ನಮ್ಮೂರ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ’-ತಡಕೋಡ ಹರಿಜನ ಕೇರಿ ಗ್ರಾಮಸ್ಥರ ಪ್ರತಿಭಟನೆ

ನಮ್ಮೂರ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ’-ತಡಕೋಡ ಹರಿಜನ ಕೇರಿ ಗ್ರಾಮಸ್ಥರ ಪ್ರತಿಭಟನೆ 'We will not allow our village schools to be closed' - Protest by Thadakoda Harijan Keri villagers

 ಧಾರವಾಡದ ತಡಕೋಡ ಹರಿಜನ ಕೇರಿ ಗ್ರಾಮಸ್ಥರು ಊರಿನ ದೇವಸ್ಥಾನದ ಎದುರು ಎಐಡಿಎ??? ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ,25 ವರ್ಷ ದಾಟಿದ ನಮ್ಮೂರ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’ ಎಂದು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎ??? ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ತಡಕೋಡ ಮಾಡೆಲ್  ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ತಡಕೋಡದ ಹರಿಜನ ಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ.60 ದಾಖಲಾತಿ ಹೊಂದಿರುವ ಈ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರವು ಬಡ ರೈತ-ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು, ತಡಕೋಡದ ಹರಿಜನ ಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ,ತಡಕೋಡದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ,ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ,ಖಾನಾಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಂಗರಕಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 5 ಶಾಲೆಗಳನ್ನು ಮುಚ್ಚಿ ತಡಕೋಡದ ಮ್ಯಾಗ್ನೆಟ್ ಶಾಲೆಗೆ ಸೇರಿಸಲಾಗುತ್ತಿದೆ. ಈ ರೀತಿ ಕೇವಲ ಧಾರವಾಡ ಜಿಲ್ಲೆಯಲ್ಲೇ 500 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಮುದಾಯದ ನಡುವೆ ಇರುವ ಊರಿನ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ತಲುಪಿಸಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳುತ್ತಿರುವ ಸರ್ಕಾರವು ಸಾರಿಗೆ ವ್ಯವಸ್ಥೆಯ ಹೊರೆಯನ್ನು ಎಸ್ ಡಿ ಎಂ ಸಿ ತಲೆಯ ಮೇಲೆ ಹೊರೆಸಿದೆ. ಮ್ಯಾಗ್ನೆಟ್ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುತ್ತದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಎಂದು ಸರ್ಕಾರದ ನಿರ್ಧಾರವನ್ನು ಖಂಡಿಸಿದರು.  

ನಂತರ ಊರಿನ ಸಾರ್ವಜನಿಕ ಶಿಕ್ಷಣ ಉಳಿಸಿ  ಹೋರಾಟ ಸಮಿತಿಯ ಉಪಾಧ್ಯಕ್ಷರಾದ ದುರ್ಗಪ್ಪ ಹಲಗಿ ಮಾತನಾಡಿ,ನಮ್ಮ ಕೇರಿಯ ಜನರೆಲ್ಲರೂ ಶೋಷಣೆಗೆ ಒಳಗಾದವರು,ಹೋರಾಟ ಮಾಡಿ ಈ ಶಾಲೆಯನ್ನು ಪಡೆದುಕೊಂಡಿದ್ದೇವೆ.ಈಗಾಗಲೇ ನಾವು ಕೀಳು ಜನ ಎಂದೆನಿಸಿಕೊಂಡಿದ್ದೇವೆ. ಈ ಶಾಲೆ ಇರುವುದರಿಂದಾಗಿ ನಮ್ಮ ಮಕ್ಕಳಾದರು ಕಲಿತು ಜ್ಞಾನ ಪಡೆದುಕೊಳ್ಳುತ್ತಿದ್ದಾರೆ.ಇವಾಗ ಸರ್ಕಾರ ಈ ಶಾಲೆಯನ್ನು ಮುಚ್ಚಿದರೆ ನಮ್ಮ ಮಕ್ಕಳು ನಮ್ಮಂತೆ ಆಗುತ್ತಾರೆ. ಯಾವುದೇ ಕಾರಣಕ್ಕೂ ಜೀವ ಹೋದರು ನಮ್ಮ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದುವರೆದು ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ.

ನಮ್ಮ ತಡಕೋಡ ಹರಿಜನ ಕೇರಿ  ಶಾಲೆಯನ್ನು ಮುಚ್ಚಿದರೆ ನಮ್ಮ ಮಕ್ಕಳನ್ನು ಖಂಡಿತ ನಾವು ತಡಕೋಡದ ಮ್ಯಾಗ್ನೆಟ್ ಶಾಲೆಗೆ  ಕಳಿಸಲು ಸಾಧ್ಯವಿಲ್ಲ ಯಾಕೆಂದರೆ ಇಲ್ಲಿಯ ಜನರೆಲ್ಲಾ ಕೆಲಸಕ್ಕೆ ಹೋದರೆ ಬರುವುದೇ ರಾತ್ರಿ ಯಾವ ಭರವಸೆಯ ಮೇಲೆ ನಾವು ಊರು ಆಚೆ ನಮ್ಮ ಮಕ್ಕಳನ್ನು ಕಳಿಸಬೇಕು. ಸರ್ಕಾರಕ್ಕೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ   ಮೂಲಭೂತ ಸೌಕರ್ಯಗಳನ್ನು ಕೊಟ್ಟು ನಮ್ಮ ಶಾಲೆಯನ್ನು ಬಲಪಡಿಸಬೇಕಿತ್ತು ಅದನ್ನು ಬಿಟ್ಟು ಮುಚ್ಚಿ ಹಾಕುತಿದ್ದಾರೆ. ಇದನ್ನು ನಮ್ಮೂರಿನ ಎಲ್ಲ ಗ್ರಾಮಸ್ಥರು ತೀವ್ರವಾಗಿ ವಿರೋಧಿಸುತ್ತೇವೆ. ನಮ್ಮ ಮಕ್ಕಳು ನಮ್ಮೂರಿನ ಶಾಲೆಯಲ್ಲಿ ಕಲಿಯುತ್ತಾರೆ.ಇಷ್ಟಾಗಿಯೂ ಸರ್ಕಾರ ನಮ್ಮ ಊರಿನ ಶಾಲೆಯನ್ನು ಮುಚ್ಚಲು ಮುಂದುವರೆದರೆ ತಡಕೋಡ ಹರಿಜನ ಕೇರಿ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಜನರ ಹೋರಾಟವನ್ನು ಎದುರಿಸಲು ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮುದಕಪ್ಪ ಮೇಲಿನಮನಿ, ಈರ​‍್ಪ ಮೇಲಿನಮನಿ, ನಾಗಪ್ಪ ಹಾದಿಮನಿ, ಯಲ್ಲಪ್ಪ ಹಲಗಿ, ಪಕೀರ​‍್ಪ ಮೇಲಿನಮನಿ, ಸಂತೋಷ್ ಮೇಲಿನಮನಿ ಹಾಗೂ  ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.