'ನಿಮ್ಮ ತಲೆ ಮೇಲಿನ ಕೂದಲಿಗಿಂತ ನನ್ನ ಬಳಿ ಹೆಚ್ಚು ಹಣವಿದೆ': ಯಾರ ಬಗ್ಗೆ ಅಖ್ತರ್ ಹೀಗೆಂದರು ಗೊತ್ತಾ?

ನವದೆಹಲಿ, ಜ 23, ವ್ಯವಹಾರ ಕುದುರಿಸುವ ಉದ್ದೇಶದಿಂದ  ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ಗುಣಗಾನ ಮಾಡುತ್ತಿದ್ದಾರೆಂದು ಕಿಚಾಯಿಸಿದ್ದ  ಟೀಮ್ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಅವರಿಗೆ ಮಾಜಿ ವೇಗಿ ಬೌನ್ಸರ್‌ ಎಸೆದಿದ್ದಾರೆ. 

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋದಲ್ಲಿ ಮಾತನಾಡಿರುವ ಅಖ್ತರ್‌," ವಿರೇಂದ್ರ ಸೆಹ್ವಾಗ್ ತಲೆಯಲ್ಲಿರುವ ಕೂದಲಿಗಿಂತ ನನ್ನ ಬಳಿ ಹೆಚ್ಚು ಹಣವಿದೆ,'' ಎಂದು ತಿರುಗೇಟು ನೀಡಿದ್ದಾರೆ. 

"ನಿಮ್ಮ ತಲೆಯ ಮೇಲೆ ಕೂದಲು ಇರುವುದಕ್ಕಿಂತ ನನ್ನ ಬಳಿ ಹೆಚ್ಚಿನ ಹಣವಿದೆ. ನಾನು ಅಂತಹ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದೇನೆ ಎಂದು ತಿಳಿಯಲು ನಿಮಗೆ ಸಾಧ್ಯವಾಗದಿದ್ದರೆ, ಅದನ್ನು ಅರ್ಥಮಾಡಿಕೊಳ್ಳಿ. ಶೋಯೆಬ್ ಅಖ್ತರ್ ಆಗಲು ನನಗೆ 15 ವರ್ಷಗಳು ಬೇಕಾಯಿತು," ಎಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೆ ರಾವಲ್ಪಿಂಡಿ ಎಕ್ಸ್ ಪ್ರೆಸ್ ಹೇಳಿದ್ದಾರೆ

ಆಸ್ಟ್ರೇಲಿಯಾ ವಿರುದ್ಧ ಕಳೆದ ಭಾನುವಾರ ಮುಕ್ತಾಯವಾದ ಏಕದಿನ ಸರಣಿಯ ಪ್ರತಿಯೊಂದು ಪಂದ್ಯದ ಪ್ರದರ್ಶನದ ಬಗ್ಗೆ ಕೊಹ್ಲಿ ಪಡೆಯನ್ನುಅಖ್ತರ್ ವಿಶ್ಲೇಷಿಸುತ್ತಿದ್ದರು ಹಾಗೂ  ಶ್ಲಾಘಿಸುತ್ತಿದ್ದರು. ಮೊದಲ ಪಂದ್ಯದ ಸೋಲಿನ ಹೊರತಾಗಿಯೂ ಭಾರತ ತಂಡ ಅಂತಿಮವಾಗಿ ಏಕದಿನ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತ್ತು. ಈ ಬಗ್ಗೆ ಅವರು ತಂಡವನ್ನು ಹೊಗಳಿದ್ದರು."ನಾನು ಭಾರತ ತಂಡದ ಅಭಿಮಾನಿಯಾಗಿದ್ದೇನೆ. ಆದ್ದರಿಂದ ಮೊದಲನೇ ಪಂದ್ಯದಲ್ಲಿ ಸರಿಯಾಗಿ ಆಡದ್ದರಿಂದ ಅವರನ್ನು ಟೀಕಿಸಿದ್ದೆ," ಎಂದು ಹೇಳಿದರು.

"ಸರಣಿ ಗೆಲುವಿನ ಬಳಿಕ ಪಾಕಿಸ್ತಾನದಿಂದ ಭಾರತ ತಂಡವನ್ನು ಹೊಗಳದೆ ಇರುವವರು ಇದ್ದರೆ ಹೇಳಿ? ರಮೀಝ್ ರಾಜಾ, ಶಾಹೀದ್ ಅಫ್ರಿದಿ ಸೇರಿದಂತೆ ಹಲವರು ಕೊಹ್ಲಿ ಪಡೆಯನ್ನು ಶ್ಲಾಘಿಸಿದ್ದರು. ಒಂದು ವಿಷಯವನ್ನು ಹೇಳಿ, ವಾಸ್ತವವಾಗಿ ಭಾರತ ತಂಡ ವಿಶ್ವದ ಅಗ್ರ ತಂಡ ಎನ್ನುವುದು ಸರಿಯಲ್ಲ, ಹಾಗೆಯೇ ವಿರಾಟ್ ಕೊಹ್ಲಿ ವಿಶ್ವದ ನಂ.1 ಬ್ಯಾಟ್ಸ್‌ ಮನ್ ಎನ್ನುವುದು ಸರಿಯಲ್ಲ,'' ಎಂದರು.

ಕ್ರಿಕೆಟ್ ಸಂಬಂಧಿತ ವಿಷಗಳ ಬಗ್ಗೆ ನಾನು ಮಾತನಾಡುವುದರಿಂದ ಜನರಿಗೆ ಯಾವ ಸಮಸ್ಯೆ ಉಂಟಾಗಲಿದೆ ಎಂಬ ಬಗ್ಗೆ ನನಗೆ ನಿಜಕ್ಕೂ ಅರ್ಥವಾಗಿಲ್ಲ. 15 ವರ್ಷಗಳ ಕಾಲ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದೇನೆ. ಯೂ ಟ್ಯೂಬ್ ನಲ್ಲಿ ಮಾತನಾಡುವುದರಿಂದ ನಾನು ಖ್ಯಾತಿಯಾಗಿಲ್ಲ. ಅಂದು ವಿಶ್ವದ ಅತಿ ವೇಗದ ಬೌಲರ್ ಆಗಿದ್ದೆ,'' ಎಂದು ಸಮಜಾಯಿಸಿ ನೀಡಿದ್ದಾರೆ.

ಶೊಯೆಬ್ ಅಖ್ತರ್ ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿದ್ದವರು. ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ವೇಗದ ಬೌಲರ್ ಆಗಿದ್ದರು. ಅಖ್ತರ್, ಪಾಕಿಸ್ತಾನದ ಪರ 48 ಟೆಸ್ಟ್ ಪಂದ್ಯಗಳಿಂದ 178 ವಿಕೆಟ್ ಪಡೆದಿದ್ದಾರೆ. ಜತೆಗೆ, 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್ ಕಿತ್ತಿದ್ದು, ಟಿ-20 ಕ್ರಿಕೆಟ್ ನಲ್ಲಿ 15 ಪಂದ್ಯಗಳಿಂದ 19 ವಿಕೆಟ್ ತೆಗೆದಿದ್ದಾರೆ. 2011 ಮಾರ್ಚ್ 11 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾಕ್‌ ಮಾಜಿ ವೇಗಿ ವಿದಾಯ ಹೇಳಿದ್ದರು.