ಸವದತ್ತಿಯಲ್ಲಿ ಹರ್ ಘರ್ ತಿರಂಗಾ ಬೈಕ್ ರಾಲಿ

ಸವದತ್ತಿಯಲ್ಲಿ ಹರ್ ಘರ್ ತಿರಂಗಾ ಬೈಕ್ ರಾಲಿ 'Har Ghar Tiranga' Bike Rally in Savadatti

ಸವದತ್ತಿ 14 : ಭಾರತೀಯ ಜನತಾ ಪಕ್ಷದ ಮಂಡಲ ಘಟಕದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಭವ್ಯ ಬೈಕ್ ರಾಲಿ ನಡೆಯಿತು. ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ರಾಲಿಗೆ ಚಾಲನೆ ನೀಡಿದರು. ಎಪಿಎಂಸಿ ಸರ್ಕಲ್ನಿಂದ ಆರಂಭವಾದ ರಾಲಿಯು ಕಡಕೋಳ ಬ್ಯಾಂಕ್ ಸರ್ಕಲ್, ಆನಿ ಅಗಸಿ, ಗಾಂಧಿ ಚೌಕ, ಪೋಸ್ಟ್‌ ಆಫೀಸ್, ಎಸ್‌ಎಲ್‌ಎಒ ಕ್ರಾಸ್, ಶಿವಾಜಿ ಸರ್ಕಲ್ ಹಾಗೂ ಭಗೀರಥ ಸರ್ಕಲ್ ಮೂಲಕ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು. 

ಬೈಕ್ಗಳ ಮೇಲೆ ತ್ರಿವರ್ಣ ಧ್ವಜ ಹಿಡಿದು ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ನೂರಾರು ಯುವಕರು ದೇಶಭಕ್ತಿಯ ವಾತಾವರಣ ನಿರ್ಮಿಸಿದರು. ಮಾಜಿ ಸೈನಿಕರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ವಿರೂಪಾಕ್ಷ ಮಾಮನಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿದರು. ಪ್ರತಿಯೊಬ್ಬ ಭಾರತೀಯರೂ ರಾಷ್ಟ್ರಧ್ವಜದ ಬಗ್ಗೆ ಗೌರವ ಹೊಂದಬೇಕು. ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕೃಷ್ಣಾ ತೊರಗಲ್, ಸುಭಾಸ ಗಿರಿ, ಪ್ರಕಾಶ ಲಮ್ಮಾಣಿ, ರಾಜು ಲಮ್ಮಾಣಿ, ಅರ್ಜುನ ಅಮೋಜಿ, ಉಮೇಶ ಇಟ್ಟನ್ನವರ, ಬಸವರಾಜ ಶಿಗ್ಗಾವಿ, ಉದಯ ಹೂಗಾರ, ಉಮೇಶ್ ಪೆಂಟದ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.