ಕಿಚ್ಚ ಸುದೀಪ್ ಅಭಿನಯದ ಬಹು ನೀರೀಕ್ಷಿತ ‘ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಕ್ರಿಸ್ಮಸ್ (ಡಿ.25) ಹಬ್ಬದ ಪ್ರಯುಕ್ತ ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಟೀಸರ್, ಟ್ರೇಲರ್, ಹಾಡುಗಳಿಂದ ಗಮನ ಸೆಳೆದಿರುವ ಈ ಚಿತ್ರದ ಪ್ರೀ-ರೀಲೀಸ್ ಇವೆಂಟ್ ಇದೇ ಭಾನುವಾರ (ಡಿ.22) ಚಿತ್ರದುರ್ಗದಲ್ಲಿ ನಡೆಯಲಿದೆ. ಸಾವಿರಾರು ಜನಸಾಗರದ ಮಧ್ಯ ಅದ್ದೂರಿ ವೇದಿಕೆಯಲ್ಲಿ ಈ ಇವೆಂಟ್ ನಡೆಯುತ್ತಿರುವುದು ಸುದೀಪ್ ಅವರಿಗೆ ಉತ್ತರ ಕರ್ನಾಟಕದ ಜನರಮೇಲೆ ಇರುವ ಪ್ರೀತಿ ತೋರಿಸುತ್ತಿದೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ನಾಡಿದ್ದಾರೆ.
ಇದೊಂದು ಒಂದೇ ರಾತ್ರಿಯಲ್ಲಿ ನಡೆಯುವ ಎಮೋಷನಲ್ ಆ್ಯಕ್ಷನ್ ಕಥಾ ಹಂದರ ಒಳಗೊಂಡಿರುವ ಚಿತ್ರ. ತಾರಾಗಣದಲ್ಲಿ ಸಂಯುಕ್ತ ಹೊರನಾಡು, ಸುಧಾ ಬೆಳವಾಡಿ, ಕರಿಸುಬ್ಬು, ವಿಜಯ್ ಚಂಡೂರು, ಸುಕೃತ ವಾಗ್ಲೆ, ಉಗ್ರಂ ಮಂಜು ಮುಂತಾದವರು ಇದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಚೇತನ್ ಡಿಸೋಜ ಸಾಹಸ, ಶಿವಕುಮಾರ್ ಕಲಾ ನಿರ್ದೇಶನ, ಗಣೇಶ್ ಬಾಬು ಸಂಕಲನ, ಶ್ರೀರಾಮ್ ಕಾರ್ಯಕಾರಿ ನಿರ್ಮಾಣವಿದೆ.