ಸ್ನೇಹ, ಪ್ರೀತಿ, ಜಾತಿ ಸಂಘರ್ಷ, ಹೊರಾಟದ ಚಿತ್ರ ‘ಕರ್ಕಿ’

ಇಂದು ರಾಜ್ಯಾದ್ಯಂತ ತೆರೆಗೆ 

ಬಹು ಭಾಷಾ ಸಿನಿಮಾ ವಿತರಕರಾಗಿ ಹೆಸರು ಮಾಡಿರುವ ಪ್ರಕಾಶ್ ಪಳನಿ ತಮ್ಮ ‘ಥರ್ಡ ಐ ಮಿಡಿಯಾ’ ಬ್ಯಾನರ್‌ನಲ್ಲಿ ಮೊದಲಬಾರಿ ಕನ್ನಡ ಚಿತ್ರ ನಿರ್ಮಾಣ ಮಾಡಿರುವ ‘ಕರ್ಕಿ’ ಸಿನಿಮಾ ಇಂದು (ಸೆ.20) ರಾಜ್ಯಾದ್ಯಂತ 60ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ನಿರ್ದೇಶನ ಮಾಡಿದ್ದಾರೆ. ಇದು ಅವರ ಕನ್ನಡದ ಮೊದಲ ಸಿನಿಮಾ. ಇತ್ತೀಚೆಗೆ ನಡೆದ ಚಿತ್ರದ ಪ್ರಿ-ರೀಲೀಸ್ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಪ್ರಕಾಶ್ ಪಳನಿ ಮಾತನಾಡಿ, ‘ಸಿನಿಮಾ ವಿತರಣೆಯನ್ನು ನಾನೆ ಮಾಡತಾ ಇದ್ದೇನೆ. ನಿರ್ದೇಶಕರು ತುಂಬಾ ತಮಿಳು, ತೆಲಗು ಸಿನಿಮಾ ಮಾಡಿದ್ದಾರೆ. ಇದೀಗ ಕರ್ಕಿ ಚಿತ್ರದಿಂದ ಕನ್ನಡಕ್ಕೆ ಬಂದಿದ್ದಾರೆ. ಈ ಚಿತ್ರದಲ್ಲಿ ಸೊಸಿಯಲ್ ಮೆಸೇಜ್ ಜೊತೆಗೆ ಕಾಲೇಜ್ ಸ್ಟೋರಿ ಇದೆ. ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿ ಬಂದಿದೆ. ನಾನು ಇದೀಗ ‘ಪಪ್ಪಿ’ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಇನ್ನೊಂದು ಸಿನಿಮಾ ಕೂಡ ಕೆಲಸ ನಡೆಯುತ್ತಿದೆ. ಮೊದಲು ಹೊಸಬರಿಗೆ ಅವಕಾಶ ಕೊಟ್ಟು ನಂತರ ಸ್ಟಾರ್‌ಗಳಿಗೆ ಸಿನಿಮಾ ಮಾಡುವ ಪ್ಲ್ಯಾನ್ ಇದೆ. ‘ಕರ್ಕಿ’ ಈವಾರ ಕರ್ನಾಟಕದಲ್ಲಿ ರೀಲೀಸ್ ಆಗಲಿದ್ದು, ಮುಂದಿನ ದಿನಗಳಲ್ಲಿ ಸಿಂಗಾಪುರ್ ಸೇರಿದಂತೆ ವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ಇದೇ ಕಥೆ ಕರಣ್ ಜೊಹಾರ್ ಸಾರತ್ಯದಲ್ಲಿ ‘ದಡಕ್ 2' ಆಗಿ ಹಿಂದಿಯಲ್ಲಿ ರೀಲೀಸ್‌ಗೆ ಸಿದ್ದವಾಗಿದೆ. ನಾನು ಇದನ್ನು ಚಾಲೆಂಜ್ ತೆಗೆದುಕೊಂಡು ಕನ್ನಡ ಸಿನಿಮಾ ಮಾಡಬೇಕು ಎಂದು ಮಾಡಿದ್ದೇನೆ. ತಮಿಳಿನ ರಿಮೇಕ್ ಆಗಿದ್ದರೂ ಸಾಕಷ್ಟು ಬದಲಾವಣೆ ಮಾಡಿಕೊಂಡು ಶೂಟ್ ಮಾಡಿದ್ದೇವೆ’ ಎನ್ನುವರು. 

