ಸೆನ್ಸಾರ್ ಪಾಸ್ ಆದ ಕುಡಿತದ ಪರಿಣಾಮ ತೋರಿಸುವ ‘ದಾಸರಹಳ್ಳಿ'

ಧರ್ಮ ಕೀರ್ತಿರಾಜ್ ‘ದಾಸರಹಳ್ಳಿ'

ಧರ್ಮ ಕೀರ್ತಿರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಎಂ. ಆರ್‌. ಶ್ರೀನಿವಾಸ್ ಆ್ಯಕ್ಷನ್‌-ಕಟ್ ಹೇಳಿರುವ ‘ದಾಸರಹಳ್ಳಿ' ಸಿನಿಮಾ ರೀಲೀಸ್‌ಗೆ ರೆಡಿಯಾಗಿದೆ. ಈ ಚಿತ್ರ ಕುಡಿತದ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿದ್ದು, ಕುಡಿತದಿಂದ ಅದೆಷ್ಟೋ ಸಂಸಾರಗಳು ಬೀದಿಗೆ ಬಿದ್ದಿವೆ. ಆ ಅನುಭವ ತೀರಾ ಹತ್ತಿರದಿಂದ ಆಗಬೇಕು ಅಂದ್ರೆ ಗ್ರಾಮೀಣ ಭಾಗದಲ್ಲಿ ಓಡಾಡಿಕೊಂಡು ಬರಬೇಕು. ಕುಡಿತಕ್ಕೊಳಗಾದ ಗಂಡ, ಮಗನಿಂದ ಆ ತಾಯಿ ನರಕ ಅನುಭವಿಸುತ್ತಿರುತ್ತಾಳೆ. ಇದು ಗಂಭೀರವಾದಂತ ವಿಚಾರ. ಯುವಕರಿಗೆ ಮನದಟ್ಟಾಗಬೇಕು, ಕುಡಿತವೇ ಜೀವನ ಎಂದು ನಂಬಿರುವವರಿಗೆ ಇದರ ಅರಿವಾಗಬೇಕು. ಆಗ ಮಾತ್ರ ಒಂದಷ್ಟು ಬದಲಾವಣೆ ಸಾಧ್ಯ. ಬದುಕು ಸುಂದರವಾಗಲು ಸಾಧ್ಯ ಎಂಬ ಅದ್ಭುತ ಸಂದೇಶವನ್ನು ಸಿನಿಮಾ ಹೊಂದಿದೆ. ‘ವೈಷ್ಣವಿ ವಸುಂಧರೆ ಕ್ರಿಯೇಷನ್ಸ್‌’ ಬ್ಯಾನರ್‌ನಡಿ ಪಿ. ಉಮೇಶ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸೆನ್ಸಾರ್ ಪಾಸ್ ಆಗಿದ್ದು, ಯು/ಎ ಸರ್ಟಿಫಿಕೇಟ್ ಪಡೆದಿರುವ ಸಿನಿಮಾ ಪ್ರಚಾರ ಕಾರ್ಯ ಶುರು ಮಾಡಿದೆ. ಧರ್ಮ ಕೀರ್ತಿರಾಜ್ ಕೂಡ ಬಿಗ್ ಬಾಸ್ ಜರ್ನಿ ಮುಗಿಸಿ ಬಂದಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಧರ್ಮ ಅವರ ಪಾತ್ರ ಬಹಳ ಮಹತ್ವದ್ದಾಗಿದೆ.  

ಕನ್ನಡದ ಹಿರಿಯ ಕಲಾವಿದರೆಲ್ಲ ಸೇರಿ ಕುಡಿತದ ವಿರುದ್ಧ ಹೋರಾಡುವ ಸ್ಪಷ್ಟ ಸಂದೇಶವನ್ನೊತ್ತು ಸಿನಿಮಾ ಬರುತ್ತಿದೆ. ಈಗಾಗಲೇ ಸೆನ್ಸಾರ್ ಅಂಗಳದಲ್ಲಿ ಇದೊಂದು ಉತ್ತಮ ಸಂದೇಶವಿರುವ ಸಿನಿಮಾ ಎಂಬ ಹೊಗಳಿಕೆಯೊಂದಿಗೆ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ. ಅತಿ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಬೆಂಗಳೂರು ಸುತ್ತಮುತ್ತ ಮತ್ತು ಶಿವಮೊಗ್ಗದ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ತಾರಾಬಳಗದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಹೌದು ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ, ಎಂ.ಎಸ್‌. ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ, ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್, ಅರಸಿಕೆರೆ ರಾಜು, ಮತ್ತು 150ಕ್ಕೂ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ. ಇಷ್ಟು ದೊಡ್ಡ ಬಳಗ ಒಂದೇ ಸಿನಿಮಾದಲ್ಲಿ ಇರುವುದೇ ವಿಶೇಷ. ಇಂಥದ್ದೊಂದು ಸಾಹಸ ಮಾಡಿದ ಕೀರ್ತಿ ನಿರ್ಮಾಪಕ ಉಮೇಶ್ ಅವರಿಗೆ ಸಲ್ಲಬೇಕು. ಉಳಿದಂತೆ ಚಿತ್ರಕ್ಕೆ ಎಂ. ಎಸ್‌. ತ್ಯಾಗರಾಜ ಸಂಗೀತ, ಸಿ ನಾರಾಯಣ್ ಮತ್ತು ಬಾಲು ಛಾಯಾಗ್ರಹಣ, ಆರ್‌. ಡಿ. ರವಿ (ದೊರೆರಾಜ್) ಸಂಕಲನ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ ಸಾಹಸ, ಶಿವರಾಜ್, ಸಾಯಿ ಕೃಷ್ಣ ಹೆಬ್ಬಾಳ ಚಿತ್ರಕಥೆ ಹಾಗೂ ಸಂಭಾಷಣೆ, ಶರಣ್ ಗದ್ವಾಲ್ ತಾಂತ್ರಿಕ ನಿರ್ದೇಶನ, ಗಹನ್ ನಾಯಕ್ ಸಹ ನಿರ್ದೇಶನವಿದೆ.