ಎಎಪಿಯಿಂದ ಜನಸಂವಾದ, 'ಹೊಸ ಬೆಂಗಳೂರು' ಸಿನಿಮಾ ಪ್ರದರ್ಶನ

ಬೆಂಗಳೂರು, ಜ.13ಆಮ್ ಆದ್ಮಿ ಪಕ್ಷವು 2020ರ ಬಿಬಿಎಂಪಿ ಚುನಾವಣೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದು, ಅದರ ಅಂಗವಾಗಿ ಬೆಂಗಳೂರು ನಗರದಾದ್ಯಂತ ಜನಸಂವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ, ಪಕ್ಷದ ಮುಖಂಡ ಕಾಡುಗೋಡಿಯ ಮುನೇಂದ್ರ ಅವರ ನೇತೃತ್ವದಲ್ಲಿ ಜನಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಪಕ್ಷದ ಮುಖಂಡರು ಹಾಗೂ ನಿವೃತ್ತ  ಐಎಎಸ್‍ ಅಧಿಕಾರಿ ರೇಣುಕಾ ವಿಶ್ವನಾಥನ್, ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದೆ. ಮಹಿಳೆಯರಿಗೆ ಉಚಿತ ಬಸ್‍ ಪ್ರಯಾಣ, ಕುಡಿಯುವ ನೀರು ಪೂರೈಕೆ, 200 ಯುನಿಟ್ ವರೆಗೆ ಉಚಿತ ವಿದ್ಯುತ್‍ ಗಳಂತಹ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಅದೇ ರೀತಿಯಲ್ಲಿ ಬೆಂಗಳೂರಿನಲ್ಲೂ ಅಭಿವೃದ್ಧಿ ಪಡಿಸಲು ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬೇಕು.

ಬೆಂಗಳೂರಿನ ಜನರಿಗೋಸ್ಕರ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರದು ಎಂದು ತಿಳಿಸಿದರು. ಸಂವಾದದಲ್ಲಿ ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು, ಹಲವಾರು ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಭಾಗವಹಿಸಿ ತಮ್ಮ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಹಂಚಿಕೊಂಡರು. ಪ್ರಚಾರ ಅಭಿಯಾನದ ಕುರಿತಂತೆ ತಮ್ಮ ಸಲಹೆಗಳನ್ನು ಹಾಗೂ ಅಭಿಯಾನದ ರೂಪು ರೇಷೆಗಳ ಕುರಿತು ಪಕ್ಷದ ಮುಖಂಡರೊಂದಿಗೆ ಸಂವಾದ ನಡೆಸಿದರು.

ಸಂವಾದ ಕಾರ್ಯಕ್ರಮದ ನಂತರ ನಮ್ಮ ಕನಸಿನ ಬೆಂಗಳೂರು ಹೇಗಿರಬೇಕೆಂದು ಆಶಯಹೊಂದಿರುವ ಹಾಗೂ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮಾಡಿರುವ ಹಲವಾರು ಜನಪರ ಯೋಜನೆಗಳ ಬಗ್ಗೆ ಮಾಹಿತಿಯುಳ್ಳ 'ಹೊಸ ಬೆಂಗಳೂರು' ಕಿರುಚಿತ್ರ ಪ್ರದರ್ಶಿಸಲಾಯಿತು. ದೆಹಲಿಯ ಎಎಪಿ ಸರ್ಕಾರ ಜಾರಿಮಾಡಿರುವ ಜನಪರ ಯೋಜನೆಗಳನ್ನು ಮನಗಂಡ ಹಲವಾರು ಮಹಿಳೆಯರು ಪಕ್ಷಕ್ಕೆ ಸೇರ್ಪಡೆಯಾದರು. ಸಭೆಯಲ್ಲಿ ಪಕ್ಷದ ಮುಖಂಡರಾದ ರೇಣುಕಾ ವಿಶ್ವನಾಥನ್, ಕಾಡುಗೋಡಿ ವಾರ್ಡ್ ಅಧ್ಯಕ್ಷರಾದ ಮುನೇಂದ್ರ ಪಿ, ಪಕ್ಷದ ಹಲವಾರು ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.