‘ಹಿರಿಯ ಜೀವಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುವ ಸಂಸ್ಕೃತಿ ದೂರಾಗಲಿ’

‘ಹಿರಿಯ ಜೀವಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುವ ಸಂಸ್ಕೃತಿ ದೂರಾಗಲಿ’ 'Let's end the culture of pushing the elderly into old age homes'

ಲೋಕದರ್ಶನ ವರದಿ 

         ವಿಜಯಪುರ 19: ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ಗ್ರಹಸ್ಥರನ್ನಾಗಿ ಮಾಡಿ ಸದಾ ಮಕ್ಕಳ ಅಭಿವೃದ್ಧಿಯನ್ನೇ ಬಯಸುವ ತಂದೆ-ತಾಯಿಯರನ್ನು ನೋಡಿಕೊಳ್ಳುವ ರೀತಿ-ನೀತಿ, ನೀಡುವ ಗೌರವ, ಆರೋಗ್ಯ ರಕ್ಷಣೆ ಇಲ್ಲದಂತಾಗಿ ಬಹಳ ಕ್ರೌರ್ಯದಿಂದ ಕಾಣುವದು ಮತ್ತು ಚಿತ್ರಹಿಂಸೆ ನೀಡಿ ಮನೆ ಹೊರಗೆ ಹಾಕುವ ದೃಶ್ಯಗಳನ್ನು ಕಂಡರೆ ಮನ ಕಲುಕುವಂತಾಗುತ್ತದೆ. ಇಂದು ವಯೋವೃದ್ಧ ಹಿರಿಯ ಜೀವಿಗಳು ಕುಟುಂಬದಲ್ಲಿ ನೀಡುವ ಹಿಂಸೆ, ಅಗೌರವ ಮತ್ತು ನೀಡುವ ಕಷ್ಟಗಳಿಂದ ನೊಂದು-ಬೆಂದು, ಮನನೊಂದು ಕೊನೆಗೆ ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿಯು ನಮ್ಮ ಸಂಸ್ಕೃತಿಗೆ ಒಂದು ಕಪ್ಪುಚಿಕ್ಕೆ ಬಿದ್ದಂತಾಗಿದೆ ಎಂದು ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ನವರಸಪುರದಲ್ಲಿರುವ ಶಶಿಧಾಮ ವೃದ್ಧಾಶ್ರಮದಲ್ಲಿ ದಿನಾಂಕ: 18-05-2026 ರಂದು ನಡೆದ ಸಮರ್ಥ ಖೊದ್ನಾಪೂರ ಈತನ ಹುಟ್ಟುಹಬ್ಬದ ವಿನೂತನ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಅವರು ಮಾತನಾಡುತ್ತಾ, ಇಂದಿನ ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನ ಶೈಲಿಗಳಿಂದಾಗಿ ನಮ್ಮ ಮನ, ಮನೆ, ಕುಟುಂಬ ಮತ್ತು ಸಮಾಜದಲ್ಲಿ ಬದುಕುವ ರೀತಿ-ನೀತಿ ಮತ್ತು ಜೀವನ ಕ್ರಮ ಬದಲಾಗುತ್ತಿದೆ. ಇಂದು 'ನಾವಿಬ್ಬರು ನಮಗಿಬ್ಬರು’ (ಗಂಡ-ಹೆಂಡತಿ ಮತ್ತು ಮಕ್ಕಳು) ಎಂಬ ಸಂಕುಚಿತ ಭಾವ ಬರುತ್ತಿದೆ.

       ಆದರೆ ತಮ್ಮ ಬಹುಪಾಲು ಜೀವನವನ್ನು ಕೇವಲ ಮಕ್ಕಳ ಪಾಲನೆ-ಪೋಷಣೆ, ಕುಟುಂಬ ನಿರ್ವಹಣೆ ಮತ್ತು ಇತರರ ಶ್ರೇಯಸ್ಸಿಗಾಗಿಯೇ ಹಗಲಿರುಳು ದುಡಿದು ಇಂದು ವಯೋವೃದ್ಧರಾಗಿರುವ ಕುಟುಂಬದ ಹಿರಿಯ ಜೀವಿಗಳನ್ನು ಪ್ರೀತಿಸುವ, ಗೌರವಿಸುವ ಮತ್ತು ಉಪಚರಿಸುವ ಪರಿಯು  ಕಳವಳಕಾರಿ ಸಂಗತಿ. ನಮ್ಮ ಮಕ್ಕಳಿಗೆ ಅಜ್ಜ-ಅಜ್ಜಿ, ತಂದೆ-ತಾಯಿ ಮತ್ತು ಕುಟುಂಬದ ಹಿರಿಯ ಜೀವಿಗಳ ವೃದ್ಧಾಪ್ಯದಲ್ಲಿ ಆರೋಗ್ಯ ರಕ್ಷಣೆ, ಪಾಲನೆ-ಪೋಷಣೆ ಮತ್ತು ಸುರಕ್ಷಿತವಾಗಿ ನೋಡಿಕೊಳ್ಳಬೇಕೆಂಬ ಮೌಲ್ವಿಕ ಸಂದೇಶ ನೀಡಬೇಕು ಎಂದರು.  

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಜೀವಿ ಅನಂತ ಕುಲಕರ್ಣಿ ಅವರು, ಮಕ್ಕಳ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸುವುದರಿಂದ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ-ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಹಿರಿಯ ಜೀವಿಗಳಲ್ಲಿ ನಮಗ್ಯಾರೂ ಇಲ್ಲ ಎಂಬ ಒಂಟಿತನದ ಭಾವ ಬರದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಕೇವಲ ಶಿಕ್ಷಣವಂತರನ್ನಾಗಿಸದೇ ಅವರಲ್ಲಿ ಸಂಸ್ಕೃತಿ-ಸಂಸ್ಕಾರ ಪ್ರತಿಬಿಂಬವಾಗಿರುವ ಮತ್ತು ಅಮೂಲ್ಯವಾದ ಜೀವನಾನುಭವದ ರಸಪಾಕವನ್ನು ಹೊಂದಿರುವ ಹಿರಿಯ ಜೀವಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು. 

ಈ ಕಾರ್ಯಕ್ರಮದ ನಂತರ ವೃದ್ಧಾಶ್ರಮದಲ್ಲಿರುವ ತಾಯಂದಿರು ಮತ್ತು ಹಿರಿಯ ಜೀವಿಗಳ ಜೊತೆ ಸೇರಿ ಎಲ್ಲರೂ ಸವಿ ಭೋಜನ ಸೇವಿಸಿ, ಕೌಟುಂಬಿಕ ಸಂಬಂಧ, ಅನ್ಯೋನ್ಯತೆ, ಬಾಂಧವ್ಯ ಮತ್ತು ಸಹಬಾಳ್ವೆಯೊಂದಿಗೆ ನಾವೆಲ್ಲರೂ ಒಂದಾಗಿ ಬಾಳೋಣ ಎಂಬ ಸಂದೇಶ ನೀಡಿದರು.  ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರಿದೇವಿ ರೆಬಗೊಂಡ ಹಾಗೂ ವೃದ್ಧಾಶ್ರಮದಲ್ಲಿರುವ 15 ಕ್ಕೂ ಹೆಚ್ಚು ಹಿರಿಯ ಜೀವಿಗಳು ಉಪಸ್ಥಿತರಿದ್ದರು.