ಶಿರಹಟ್ಟಿ 30: ಈ ಹಿಂದೆ ಗ್ರಾಮೀಣಾಭಿವೃದ್ಧಿ ಎಂಬುದು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತವಾಗಿತ್ತು. ಧರ್ಮಸ್ಥಳ ಸಂಸ್ಥೆ ವತಿಯಿಂದ ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾರಂಭಿಸಿದಾಗಿನಿಂದ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮರೆಡ್ಡಿ ಮರಡ್ಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬೆಳ್ಳಟ್ಟಿ ವಲಯದ ಒಕ್ಕೂಟ ಸಭೆ ಮತ್ತು ಲಾಭಾಂಶ ವಿತರಣೆ ಕಾರ್ಯಕ್ರಮ ಹಾಗೂ ಬೆಳ್ಳಟ್ಟಿ ಗ್ರಾಮದಲ್ಲಿ 60 ಸಂಘಗಳ ಒಕ್ಕೂಟಗಳ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಸಭೆ ಉದ್ಘಾಟನೆ ಮಾಡಿ ಮಾತನಾಡಿದರು.
ಯೋಜನೆಯ ಯೋಜನಾಧಿಕಾರಿ ಪುನೀತ ಓಲೆಕಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಈ ಭಾಗಕ್ಕೆ ಬಂದು 15 ವರ್ಷದಲ್ಲಿ ಮಹಿಳೆಯರನ್ನು ಸ್ವಾವಲಂಬಿಯಾಗಿ ಬದುಕಲುತರಬೇತಿ ನೀಡಿ ಸದಸ್ಯರಿಗೆ ಆರ್ಥಿಕ ವಾಗಿ ಸಬಲೀಕರಣರಾಗಲು ರಾಷ್ಟ್ರೀಕೃತ ಬ್ಯಾಂಕಿನ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಮಾಡಿಕೊಟ್ಟಿದೆ. ಮಹಿಳೆಯರಿಗೆ ಅನುಕೂಲವಾಗುವಂತೆ ಸ್ವಉದ್ಯೋಗದ ತರಬೇತಿ ನೀಡುವುದರೊಂದಿಗೆ ಸ್ವಉದ್ಯೋಗಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆ ತಾಲೂಕಿನಲ್ಲಿ ಹತ್ತು ಹಲವು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದೆ. ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಅತ್ಯುತ್ತಮ ವಾಗಿ ಬಡವರ, ಕೃಷಿಕರ ಮತ್ತು ಎಲ್ಲ ವರ್ಗದವರ ಹಿತಕಾಪಾಡಲು ಶ್ರಮಿಸುತ್ತಿದೆ, ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿರುವು ದರಿಂ ದಲೇ ಸ್ವಸಹಾಯ ಸಂಘಗಳಿಗೆ ಲಾಭಾಂಶ ಹಂಚುವ ಕೆಲಸ ಆಗುತ್ತಿದೆ. ಇವತ್ತು ಎಲ್ಲ ಮನೆ ಮನೆಯಲ್ಲಿ ಮಹಿಳೆಯರೇ ನಾಯಕತ್ವ ವಹಿಸಿದ್ದಾರೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ ಸ್ವ ಸಹಾಯ ಸಂಘಗಳ ವಾರದ ಸಭೆಯ ಬಗ್ಗೆ, ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಹಾಗೂ ಲಾಭಾಂಶ ತಂಡ ಗಳಿಗೆ ಯಾವ ರೀತಿ ಬರುತ್ತೆ ಎಂಬುದರ ಬಗ್ಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಮಾರ್ಗದರ್ಶನ ನೀಡಿದರು.
ಧರ್ಮಸ್ಥಳದ ಸಮೂಹ ಸಂಸ್ಥೆಗಳು ದಶಕಗಳಿಂದ ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದ ಜತೆ ಸಹಕರಿಸುತ್ತಿದೆ. ಗ್ರಾಮೀಣಾಭಿವೃದ್ಧಿಗಾಗಿ ಒಂದಿಲ್ಲ ಒಂದು ಚಟುವಟಿಕೆ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಮೋಹನ್ ಗುತ್ತೆಮ್ಮನವರ ಲಾಭಾಂಶ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಅಕ್ಕಮ್ಮನವರು, ಗೀತಾ, ಒಕ್ಕೂಟದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕಿ ಮಹಾದೇವಿ, ಸೇವಾ ಪ್ರತಿನಿಧಿ ರೇಣುಕಮ್ಮ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.