ನೈಜ ಘಟನೆಗಳ ಪ್ರೇರಣೆಯಿಂದ ಸಿದ್ಧವಾದ ‘ಉಗ್ರಾವತಾರ'

ಎಸ್‌.ಜಿ.ಎಸ್ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಎಸ್‌.ಜಿ.ಸತೀಶ್ ನಿರ್ಮಾಣ ಮಾಡಿರುವ ‘ಉಗ್ರಾವತಾರ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದೇ ನವೆಂಬರ್ 1ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಸಾಂಗ್, ಟ್ರೇಲರ್ ಮೂಲಕ ಸೌಂಡ್ ಮಾಡುತ್ತಿರುವ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ ಪ್ರಿಯಾಂಕ ಉಪೇಂದ್ರ. ಹೌದು ಇದರಲ್ಲಿ ಪ್ರಿಯಾಂಕ ಅವರು ಪವರ್ ಫುಲ್ ಆಫೀಸರ್ ಪಾತ್ರ ಮಾಡಿದ್ದು, ಟ್ರೇಲರ್‌ನಲ್ಲಿ ಇವರ ಕಾಕಿ ಖದರ ನೋಡಬಹುದು. ಗುರುಮೂರ್ತಿ ರಚನೆ ಮತ್ತು ನಿರ್ದೇಶನದ ’ಉಗ್ರಾವತಾರ’ ಚಿತ್ರಕ್ಕಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಈ ಸಂದರ್ಭದಲ್ಲಿ ಅವರು ‘ಟ್ರೇಲರ್‌ನಲ್ಲಿ ನಿರ್ದೇಶಕರ ಶ್ರಮ ಕಾಣಿಸುತ್ತಿದೆ. ಆದರೂ ಅವರು ದುಗುಡದಿಂದ ಇದ್ದಾರೆ. ಮೊದಲಬಾರಿ ನನಗೂ ಹಿಗೆಯೇ ಆಗಿತ್ತು. ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತಿರಾ. ಜನರ ಆರ್ಶಿವಾದ ಇದ್ದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತೆ. ಸಣ್ಣ ಪುಟ್ಟ ತಪ್ಪುಗಳು ಇರುತ್ತೆ. ಅದನ್ನು ಕ್ಷಮಿಸುವಂತ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿ ಇದೆ. ಸಿನಿಮಾ ನೋಡದೆ ಅಭಿಪ್ರಾಯ ತಿಳಿಸಬೇಡಿರೆಂದು' ಕೋರಿಕೊಂಡಿದ್ದಾರೆ.  

ಪ್ರಾರಂಭದಲ್ಲಿ ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಕಾಡಿತು ಎನ್ನುವ ಚಿತ್ರದ ನಾಯಕಿ ಪ್ರಿಯಾಂಕ ಉಪೇಂದ್ರ ‘ಭಾರತದಲ್ಲಿ ಹೆಣ್ಣಮಕ್ಕಳ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಸ್ವಯಂರಕ್ಷಣೆ, ಸುರಕ್ಷ ಆಪ್, ಪೋಲೀಸರಿಗೂ ಗೌರವ ಕೊಡಿ. ಅವರು ಸಮಾಜಕ್ಕೆ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ' ಎಂಬುದನ್ನು ಹೇಳಲಾಗಿದೆ’ ಎನ್ನುವರು. ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಸಾಮಾಜಿಕ ಕಳಕಳಿ ಇರುವಂತ ಚಿತ್ರ. ಹೆಣ್ಣಿಗೆ ಹೇಗೆ ಗೌರವ ಕೊಡಬೇಕು. ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆಯೇ ಹೊರಗಡೆಯ ಹೆಣ್ಣು ಮಕ್ಕಳನ್ನು ಕಾಣಬೇಕು ಎಂಬ ಅಂಶ ಹೇಳಲಾಗುತ್ತಿದೆ. ಸಮಾಜದಲ್ಲಿ ನಡೆದಂತ ಒಂದಿಷ್ಟು ನೈಜ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕರು ಚಿತ್ರರೂಪ ಕೊಟ್ಟಿದ್ದಾರೆ. ಚಿತ್ರದಲ್ಲಿ ಐದು ಸಾಹಸ ದೃಶ್ಯಗಳು ಇದ್ದು, ಪ್ರಿಯಾಂಕ ಅವರಿಗೆ ಆಕ್ಷನ್ ಕ್ವೀನ್ ಅಂತ ಬಿರುದು ಚಿತ್ರತಂಡ ನೀಡಿದೆ. ಅಂದಂಗೆ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದು ವಿಶೇಷ. ಚಿತ್ರದ ತಾರಾಗಣದಲ್ಲಿ ಅಜಯ್, ಸುಮನ್, ಪವಿತ್ರಾ ಲೋಕೇಶ್, ರೋಬೋ ಗಣೇಶ್, ಲತಾ, ದರ್ಶನ್ ಸೂರ್ಯ, ಲಕ್ಷೀ ಶೆಟ್ಟಿ, ಚರಣ್, ಲೀಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೃಷ್ಣ ಬಸ್ರೂರು ಸಂಗೀತ, ನಂದಕುಮಾರ್ ಛಾಯಾಗ್ರಹಣವಿದೆ.