ಬೆಳಗಾವಿ, ಜ 19 : ಬೆಳಗಾವಿ ಜಿಲ್ಲಾಡಳಿತ 'ಬೆಳೆ ದರ್ಶಕ್' ಮೊಬೈಲ್ ಆ್ಯಪ್ ಮೂಲಕ ಜಿಲ್ಲೆಯ ಮುಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆ ಪೂರ್ಣಗೊಳಿಸಿದೆ. ಈ ಸಮೀಕ್ಷೆಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಗೂ ಸಾಂಖ್ಯಿಕ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ರೈತರು ಮೊಬೈಲ್ ಆ್ಯಪ್ ಬಳಸಿ ಸಂಗ್ರಹವಾದ ಬೆಳೆಗಳ ಮಾಹಿತಿ ಕುರಿತು ಜ. 30ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಲಾಗಿದೆ. ಪ್ರತಿ ಗ್ರಾಮಗ್ರಾಮ ಪಂಚಾಯತಿ ಸೂಚನಾಫಲಕಗಳಲ್ಲಿ ಬೆಳೆ ಸಮೀಕ್ಷೆಯ ಗ್ರಾಮವಾರು ಮಾಹಿತಿ ಪ್ರಕಟಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಲಿಖಿತವಾಗಿಯೂ ಆಕ್ಷೇಪಣೆಗಳನ್ನು ದಾಖಲಿಸಬಹುದು ಎಂದಿದ್ದಾರೆ.
ರೈತರು ಗೂಗಲ್ ಪ್ಲೇ ಸ್ಟೋರ್ ಮೂಲಕ 'ಬೆಳೆ ದರ್ಶಕ' ಆ್ಯಪ್ ಅನ್ನು ಡೌನಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿ ದಾಖಲಾಗಿರುವುದನ್ನು ಛಾಯಾಚಿತ್ರದೊಂದಿಗೆ ವೀಕ್ಷಿಸಬಹುದು. ಬೆಳೆಗಳಿಗೆ ಸಂಬಂಧಿಸಿದ ಏನಾದರೂ ಆಕ್ಷೇಪಣೆ ಇದ್ದರೆ ಅತ್ಯಂತ ಸುಲಭವಾಗಿ ದಾಖಲಿಸಬಹುದು ಅಥವಾ ಧ್ವನಿ ಮುದ್ರಣ ಮಾಡುವುದರ ಮೂಲಕ ಸಲ್ಲಿಸಬಹುದು. ಇದು ಅತ್ಯಂತ ಮಹತ್ವದ್ದಾಗಿರುವುದರಿಂದ, ನಿರ್ಲಕ್ಷ್ಯ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.