ಮಾಸ್ ಜೊತೆಗೆ ಮ್ಯಾಕ್ಸಿಮಮ್ ಥ್ರಿಲ್ ನೀಡುವ ‘ಮ್ಯಾಕ್ಸ್‌'

'Max' offers maximum thrill with mass

ಆ ರಾತ್ರಿ ರಾಜಕೀಯ ವ್ಯಕ್ತಿಗಳಿಗೆ, ಗ್ಯಾಂಗ್‌ಸ್ಟರ್‌ಗಳಿಗೆ, ಪೊಲೀಸರಿಗೆ ಮುಖ್ಯವಾದ ರಾತ್ರಿ. ರಾಜಕಾರಣಿಗಳ ತಂತ್ರ ಫಲಿಸುವ ರಾತ್ರಿ. ಒಂದು ಕಡೆ ಗ್ಯಾಂಗ್‌ಸ್ಟರ್ ಗಣಿ (ತಮಿಳು ನಟ ಸುನೀಲ್) ಬರ್ತಡೇ ಪಾರ್ಟಿ ರಾತ್ರಿ. ಇನ್ನೊಂದು ಕಡೆ ಸಸ್ಪೆಂಡ್ ಆಗಿ ಮನೆಯಲ್ಲಿದ್ದ ನೇರ, ದಿಟ್ಟ, ಪವರ್‌ಫುಲ್ ಪೊಲೀಸ್ ಆಫೀಸರ್ ಅರ್ಜುನ್ (ಸುದೀಪ್) ಅಧಿಕಾರ ವಹಿಸಿಕೊಳ್ಳುವ ಹಿಂದಿನ ರಾತ್ರಿ. ಆ ರಾತ್ರಿಯಲ್ಲಿಯೇ ಆಕಸ್ಮಿಕವಾಗಿ ನಡೆದ ಘಟನೆಯಿಂದ ರಾಜಕಾರಣಿಗಳ ಪುಡಾರಿ ಮಕ್ಕಳಿಬ್ಬರನ್ನು ಅಧಿಕಾರ ವಹಿಸಿಕೊಳ್ಳುವ ಮೊದಲೇ ಅರ್ಜುನ್ ಅರೆಸ್ಟ್‌ ಮಾಡಿ, ಲಾಕಪ್‌ಗೆ ಹಾಕುತ್ತಾನೆ. ಕ್ರೈಮ್ ಬ್ಯಾಕ್‌ಗ್ರೌಂಡ್ ಇರುವ ರಾಜಕಾರಣಿಗಳ ಮಕ್ಕಳನ್ನು ಬಿಡಿ, ಇಲ್ಲಾಂದ್ರೆ ನಮ್ಮ ಫ್ಯಾಮಿಲಿಗಳಿಗೆ ಹೇಗೆಲ್ಲ ತೊಂದರೆ ಆಗುತ್ತದೆ ಎಂದು ಆ ಸ್ಟೇಷನ್‌ನ ಪೊಲೀಸ್‌ರು ಹೇಳಿದರೂ ಅರ್ಜುನ್ ಎಫ್‌.ಐ.ಆರ್ ಹಾಕುವಂತೆ ಹೇಳಿ ಮನೆಗೆ ಹೋಗುತ್ತಾನೆ. ಆ ಒಂದು ರಾತ್ರಿಯಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ‘ಮ್ಯಾಕ್ಸ್‌’ ಸಿನಿಮಾದ ಹೈಲೈಟ್‌. 

