‘ಸ್ವೇಚ್ಛಾ’ ಚಿತ್ರದ ಸುಂದರ ಹಾಡು, ಟ್ರೇಲರ್ ಬಿಡುಗಡೆ

'Swechcha' beautiful song, trailer released

ಯುವ ನಿರ್ದೇಶಕ ಸುರೇಶ್ ರಾಜು ಮೊದಲಬಾರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಸ್ವೇಚ್ಛಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮೊನ್ನೆಯಷ್ಟೇ ಈ ಚಿತ್ರದ ಟ್ರೇಲರ್ ಹಾಗೂ ಎರಡು ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುರೇಶ್ ರಾಜು ‘ಇದು 2019ರಲ್ಲಿ ಶುರುವಾದ ಕಥೆ. ಶೀರ್ಷಿಕೆಗೆ ಫ್ರೀಡಂ ಎಂದು ಅರ್ಥ ಬರುತ್ತದೆ. ಪ್ರತಿ ಪಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಥೆ ಚಿತ್ರದಲ್ಲಿದೆ. ಜನವರಿ ತಿಂಗಳಲ್ಲಿ ರೀಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ಮುಖ್ಯವಾಗಿ ಎರಡು ಕಾಲಘಟ್ಟದಲ್ಲಿ 5 ಪಾತ್ರಗಳ ಸುತ್ತ ಕಥೆ ಸಾಗುತ್ತದೆ’ ಎಂದು ಹೇಳಿದರು. ಚಿತ್ರದ ಒನ್ ಲೈನ್ ಕಥೆಯ ಬಗ್ಗೆ ಹೇಳುವುದಾದರೆ, ಇದೊಂದು ನವರಸಗಳನ್ನು ಒಳಗೊಂಡ ಒಂದು ಸುಂದರ ಪ್ರೇಮಕತೆ ಚಿತ್ರ. 90ರ ದಶಕದ ಹಾಗೂ ಈಗಿನ ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ಇದರಲ್ಲಿ ಒಬ್ಬ ಕೂಲಿ ಕೆಲಸದ ಹುಡುಗನ ಪ್ರೀತಿ ಹೇಗಿರುತ್ತೆ, ಯಾವ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ತೋರಿಸಲಾಗಿದೆ. ಜೊತೆಗೆ ತಾಯಿ-ಮಗಳ ಭಾಂದವ್ಯವನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ. 

ಸ್ಟಾರ್ ಮಸ್ತ್‌ ವಿಕ್ಟರಿ ಆರ್ಟ್ಸ್‌ ನ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಸ್ಟಾರ್ ಮಸ್ತಾನ್ ಹಾಗೂ ಕೆ.ಆರ್‌. ಮುರಹರಿ ರೆಡ್ಡಿ ಬಂಡವಾಳ ಹೂಡಿದ್ದಾರೆ. ಸುರೇಶ್ ರೆಡ್ಡಿ ಕಥೆ ಬರೆದಿರುವ ಈ ಚಿತ್ರದ ನಾಯಕನಾಗಿ ಅನ್ವಿಶ್ ನಾಯಕಿಯಾಗಿ ಪವಿತ್ರ ನಾಯಕ್ ಅಭಿನಯ ಮಾಡಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಚಿತ್ರದ ನಾಯಕ ಅನ್ವಿಶ್ ‘ಈ ಕಥೆಯನ್ನು ನಾವು ಮೊದಲು ಆರ್ಟ್‌ ಫಿಲ್ಮ್‌ ಮಾಡಲು ಪ್ಲ್ಯಾನ್ ಮಾಡಿದ್ವಿ. ನಂತರ ಬೆಳೆಯುತ್ತಾ ಕಮರ್ಷಿಯಲ್ ಸಿನಿಮಾ ಆಯ್ತು. ನಾನಿಲ್ಲಿ ಕೂಲಿ ಕೆಲಸದ ಹುಡುಗ. ಅವನು ಮಹಾರಾಣಿಯನ್ನು ಇಷ್ಟ ಪಡುತ್ತಾನೆ. ಮುಂದೆ ಎನಾಗುತ್ತದೆ ಎಂಬುದು ಸಿನಿಮಾ’ ಎನ್ನುವರು. ನಂತರ ಚಿತ್ರದ ನಿರ್ಮಾಪಕ ಹಾಗೂ ನಾಯಕಿ ತಂದೆ ಪಾತ್ರ ಮಾಡಿರುವ ಮುರಹರಿ ರೆಡ್ಡಿ ಮಾತನಾಡಿ, ‘ನನಗೆ ಸಿನಿಮಾರಂಗ ಹೊಸದು. ನಿರ್ದೇಶಕರು ನಂಗೆ ಬತ್ತದ ವ್ಯಾಪಾರದ ಸಂದರ್ಭದಲ್ಲಿ ಪರಿಚಯ ಆದವರು. ಇದೀಗ ನಿರ್ಮಾಣದ ಜೊತೆಗೆ ನಟನೆ ಕೂಡ ಮಾಡಿದ್ದೇನೆ. ಇಡೀ ತಂಡ ತುಂಬಾ ಕಷ್ಟಬಿದ್ದು ಸಿನಿಮಾ ಮಾಡಿದ್ದಾರೆ’ ಎಂದು ಹೇಳಿದರು. 

ಮತ್ತೋರ್ವ ನಿರ್ಮಾಪಕ ಸ್ಟಾರ್ ಮಸ್ತಾನ್ ‘ನಾನು ಹಲವು ತೆಲುಗು ಸಿನಿಮಾ ವಿತರಣೆ ಮಾಡಿದ್ದು, ಶಿವಣ್ಣ ಅವರ ‘ಕಿಲ್ಲಿಂಗ್ ವೀರ​‍್ಪನ್‌’ ಸಿನಿಮಾ ಹಣ ತಂದು ಕೊಟ್ಟಿತ್ತು. ಹಾಗಾಗಿ ನಾನು ಕನ್ನಡದಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುವ ಭಾವನೆ ಹೊಂದಿದ್ದೆ. ಮುಂದೆಯೂ ಕನ್ನಡದಲ್ಲಿ ಚಿತ್ರ ಮಾಡುವೆ’ ಎನ್ನುವರು. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಲೋಕಿ ತವಸ್ಯ ‘ಇದರಲ್ಲಿ ನಾನು ನಾಲ್ಕು ಸಾಂಗ್‌ಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದೇನೆ. ಒಂದು ಗೀತೆಗೆ ಗೌಸ್ ಪೀರ್ ಸಾಹಿತ್ಯವಿದ್ದು, ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿವೆ. ಇವುಗಳನ್ನು ರಾಜೇಶ್ ಕೃಷ್ಣನ್, ಅನುರಾಧ ಭಟ್, ಅನುರಾಮ್ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ’ ಎಂದು ತಿಳಿಸಿದರು. ವೇದಿಕೆಯಲ್ಲಿ ಕಥೆ ಬರೆದಿರುವ ಸುರೇಶ್ ರೆಡ್ಡಿ, ಕಲಾವಿದರಾದ ಸ್ಪಂದನ ಶ್ರೀ ಲಕ್ಷ್ಮೀ ತಮ್ಮ ಅನುಭವ ಹಂಚಿಕೊಂಡರು.