ರಂಗಭೂಮಿ ಕೀರ್ತಿಪತಾಕೆಯನ್ನು ರಂಗಸಂಪದ ಉತ್ತುಂಗಕ್ಕೇರಿಸಿದೆ: ಶಿವಪೂಜಿ

'Madhura Mandodari' drama performance

‘ಮಧುರ ಮಂಡೋದರಿ’ ನಾಟಕ ಪ್ರದರ್ಶನ 

ಬೆಳಗಾವಿ 15- ಬೆಳಗಾವಿ ಜನರು ಕಲೆ, ಕಲಾವಿದನನ್ನು ಪ್ರೀತಿಸುವ, ಪ್ರೋತ್ಸಾಹಿಸುವ ವಾತಾವರಣವನ್ನು ನಿರ್ಮಿಸಿದ ಶ್ರೇಯಸ್ಸು ರಂಗಸಂಪದದಕ್ಕೆ ಸಲ್ಲುತ್ತದೆ. ಆಗಾಗ ಇಲ್ಲಿ ನಾಟಕಗಳು ನಡೆಯುತ್ತಿದ್ದವಾದರೂ ಬೆಳಗಾವಿಗೆ ಬೇರೆ ಬೇರೆ ನಾಟಕ ತಂಡಗಳನ್ನು ಆಹ್ವಾನಿಸುತ್ತ, ತಂಡದವರಿಂದ ಅಭಿನಯ, ನಿರ್ದೇಶನ ಅಲ್ಲದೇ ನಾಟಕೋತ್ಸವಗಳ ಮೂಲಕ ನಾಟಕ ಕ್ಷೇತ್ರದ ಕೀರ್ತಿಪತಾಕೆಯನ್ನು ಉತ್ತುಂಗಕ್ಕೇರಿಸಿದ ಶ್ರೇಯಸ್ಸು ರಂಗಸಂಪದ ವಿಶೇಷವಾಗಿ ಡಾ. ಅರವಿಂದ ಕುಲಕರ್ಣಿಯವರಿಗೆ ಸಲ್ಲುತ್ತದೆ ಎಂದು ಪತ್ರಕರ್ತ ಮುರುಗೇಶ ಶಿವಪೂಜಿ ಇಂದಿಲ್ಲಿ ಹೇಳಿದರು. 

ಭಾರತೀಯ ಜೀವವಿಮಾ ನಿಗಮ ಬೆಳಗಾವಿ ಇವರ  ಪ್ರಾಯೋಜಕತ್ವದಲ್ಲಿ ರಂಗಸಂಪದದವರು ಇದೇ ದಿನಾಂಕ 11 ದಿಂದ ದಿನಾಂಕ 14 ದವರೆಗೆ 4 ದಿನಗಳ ಕಾಲ ‘ರಂಗ ಸಂಕ್ರಮಣ’ ನಾಟಕೋತ್ಸವವನ್ನು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು. ರಂಗಬಂಡಿ ಮಳವಳ್ಳಿ ತಂಡದಿಂದ ಪ್ರದರ್ಶಿಸಲ್ಪಟ್ಟ ಏಕವ್ಯಕ್ತಿ ನಾಟಕ ಮಧುರ ಮಂಡೋದರಿ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಶಿವಪೂಜಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು. 

ಮುಂದೆ ಮಾತನಾಡುತ್ತ ಶಿವಪೂಜಿಯವರು ರಂಗಸಂಪದ ವೈವಿದ್ಯಮಯ ನಾಟಕಗಳನ್ನು ರಂಗಾಸಕ್ತರಿಗೆ ನೀಡುತ್ತಲಿದೆ ರಂಗಸಂಪದ ತಂಡವನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. 

ರಂಗಸಂಪದದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಬೆಳಗಾವಿಯ ಭಾರತೀಯ ಜೀವ ವಿಮಾ ನಿಗಮ ಮತ್ತು ನಿಜವಾಲೂ ರಂಗಭೂಮಿ ಕಳಕಳಿಯನ್ನು ಹೊಂದಿರುವ ರಂಗಾಸಕ್ತರ ತನು ಮನ ಧನದ ಸಹಾಯದಿಂದ ವರ್ಷಕ್ಕೆ ಸುಮಾರು 15 ಬಹುವೆಚ್ಚದ ನಾಟಕಗಳನ್ನು ನೀಡಲು ಸಾಧ್ಯವಾಗಿದೆ. ರಂಗಸಂಪದ ಸ್ವತಃ ನಾಟಕ ನಿರ್ಮಾಣ ಮಾಡುವ ಮೂಲಕ ಮತ್ತು ಬೇರೆ ಬೇರೆ ತಂಡಗಳಿಗೆ ಅವಕಾಶ ನೀಡುತ್ತ ಬಂದಿದೆ ಎಂದು ಹೇಳಿದರು. 

ರಾಮಾಯಣದಲ್ಲಿ ಮಂಡೋದರಿಗೆ ಆಗಿರುವ ಅನ್ಯಾಯ, ಅತ್ಯಾಚಾರ ಇಂದಿನ ಮಹಿಳೆಯರಿಗೂ ಆಗುತ್ತಲಿದೆ. ಸ್ತ್ರೀ ಶೋಷಣೆ ಅಂದಿನಂತೆ  ಇಂದು ಮುಂದೆವರೆದುಕೊಂಡು ಬಂದಿದೆ ಎಂಬ ವಿಷಯವನ್ನು ‘ಮಧುರ ಮಂಡೋದರಿ’ ನಾಟಕ ತೆರೆದಿಡುತ್ತದೆ. ಮಂಡದರಿ ಪಾತ್ರಧಾರಿ ವನಿತಾ ರಾಜೇಶ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರ ಮನವನ್ನು ಗೆದ್ದರು. ಮಧು ಮಳವಳಿಯವರ ನಿರ್ದೇಶನವಿತ್ತು. ಪದ್ಮಾ ಕುಲಕರ್ಣಿ ನಾಟಕ ರಂಗಬಂಡಿ ಮಳವಳ್ಳಿ ತಂಡವನ್ನು ಸ್ವಾಗತಿಸಿ ಶುಭಕೋರಿದರು.