ಪ್ರಾರಂಭದಿಂದಲೂ ಕುತೂಹಲ ಮೂಡಿಸುವಂತಃ ‘ಮ್ಯಾಕ್ಸ್‌’ ಸಿನಿಮಾ ನೋಡುವ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಆಗಲ್ಲ. ಕಥೆ, ನಿರೂಪಣೆ, ಸಂಭಾಷಣೆ, ಸ್ಕ್ರೀನ್ ಪ್ಲೇ, ಛಾಯಾಗ್ರಹಣ, ಸಂಗೀತ ಹೀಗೆ ಎಲ್ಲ ವಿಭಾಗದಲ್ಲೂ ‘ಮ್ಯಾಕ್ಸ್‌’ ಅಚ್ಚುಕಟ್ಟಾದ ಚಿತ್ರ. ಈ ವರ್ಷದಲ್ಲಿ ರೀಲೀಸ್ ಆದ ಸಿನಿಮಾಗಳಲ್ಲಿ ಒಂದು ಒಳ್ಳೆಯ ಸಿನಿಮಾ ‘ಮ್ಯಾಕ್ಸ್‌’ ಎನ್ನಬಹುದು. ಜೊತೆಗೆ ಸುದೀಪ್ ಸಿನಿಮಾ ಜರ್ನಿಗೂ ಮೈಲೇಜ್ ಕೊಡುವಂತ ಚಿತ್ರ ಇದಾಗಲಿದೆ. ಚಿತ್ರದಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ಹಾಗಂತ ಇದೊಂದು ಸಂಪೂರ್ಣ ಆ್ಯಕ್ಷನ್ ಸಿನಿಮಾ ಎನ್ನುವಂತಿಲ್ಲ. ಇದರಲ್ಲಿ ಕಥೆ ಇದೆ. ಸಸ್ಪೆನ್ಸ್‌ ಇದೆ. ಥ್ರಿಲ್ ಇದೆ. ಜೊತೆಗೆ ಮನರಂಜನೆ ಕೂಡುವಂತಹ ಪಂಚಿಂಗ್ ಡೈಲಾಗ್‌ಗಳು ಇವೆ. ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳಲ್ಲಿ ಒಂದಿಲ್ಲ ಒಂದು ತಪ್ಪುಗಳನ್ನು ಪ್ರೇಕ್ಷಕ ಹುಡುಕುತ್ತಾನೆ. ಆದರೆ ‘ಮ್ಯಾಕ್ಸ್‌’ನಲ್ಲಿ ತಪ್ಪುಗಳನ್ನು ಹುಡುಕುವುದು ಕಷ್ಟ. ಅಷ್ಟು ಪರ್ಫೆಕ್ಟ್‌ ಆದ ನೀಟ್ ಸಿನಿಮಾ.  

ಇನ್ನು ಕಲಾವಿದರ ಆಯ್ಕೆ ಮತ್ತು ಅಭಿನಯದ ವಿಚಾರಕ್ಕೆ ಬಂದರೆ, ಸುದೀಪ್ ಆ್ಯಕ್ಷನ್ ಹಾಗೂ ನಟನೆಯಲ್ಲಿ ಸೂಪರ್‌. ಜೊತೆಗೆ ಪೊಲೀಸ್ ಆಗಿ ಮೈಂಡ್ ಗೇಮ್ ಆಡುವಲ್ಲಿಯೂ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ನಾಯಕಿ ಇಲ್ಲದಿದ್ದರೂ, ನಾಯಕಿಯಷ್ಟೇ ಕ್ರೈಮ್ ಪೊಲೀಸ್ ಆಫೀಸರ್, ರೂಪ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಮಹತ್ವದ ಪಾತ್ರವಹಿಸುವರು. ಇನ್ನು ವಿಲನ್ ಆಗಿ ತಮಿಳು ನಟ ಸುನೀಲ್ ಗಮನ ಸೇಳೆಯುತ್ತಾರೆ. ಉಳಿದಂತೆ ಉಗ್ರಂ ಮಂಜು, ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ, ತಮಿಳು ನಟ ಇಲವರಸು, ಜೆಜೆ ಪಾತ್ರಗಳು ಮನಸಿಗೆ ಮುದ ನೀಡುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ವರ್ಷ ನಾವು ನೋಡಿದ ಸಿನಿಮಾಗಳಲ್ಲಿ ‘ಮ್ಯಾಕ್ಸ್‌’ ಒಂದು ಸುಂದರವಾದ ಅಚ್ಚುಕಟ್ಟಾದ ನೀಟ್ ಸಿನಿಮಾ ಎನ್ನಬಹುದು.  

ಚಿತ್ರ:ಚಿತ್ರ: ಮ್ಯಾಕ್ಸ್‌ 

ನಿರ್ದೇಶನ: ವಿಜಯ್ ಕಾರ್ತಿಕೇಯ 

ನಿರ್ಮಾಣ: ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್‌ ಹಾಗೂ ಕಿಚ್ಚ ಕ್ರಿಯೇಷನ್ಸ್‌  

ಸಂಗೀತ: ಅಜನೀಶ್ ಲೋಕನಾಥ್ 

ಛಾಯಾಗ್ರಹಣ: ಶೇಖರ್ ಚಂದ್ರ 

ತಾರಾಗಣ: ಕಿಚ್ಚ ಸುದೀಪ್, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಸಂಯುಕ್ತ ಹೊರನಾಡು, ಸುಧಾ ಬೆಳವಾಡಿ, ಕರಿಸುಬ್ಬು, ವಿಜಯ್ ಚಂಡೂರು, ಸುಕೃತ ವಾಗ್ಲೆ, ಉಗ್ರಂ ಮಂಜು ಮುಂತಾದವರು. 

ಶಿವಲಿಂಗಪ್ಪ ಗಾಣಿಗೇರ