ಸಂಕಷ್ಟದಲ್ಲಿರುವ ಕಾರ್ಮಿಕರು, ಬಡವರ ನೆರವಿಗೆ ಕಾಂಗ್ರೆಸ್ ನಿಂದ 'ಸ್ಪೀಕ್ ಅಪ್ ಇಂಡಿಯಾ' ಅಭಿಯಾನ

ಮುಂಬೈ, ಮೇ 28 ,ಕೊರೋನಾ ವೈರಸ್ ಹಿಮ್ಮೆಟ್ಟಟಿಸುವ ಹಿನ್ನೆಲೆಯಲ್ಲಿ ಘೋಷಣೆಯಾದ ಲಾಕ್ ಡೌನ್ ನಿಂದ ಹಾನಿಗೊಳಗಾದ ವಲಸೆ ಕಾರ್ಮಿಕರು, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ನೆರವು ಒದಗಿಸಲು ದೇಶಾದ್ಯಂತದ 'ಸ್ಪೀಕ್ ಅಪ್ ಇಂಡಿಯಾ' ಆನ್ ಲೈನ್ ಅಭಿಯಾನ ಆರಂಭಿಸಿರುವುದಾಗಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷ ಕಂದಾಯ ಸಚಿವ ಬಾಲಸಾಹೆಬ್ ಥಾರೋಟ್ ಹೇಳಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಸಮಾಜದ ದುರ್ಬಲ ವರ್ಗದ ಧ್ವನಿಯನ್ನು ಕೇಂದ್ರ ಸರ್ಕಾರದವರೆಗೆ ತಲುಪಿಸಿ ಅವರಿಗೆ ನೆರವು ಒದಗಿಸುವ ಸಲುವಾಗಿ ಈ ಅಭಿಯಾನ ಆರಂಭಿಸಲಾಗಿದೆ ಎಂದರು. ಗುರುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್ ಮತ್ತು ಇನ್ ಸ್ಟಾಗ್ರಾಮ್ ಮೂಲಕ ನಡೆದ ಆನ್ ಲೈನ್ ಅಭಿಯಾನದಲ್ಲಿ ಪಕ್ಷದ ಹಿರಿಯ ನಾಯಕರು, ಶಾಸಕರು, ಸಂಸದರು, ಜಿಲ್ಲಾ , ತಾಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ದೇಶ ಅನಿರೀಕ್ಷಿತ ಸಂಕಷ್ಟಕ್ಕೆ ಗುರಿಯಾಗಿದ್ದು, ಲಾಕ್ ಡೌನ್ ಕಾರ್ಮಿಕರು, ಬಡವರು, ರೈತರು ಮತ್ತು ಸಣ್ಣ ಉದ್ಯಮಿಗಳನ್ನು ತೊಂದರೆಗೆ ಸಿಲುಕಿಸಿದೆ.ಆದರೆ, ಅವರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಆದ್ದರಿಂದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ 'ಸ್ಪೀಕ್ ಅಪ್' ಅಭಿಯಾನ ಆರಂಭಿಸಿದ್ದೇವೆ. ಇದು ಜನಸಾಮಾನ್ಯರಿಗೆ ತಮ್ಮ ಧ್ವನಿಯನ್ನು ತಲುಪಿಸುವ ಉತ್ತಮ ಆನ್ ಲೈನ್ ವೇದಿಕೆಯಾಗಲಿದೆ ಎಂದರು.