ವರದಿ: ಸಂತೋಷ್ ಕುಮಾರ್ ಕಾಮತ್
ಮಾಂಜರಿ 21: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ 'ಶಕ್ತಿ' ಯೋಜನೆ ಜಾರಿಯಾದ ನಂತರ ಪುರುಷರಿಗಿಂತ ಸ್ತ್ರೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ದಿನೇ ದಿನೇ ಇದರ ಬೇಡಿಕೆ ಹೆಚ್ಚಿದೆ. ಆದರೆ, ಮಹಿಳಾ ಪ್ರಯಾಣಿಕರಿಂದ ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಪುರುಷ ಪ್ರಯಾಣಿಕರು ಪೀಕಲಾಟಕ್ಕೆ ಸಿಲುಕಿದ್ದಾರೆ.
ಶಕ್ತಿ ಯೋಜನೆ'ಯ ಸಹಾಯದಿಂದ ಮಹಿಳೆಯರು ಯಾರನ್ನೂ ಅವಲಂಬಿಸದೆ ಮುಕ್ತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಿತಿಗೂ ಮೀರಿ ಜನರನ್ನು ಹತ್ತಿಸಲಾಗುತ್ತಿದೆ.
ಸಾರಿಗೆ ಸಂಸ್ಥೆಯ ಒಂದು ಬಸ್ಸಿನಲ್ಲಿ 50 ರಿಂದ 55 ಆಸನದ ವ್ಯವಸ್ಥೆ ಮಾತ್ರ ಕಲ್ಪಿಸಲಾಗಿರುತ್ತದೆ. ಆದರೆ, 80ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಪೈಕಿ 50 ರಿಂದ 60 ಮಂದಿ ಮಹಿಳಾ ಪ್ರಯಾಣಿಕರಿಂದಲೇ ಬಸ್ ತುಂಬಿರುತ್ತದೆ. ಇದರ ಪರಿಣಾಮ ಸೀಟ್ ಹಿಡಿಯುವ ಸಲುವಾಗಿ ಮಹಿಳೆಯರ ನಡುವೆ ಪರಸ್ಪರ ಜಗಳ, ಕಾದಾಟ ನಡೆಯುತ್ತಿವೆ. ಇದು ಸಹ ಪ್ರಯಾಣಿಕರಿಗೆ ಕಿರಿ-ಕಿರಿ ಉಂಟು ಮಾಡಿದೆ.
ನಿಲ್ದಾಣದಲ್ಲಿ ಬಸ್ ಹತ್ತಲು ಬರುವ ಮಹಿಳಾ ಪ್ರಯಾಣಿಕರು ಬಸ್ ಹೊರಗಿನಿಂದಲೇ ಕಿಟಕಿಯ ಮೂಲಕ ಕೈ ತೂರಿಸಿ ಸೀಟಿಗೆ ಬ್ಯಾಗ್ ಎಸೆಯುತ್ತಾರೆ. ಆದರೆ, ಮೊದಲು ಬಸ್ ಹತ್ತಿದ ಮಹಿಳೆಯರು ಸೀಟಿನ ಮೇಲಿದ್ದ ಬ್ಯಾಗ್ ಪಕ್ಕಕ್ಕಿಟ್ಟು ಕೂರುತ್ತಾರೆ. ಕೊನೆಗೆ ಬಂದ ಬ್ಯಾಗ್ ಇರಿಸಿದ್ದ ಮಹಿಳೆಯಿಂದ 'ಸೀಟಿನ ಮೇಲೆ ನಾನು ಮೊದಲು ಬ್ಯಾಗ್ ಇಟ್ಟಿದ್ದೇನೆ' ಎಂದು ಜಗಳ ಆರಂಭವಾಗುತ್ತದೆ. ಇದನ್ನು ಯಾರು ತೀರ್ಮಾನ ಮಾಡಬೇಕು ಎಂದು ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರು ಬಳಿ ಅಳಲು ತೋಡಿಕೊಂಡರು.
'ಇತ್ತೀಚೆಗೆ ಸಾರಿಗೆ ಬಸ್ಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ಬಸ್ ಹತ್ತುವ ಮೊದಲೇ ಹೊರಗಿನಿಂದ ಬ್ಯಾಗ್ ಅನ್ನು ಸೀಟಿನ ಮೇಲೆ ಎಸೆಯುತ್ತಾರೆ. ಬ್ಯಾಗ್ನಲ್ಲಿ ಬೆಲೆ ಬಾಳುವ ವಸ್ತುಗಳು, ನಗದು ಇರುತ್ತದೆ. ಈ ಬಗ್ಗೆ ಪ್ರಯಾಣಿಕರಿಗೆ ಅರಿವಿರುವುದಿಲ್ಲ. ಇದಕ್ಕಾಗಿಯೇ ಹೊಂಚು ಹಾಕಿ ಕಾದುಕುಳಿತ ಕಳ್ಳರು ತಮ್ಮ ಕೈಚಳಕ ತೋರುತ್ತಾರೆ. ಇಲ್ಲಿ ನಿರ್ವಾಹಕರನ್ನು ದೂರಿದರೆ ಏನು ಪ್ರಯೋಜನ? ಬ್ಯಾಗ್ ಇಡುವ ಮೊದಲೇ ಪ್ರಜ್ಞೆ ಇರಬೇಕು. ಈ ರೀತಿಯ ಘಟನೆಗಳು ನಡೆದ ಉದಾಹರಣೆಗಳಿವೆ' ಎನ್ನುತ್ತಾರೆ ನಿರ್ವಾಹಕರು.