ಅಂದಂಗೆ ಈ ಚಿತ್ರದ ನಾಯಕನಾಗಿ ಜಯಪ್ರಕಾಶ್ ರೆಡ್ಡಿ (ಜೆಪಿ) ಅಭಿನಯ ಮಾಡಿದ್ದಾರೆ. ಇವರಿಗೆ ಜೊಡಿಯಾಗಿ ಮಲಯಾಳಂನ ಮೀನಾಕ್ಷಿ ಬಣ್ಣ ಹಚ್ಚಿದ್ದಾರೆ. ಇದೊಂದು ಸಮಾಜಕ್ಕೆ ಸಮಾನತೆಯ ಸಂದೇಶ ನೀಡುವ ಹಾಗೂ ಜಾತಿ ವ್ಯವಸ್ಥೆಯಿಂದ ಕೆಲವು ಪ್ರದೇಶಗಳಲ್ಲಿ ನಡೀತಿರುವ ಶೋಷಣೆಗಳ ಸುತ್ತ ಸಾಗುವ ಕಥೆಯನ್ನು ಹೊಂದಿರುವ ಸಿನಿಮಾ ಎನ್ನುವ ಜೆಪಿ, ‘ಕೆಳ ವರ್ಗದ ಯುವಕನೊಬ್ಬ ತನ್ನ ಜೀವನದ ಹಾದಿಯಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ, ಅವುಗಳನ್ನೆಲ್ಲ ಮೆಟ್ಟಿ ನಿಂತು ಹೇಗೆ ಸಾಧನೆ ಮಾಡುತ್ತಾನೆ ಎಂಬುದನ್ನು ‘ಕರ್ಕಿ’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದೇವೆ. ಇಂಥ ಸಾಕಷ್ಟು ಸೂಕ್ಷ್ಮ ಅಂಶಗಳು ಈ ಸಿನೆಮಾದಲ್ಲಿದೆ. ‘ಕರ್ಕಿ’ ಎಂಬುದು ಈ ಸಿನೆಮಾದಲ್ಲಿ ಬರುವ ಕಪ್ಪು ಬಣ್ಣದ ನಾಯಿಯ ಹೆಸರು. ಈ ಸಿನೆಮಾದಲ್ಲಿ ನಾಯಿಗೂ ಒಂದು ಪ್ರಮುಖ ಪಾತ್ರವಿದೆ. ಅದು ಏನು? ಹೇಗೆ ಎಂಬುದನ್ನು ‘ಕರ್ಕಿ’ ಸಿನೆಮಾದಲ್ಲೇ ನೋಡಬೇಕು. ಬೇರೆ ಬೇರೆ ಜಾತಿಯ ಹುಡುಗ ಮತ್ತು ಹುಡುಗಿ, ಸ್ನೇಹಿತರಾಗಿಯೂ ಇರಬಹುದು, ಅವರ ಮಧ್ಯೆ ಪ್ರೀತಿಯೇ ಇರಬೇಕೆಂಬ ನಿಯಮವಿಲ್ಲ ಗೆಳೆತನ ಇದ್ದರೆ ತಪ್ಪೇನೂ ಇಲ್ಲ ಎಂಬ ಅಂಶಗಳು ಚಿತ್ರದಲ್ಲಿವೆ’ ಎಂದು ಹೇಳುವರು.  

ಶಿವಮೊಗ್ಗ ದಾವಣಗೆರೆ, ಹುಬ್ಬಳ್ಳಿ, ಬಂಗಾರಪೇಟೆ, ಕೆಜಿಎಫ್, ಬೆಂಗಳೂರು, ಚನ್ನಪಟ್ಟಣ, ಕೋಲಾರ ಹಾಗೂ ಬಾಗಲಕೋಟೆ ಸುತ್ತಮುತ್ತ ‘ಕರ್ಕಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಿ ಅಭಿನಯದ ದೃಶ್ಯವನ್ನು ತಿರುನೆಲ್ವೇಲಿಯಲ್ಲಿ ಶೂಟ್ ಮಾಡಲಾಗಿದೆ. ಚಿತ್ರದ ಉಳಿದ ತಾರಾಗಣದಲ್ಲಿ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ ಸೇರಿದಂತೆ ಅನೇಕರು ಇದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರಿಷಿಕೇಶ್ ಛಾಯಾಗ್ರಹಣ, ಶ್ರೀ ಸಂಕಲನವಿದೆ.