ಕೊವಿಡ್-19 ಪರೀಕ್ಷಾ ಕಿಟ್‌ಗಳಿಗೆ 'ದೋಷಯುಕ್ತ' ಹಣೆಪಟ್ಟಿ ಹಚ್ಚುವುದು 'ಅನ್ಯಾಯ- ಚೀನಾ

 ನವದೆಹಲಿ, ಏಪ್ರಿಲ್ 28 ಕೋವಿಡ್ -19 ವಿರುದ್ಧದ   ಹೋರಾಟದಲ್ಲಿ ಭಾರತವನ್ನು ಚೀನಾ ಪ್ರಾಮಾಣಿಕವಾಗಿ ಬೆಂಬಲಿಸುತ್ತಿದ್ದು, ಸಹಾಯ ಒದಗಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿ, ಚೀನಾದ ಉತ್ಪನ್ನಗಳನ್ನು ದೋಷಪೂರಿತ   ಎಂಬ ದೂರುಗಳ ಬಗ್ಗೆ ಕಳವಳ   ವ್ಯಕ್ತಪಡಿಸಿದೆ.ಚೀನಾದಿಂದ ಖರೀದಿಸಲಾಗಿರುವ ಕೊವಿಡ್-19 ಪರೀಕ್ಷಾ   ಕಿಟ್‌ಗಳ ಫಲಿತಾಂಶದಲ್ಲಿ   ಭಾರೀ ವ್ಯತ್ಯಾಸಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಈ ಕಿಟ್‍ಗಳನ್ನು ಬಳಸದಂತೆ ರಾಜ್ಯಗಳು ಮತ್ತು   ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇತ್ತೀಚೆಗೆ ಸೂಚಿಸಿತ್ತು.  ‘ಚೀನಾದಿಂದ ರಫ್ತು   ಮಾಡುವ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಕೆಲ ವ್ಯಕ್ತಿಗಳು ಚೀನಾ ಉತ್ಪನ್ನಗಳಿಗೆ ದೋಷಪೂರಿತ ಎಂಬ ಹಣೆಪಟ್ಟಿ ಅಂಟಿಸುತ್ತಿರುವುದು ಅನ್ಯಾಯ ಮತ್ತು   ಬೇಜವಾಬ್ದಾರಿಯಾಗಿದೆ.

ವಿಷಯವನ್ನು   ಪೂರ್ವಗ್ರಹ ಪೀಡಿತರಾಗದೆ ನೋಡಬೇಕಾಗಿದೆ ಎಂದು ಚೀನಾ ರಾಯಭಾರ ಕಚೇರಿ ವಕ್ತಾರ ಜಿ ರೋಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚೀನಾದ ಎರಡು ಕಂಪೆನಿಗಳಾದ ಗುವಾಂಗ್‌ಜೌ ವೊಂಡ್‌ಫೊ ಬಯೋಟೆಕ್ ಮತ್ತು ಲಿವ್ಜನ್   ಡಯಾಗ್ನೋಸ್ಟಿಕ್ಸ್‌ನಿಂದ ಭಾರತ ಸುಮಾರು ಐದು ಲಕ್ಷ ರಾಪಿಡ್‍ ಆಂಟಿಬಾಡಿ ಪರೀಕ್ಷಾ ಕಿಟ್‌ಗಳನ್ನು   ಖರೀದಿಸಿತ್ತು. ಕೊರೊನವೈರಸ್‍ ಸೋಂಕು ತೀವ್ರ   ಏರಿಕೆ ಕಂಡು ಬಂದ ರಾಜ್ಯಗಳಿಗೆ ಇವುಗಳನ್ನು ವಿತರಿಸಲಾಗಿತ್ತು.  ಈ ಎರಡೂ ಚೀನಾ ಕಂಪನಿಗಳು ತಯಾರಿಸುವ ಕೊವಿಡ್‍-19 ರಾಪಿಡ್‍ ಆಂಟಿಬಾಡಿ ಪರೀಕ್ಷಾ ಕಿಟ್‌ಗಳನ್ನು   ಯುರೋಪ್, ಏಷ್ಯಾ ಮತ್ತು ದಕ್ಷಿಣ ಅಮೆರಿಕದ ಅನೇಕ ದೇಶಗಳಿಗೆ ರಫ್ತು ಮಾಡಲಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿವೆ. ಪರೀಕ್ಷಾ ವರದಿಗಳ ಮೌಲ್ಯಮಾಪನ ಮತ್ತು   ಐಸಿಎಂಆರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ನಮಗೆ ತುಂಬಾ ಬೇಸರವಾಗಿದೆ ಎಂದು ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿದೆ.