ಬೇಂದ್ರೆಯವರನ್ನು ಕಣ್ಣಮುಂದೆ ತಂದು ನಿಲ್ಲಿಸಿದ ‘ಗಂಗಾವತರಣ’ ನಾಟಕ

'Gangavatarana' Drama Performance

ಬೆಳಗಾವಿ 27:  ರಂಗಸಂಪದ ನಾಟಕ ತಂಡದವರು ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ದಿ. 25 ಬುಧವಾರದಂದು ಸಾಯಂಕಾಲ 6  ಗಂಟೆಗೆ ಪ್ರಸಿದ್ಧ ನಾಟಕಕಾರ ರಾಜೇಂದ್ರ ಕಾರಂತ  ಅವರು ರಂಗರೂಪಕ್ಕೆ ತಂದಿರುವ ಅವರದೇ ನಿರ್ದೇಶನದಲ್ಲಿರುವ ‘ಗಂಗಾವತರಣ’ ನಾಟಕ ಪ್ರದರ್ಶನಗೊಂಡಿತು. 

ಕವಿ ಬೇಂದ್ರೆಯವರ ಘಟನಾವಳಿಯೊಂದಿಗೆ ಸಾಹಿತ್ಯ ಕಲೆಯಿರುವುದು ಹಣ ಗಳಿಸುವುದಕ್ಕಾಗಿ ಅಲ್ಲ. ಮನಸ್ಸಿನ ಸಂತೋಷಕ್ಕಾಗಿ ಮಾತ್ರ. ಜೀವನದಲ್ಲಿ ಹಣದ ಬೆನ್ನು ಹತ್ತಿ ಹೋದ ಲೇಖಕ ಶಾಶ್ವತ ಸಾಹಿತ್ಯವನ್ನು ರಚಿಸಲಾರ ಎಂಬ ಅಂಶವನ್ನು ಎತ್ತಿ ಹಿಡಿಯುವ ನಾಟಕವೇ “ಗಂಗಾವತರಣ’ ಈ ನಾಟಕದ ನಾಯಕ ಇಂದಿನ ಸಾಹಿತ್ಯ ರಚನೆಯ ರೀತಿಗೆ ಹೊಂದಿಕೊಳ್ಳಲಾಗದೇ ಹೆಂಡತಿ ಮಕ್ಕಳಿಂದಲೇ ಅವಮಾನ. ಅವಹೇಳನಕ್ಕೆ ಗುರಿಯಾಗುತ್ತಾನೆ. ಅಂದು - ಇಂದಿನ ಸಾಹಿತ್ಯದ ತುಲನೆ ಮಾಡುತ್ತ ಈ ನಾಟಕ ಮುಂದೆವರೆಯುತ್ತದೆ. ಬೇಂದ್ರೆಯವರ ಜನಪ್ರಿಯ ಹಾಡುಗಳಾದ ‘ಕುಣಿಯೋನು ಬಾರಾ...’ ‘ಪಾತರಗಿತ್ತಿ ಪಕ್ಕಾ..’ ‘ನಾನು ಬಡವಿ ಆತ ಬಡವ’ ಮುಂತಾದ ಹಾಡುಗಳು ಈ ನಾಟಕದಲ್ಲಿವೆ. ‘ಗಂಗಾವತರಣ’ ಬೇಂದ್ರೆಯವರ ಪದ್ಯಗಳಿಗೆ ಸಂಗೀತ ಅಳವಡಿಸಿ ಅದಕ್ಕೆ ತಕ್ಕಂತೆ ನೃತ್ಯ ಸಂಯೋಜನೆ ಮಾಡಿರುವದರಿಂದ ಈ ನಾಟಕವನ್ನು ಸಂಗೀತ ನೃತ್ಯ ನಾಟಕವೆಂತಲೂ ಕರೆಯಬಹುದು.  

ಗಂಗಾವತರಣ ನಾಟಕ ಕುರಿತು ಮಾತನಾಡಿದ ಹಿರಿಯ ಸಾಹಿತಿ, ಪತ್ರಕರ್ತ ಡಾ. ಸರಜು ಕಾಟ್ಕರ್ ಕವಿ ಬೇಂದ್ರೆಯವರೊಂದಿಗೆ ಒಡನಾಟ ಹೊಂದಿರುವ ಹಲವಾರು ಜನ ಇಂದು ಇಲ್ಲಿದ್ದಾರೆ. ಅವರು ಕಂಡು ಕೇಳಿದ ಘಟನೆಗಳು ಮರುಕಳಿಸುವಂತೆ ಮಾಡಿದೆ. ಹೊಸ ಪೀಳಿಗೆಗೆ ಬೇಂದ್ರೆಯವರನ್ನು ಪರಿಚಯಿಸುವ ಮಹತ್ವದ ಕೆಲಸವನ್ನು ಈ ನಾಟಕದ ಮೂಲಕ ರಾಜೇಂದ್ರ ಕಾರಂತ ಅವರು ಮಾಡಿದ್ದಾರೆ ಎಂದು ಹೇಳಿದರು  

ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ರಂಗಸಂಪದ ಕಾರಂತರ  ಹಲವಾರು ನಾಟಕ ರಂಗಕ್ಕೆ ತಂದಿದ್ದು  ಅವರ ಎಲ್ಲ ನಾಟಕಗಳಲ್ಲಿ ಮಹಿಳಾ ಶೋಷಣೆ ವಿರುದ್ಧ ಧ್ವನಿಯಿರುವುದು ಕಂಡು ಬರುತ್ತದೆ ಅಲ್ಲದೇ ನಾಟಕದ ಕತೆ ಎಂತಹ ಗಂಭೀರ ವಿಷಯದಿಂದ ಕೂಡಿದ್ದರೂ ಬೇಸರ ಬರದಂತೆ  ನವಿರಾದ ಹಾಸ್ಯ ಅದರಲ್ಲಿ ಕೂಡಿರುತ್ತದೆ. ಒಟ್ಟಿನಲ್ಲ ಕಾರಂತರ ನಾಟಕಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು. 

ಈ ನಾಟಕ ಹಿರಿಯ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ, ಶತಾವಧಾನಿ ಗಣೇಶ ಮುಂತಾದ ಖ್ಯಾತನಾಮರ ಪ್ರಶಂಸೆಗೆ ಪಾತ್ರವಾಗಿದೆ.