ನವದೆಹಲಿ , ಆ. 16 ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡುತ್ತಲೇ ಬರುತ್ತಿರುವ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಈಗ ಅವರನ್ನು ಹಾಡಿ ಹೊಗಳಿದ್ದಾರೆ.!
ಇದು ಅಚ್ಚರಿ ಎನಿಸಿದರೂ ಸತ್ಯ .! ನಂಬಲೇಬೇಕು. ಕಾರಣವಿಷ್ಟೆ ನಿನ್ನೆ ದಿನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಮಾಡಿದ ಭಾಷಣದ ಮೂರು ಸಂಗತಿಯನ್ನೂ ಅವರು ಮೆಚ್ಚಿಕೊಂಡಿದ್ದಾರೆ. ಜನಸಂಖ್ಯಾ ನಿಯಂತ್ರಣ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕು ಎಂಬ ಮೋದಿ ಅವರ ವಿಚಾರಧಾರೆಗಳನ್ನು ಚಿದಂಬರಂ ಮೆಚ್ಚಿ, ಗುಣಗಾನ ಮಾಡುವುದರ ಜೊತೆಗೆ ಬಹಿರಂಗವಾಗಿ ಸ್ವಾಗತಿಸಿದ್ದಾರೆ.
ದೇಶದ ಪ್ರಗತಿಗೆ ಜನಸಂಖ್ಯಾ ನಿಯಂತ್ರಣ ಮಾಡುವುದು, ಇಂದಿನ ತುರ್ತು ಅಗತ್ಯವಾಗಿದೆ. ಈ ವಿಚಾರದಲ್ಲಿ ಮೋದಿ ಅವರ ನಿಲುವು ಅತ್ಯಂತ ಸಮಂಜಸ ಮತ್ತು ಸಕಾಲಿಕವಾಗಿದೆ ಎಂದು ಚಿದಂಬರಂ ಗುಣಗಾನ ಮಾಡಿದ್ದಾರೆ.
ಅದೇ ರೀತಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಬಗ್ಗೆಯೂ ಮೋದಿ ಅವರ ಹೇಳಿಕೆ ಸಮಂಜಸವಾಗಿದೆ; ಭವಿಷ್ಯದ ದೃಷ್ಟಿಕೋನ ಮತ್ತು ಪರಿಸರ ಸಂರಕ್ಷಣೆ, ಸಮತೋಲವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಆಗಬಹುದಾದ ಅಪಾಯ ತಡೆಗಟ್ಟುವ ವಿಚಾರದಲ್ಲಿ ಅವರ ಈ ಹೇಳಿಕೆ ಸಕಾಲಿಕವಾಗಿದೆ. ದೇಶ ಪ್ಲಾಸ್ಟಿಕ್ ಪಿಡುಗಿನಿಂದ ಮುಕ್ತಿ ಹೊಂದಬೇಕಾಗಿದೆ ಎಂದು ಪ್ರಧಾನಿ ಅವರ ವಿಚಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕು ಎಂಬ ಮೋದಿ ಅವರ ನಿಲುವೂ ಕೂಡ ಸಮಂಜಸವಾಗಿದೆ. ದೇಶದ ಪ್ರಗತಿಯಲ್ಲಿ ಉದ್ಯಮಿಗಳ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇಶದ ಅಭಿವೃದ್ಧಿಗೆ ಕಾರಣವಾಗುವ ಜನರನ್ನು ಗೌರವಿಸಬೇಕಾಗಿರುವುದು ಎಲ್ಲರ ಹೊಣೆಯಾಗಿದೆ. ಈ ವಿಚಾರಗಳಲ್ಲಿ ಮೋದಿ ಅವರ ದೃಷ್ಟಿಕೋನ, ನಿಲುವು ಸರಿಯಾಗಿದೆ ಎಂದು ಚಿದಂಬರಂ ಸರಣಿ ಟ್ವೀಟ್ ಮೂಲಕ ಹೊಗಳಿದ್ದಾರೆ.