'ಉಮ್ರಾವೋ ಜಾನ್' ಸಂಗೀತ ಸಂಯೋಜಕ ಖಯ್ಯಾಮ್ ಇನ್ನಿಲ್ಲ

ಮುಂಬೈ, ಆ 20      ಬಾಲಿವುಡ್ ಖ್ಯಾತ ಸಂಗೀತ ಸಂಯೋಜಕ , ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಝಾಹಿರ್ ಖಯ್ಯಾಮ್ ಹಶ್ಮಿ ಕಳೆದ ರಾತ್ರಿ ನಿಧನರಾಗಿದ್ದಾರೆ.  ಅವರಿಗೆ 92 ವರ್ಷ ವಯಸ್ಸಾಗಿತ್ತು. ಬಾಲಿವುಡ್ ಚಿತ್ರರಂಗದಲ್ಲಿ ದಂತಕಥೆ ಎನಿಸಿದ್ದ ಅವರು, ಕಳೆದ ತಿಂಗಳ  28ರಂದು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಸಂಗೀತಗಾರ್ತಿ ಜಗಿತ್ ಕೌರ್ ಸೇರಿದಂತೆ ಅಪಾರ ಅಭಿಮಾನಿಗಳು, ಆಪ್ತರನ್ನು ಅಗಲಿದ್ದಾರೆ. ಅವರು ಕಭೀ ಕಭೀ , ಉಮ್ರಾವೊ ಜಾನ್ , ನೂರಿ , ರಝಿಯಾ ಸುಲ್ತಾನ್ ,  ಬಝಾರ್  ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.  ರಾಷ್ಟ್ರೀಯ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಖಯ್ಯಾಮ್ ಅವರು ಕಳೆದ ವಾರ ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಜುಹುವಿನ ಸುಜೋಯ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅವರ ವಕ್ತಾರ ಪ್ರೀತಮ್ ಶರ್ಮಾ ತಿಳಿಸಿದ್ದಾರೆ. ಸಂಗೀತದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅವರು 1943ರಲ್ಲಿ 17 ನೇ ವಯಸ್ಸಿನಲ್ಲಿ ಲುಧಿಯಾನದಿಂದ ತಮ್ಮ ಸಂಗೀತ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಂಗಳವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.