ನವದೆಹಲಿ, ಫೆ ೫, ನಿರ್ಭಯಾ ಪ್ರಕರಣದ ಅಪರಾಧಿಗಳು ಲಭ್ಯವಿರುವ ಕಾನೂನು ಪರಿಹಾರಗಳನ್ನು ಪಡೆದುಕೊಳ್ಳಲು ದೆಹಲಿ ಹೈಕೋರ್ಟ್ ಬುಧವಾರ ಒಂದು ವಾರದ ಅಂತಿಮ ಗಡುವು ವಿಧಿಸಿದೆ. ಈ ಗಡುವಿನ ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ದ ಹೊರಡಿಸಲಾಗಿರುವ ಡೆತ್ ವಾರೆಂಟ್ ಗಳನ್ನು ಪ್ರತ್ಯೇಕವಾಗಿ ಬದಲಾಗಿ ಏಕಕಾಲದಲ್ಲಿ ಎಲ್ಲರಿಗೂ ಜಾರಿಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
೨೦೧೨ ರಲ್ಲಿ ನಡೆದಿದ್ದ “ನಿರ್ಭಯಾ” ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆ ಜಾರಿ ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಭಾನುವಾರ ವಿಚಾರಣೆ ನಡೆಸಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಬುಧವಾರ ತೀರ್ಪು ಪ್ರಕಟಿಸಿದ್ದು, ಅಪರಾಧಿಗಳು ಸಂವಿಧಾನದ ೨೧ ನೇ ಪರಿಚ್ಚೇದದಲ್ಲಿ ಕಲ್ಪಿಸಲಾಗಿರುವ ರಕ್ಷಣೆಗಳನ್ನು ತಮ್ಮ ಕೊನೆಯ ಉಸಿರಿರುವರೆಗೆ ಬಳಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.
ಈ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಮುಖೇಶ್ ಸಿಂಗ್ ಮತ್ತು ವಿನಯ್ ಶರ್ಮಾ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಬಳಸಿಕೊಂಡಿರುವ ಕಾರಣ ಈ ಇಬ್ಬರಿಗೆ ಮರಣದಂಡನೆ ವಿಧಿಸಲು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಆದರೆ, ಈ ತಿಂಗಳ ೧ ರಂದು ಪ್ರಕರಣದ ಎಲ್ಲಾ ನಾಲ್ವರು ದೋಷಿಗಳಾದ ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಅವರ ಮರಣದಂಡನೆ ಶಿಕ್ಷೆ ಜಾರಿಗೊಳಿಸುವುದನ್ನು ವಿಚಾರಣಾ ನ್ಯಾಯಾಲಯ ಮುಂದೂಡಿತ್ತು ನ್ಯಾಯಾಲಯದ ಅದೇಶ ಪ್ರಶ್ನಿಸಿ ಕೇಂದ್ರ ಸಲ್ಲಿಸಿದ್ದ ಆರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.