ ಒದಗಿಸಲು ನೆರವಾಗಿವೆ.  

ಪತ್ರಕರ್ತರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಜನರ ಸಂಕಷ್ಟಗಳನ್ನು ಆಲಿಸುವುದು, ಸ್ಟುಡಿಯೋಗಳಲ್ಲಿ ಕುಳಿತು ಚರ್ಚೆ ಮಾಡುವುದಕ್ಕಿಂತ ಹಚ್ಚು ಉಪಯುಕ್ತವಾದುದು ಎನ್ನುವುದನ್ನು ಅರಿಯಬೇಕಿದೆ ಎಂದರು.  

ಬರಗಾಲ ಮತ್ತು ಅತಿವೃಷ್ಟಿ ಹೆಸರಿನಲ್ಲಿ ಬರುವ ಅನುದಾನ ಹೇಗೆ ದುರುಪಯೋಗವಾಗುತ್ತದೆ ಎನ್ನುವುದನ್ನು ಗ್ರಾಮೀಣ ಪತ್ರಕರ್ತರು ಗಮನಿಸಿ ವರದಿ ಮಾಡಬೇಕು. ಇಂಥಾ ವರದಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದರು.  

ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರವೆಂದರೆ, ರೈತರ ಆತ್ಮಹತ್ಯೆಯ ಹಿಂದಿನ ನೈಜ ಸಾಲದ ಬಾಧೆಯನ್ನು ಹೊರಹಾಕುವುದು, ಸರ್ಕಾರದ ನೀತಿಗಳು ಕೃಷಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ವಿಶ್ಲೇಶಿಸುವುದಾಗಿದೆ ಎಂದರು. 

ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದ್ದರೆ, ಆ ಕನ್ನಡಿಯಲ್ಲಿ ಭಾರತದ 70ಅ ಜನಸಂಖ್ಯೆ ಇರುವ ಹಳ್ಳಿಗಳು ಕಾಣಿಸಬೇಕು. ಹೀಗಾಗಿ ಇಂಥಾ ವಿಶ್ಲೇಷಣೆಗಳು ಜನರ ಧ್ವನಿಯಾಗಿ ಗ್ರಾಮೀಣ ಭಾರತವನ್ನು ಬೆಳೆಸುಬೇಕು. ಜೊತೆಗೆ ಹಳ್ಳಿಗಳ ಕಲೆ, ಸಂಸ್ಕೃತಿ, ಭಾಷೆ ಮತ್ತು ಅಲ್ಲಿನ ಜನರ ದೈನಂದಿನ ಹೋರಾಟಗಳಿಗೂ ಕನ್ನಡಿ ಹಿಡಿಯಬೇಕು. ಈ ಕನ್ನಡಿಯಲ್ಲಿ ವಿಧಾನಸೌಧದಲ್ಲಿ ಕುಳಿತಿರುವ ಅಧಿಕಾರಿಗಳು ಮುಖ ನೋಡಿಕೊಳ್ಳಬೇಕು ಎಂದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ಅವರು ಅಧ್ಯಕ್ಷತೆವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ (ಪ್ರ) ಹಾಗೂ ಕುಲಸಚಿವ ಪ್ರೊ.ಸುರೇಶ ನಾಡಗೌಡರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಬಿ.ಬಿ ಅಸೂಟಿ, ಅವ್ವ ಸೇವಾ ಟ್ರಸ್ಟ ಜಿಲ್ಲಾ ಸಂಚಾಲಕ ಬಸವರಾಜ ಧಾರವಾಡ, ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತ ತನುಜಾ ನಾಯಕ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರು, ಕಾ.ನಿ.ಪ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಪತ್ರಕರ್ತರು, ವಿದ್ಯಾರ್ಥಿಗಳು ಇದ್ದರು.