ಸಾರಿಗೆ ಸಂಸ್ಥೆಯ ಪ್ರತಿ ಬಸ್ಗಳಲ್ಲಿ 2 ಸೀಟುಗಳನ್ನು ಅಂಗವಿಕಲರಿಗೇ ಮೀಸಲಿಡಬೇಕು. ಆದರೆ, ಶಕ್ತಿ ಯೋಜನೆ ಜಾರಿಯಾದ ಬಳಿಕ ಈ ರೀತಿಯ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಮಾನವೀಯತೆ ದೃಷ್ಟಿಯಿಂದಲೂ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಸೀಟ್ ಬಿಟ್ಟುಕೊಡುವುದಿಲ್ಲ. ಕೇಳಿದರೆ, 'ಸಿದ್ರಾಮಣ್ಣ ಇಡೀ ಸ್ಟೇಟಿಗೆ ಪ್ರಿ ಕೋಟ್ಯಾನೆ. ಇಲ್ಲಿ ಕೂರಬೇಡ ಅನ್ನೋದಕ್ಕೆ ನೀನು ಯಾರು? ಹೋಗಿ ಸಿದ್ರಾಮಣ್ಣನೇ ಕಕೊಂರ್ಡು ಬಾ..' ಎನ್ನುವ ಪ್ರತಿ ಉತ್ತರಕ್ಕೆ ತಬ್ಬಿಬ್ಬಾಗಿ ನಿಲ್ಲಬೇಕು'. ಆರಂಭದಲ್ಲಿ ನಿರ್ವಾಹಕರಿಂದ ನಿಯಮ ಪಾಲನೆಯ ಮಂತ್ರ ಪಠಣೆ ನಡೆಯಿತು. ಆದರೆ, ಈಗ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಯೋಜನೆಯನ್ನು ನಿಲ್ಲಿಸುತ್ತಾರೆ ಎನ್ನುವ ಸುದ್ದಿ ಆರಂಭದಲ್ಲಿ ಹಬ್ಬಿತ್ತು. ಆದ್ದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿತ್ತು. ಆದರೆ ಈಗ ಯಾವುದೇ ಒತ್ತಡ ಇಲ್ಲ.
'ಶಕ್ತಿ'ಯಿಂದ ನಿರ್ವಾಹಕರಿಗೆ ಒತ್ತಡ 'ಮಹಿಳೆಯರ ಉಚಿತ ಪ್ರಯಾಣದ 'ಶಕ್ತಿ' ಯೋಜನೆಯಿಂದ ಬಸ್ಸಿನ ನಿರ್ವಾಹಕರು ಸಮಸ್ಯೆಗೆ ಸಿಲುಕಿದ್ದಾರೆ. ಉಚಿತ ಪ್ರಯಾಣ ಎನ್ನುವ ಕಾರಣವೊಂದಕ್ಕೆ ಟಿಕೆಟ್ ಪಡೆಯದೇ ಸಂಚಾರಕ್ಕೆ ಮುಂದಾಗುತ್ತಾರೆ. ಹಬ್ಬ ಹರಿ ದಿನಗಳಲ್ಲಿ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಟಿಕೆಟ್ ಕೇಳಿ ಪಡೆಯಬೇಕು ಎನ್ನುವ ಸೌಜನ್ಯ ಕೂಡ ತೋರುವುದಿಲ್ಲ. ಮೇಲಧಿಕಾರಿಗಳು ತಪಾಸಣೆಗೆ ಬಂದಾಗ ನ್ಯೂನತೆ ಕಂಡುಬಂದರೆ ನಿರ್ವಾಹಕರ ವಿರುದ್ಧವೇ ಕ್ರಮ ಜರುಗಿಸುತ್ತಾರೆ. ಒತ್ತಡದ ನಡುವೆ ಅನೇಕ ನಿರ್ವಾಹಕರಿಗೆ ಆರೋಗ್ಯ ಸಮಸ್ಯೆಯೂ ಕಾಡಿದ್ದುಂಟು' ಎನ್ನುತ್ತಾರೆ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರು.