ನವರಾತ್ರಿಗೆ ಮನಮೋಹಕ ಅವತಾರ ತಾಳಿದ ‘ಬೈರಾದೇವಿ’

ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವ ಸುಂದರ ಸಿನಿಮಾ 

ಪ್ರೇತಾತ್ಮ, ದೈವಶಕ್ತಿ ಒಳಗೊಂಡ ಸಾಕಷ್ಟು ಹಾರರ್ ಸಿನಿಮಾಗಳು ಗೆದ್ದ ಉದಾಹರಣೆ ಸಾಕಷ್ಟಿವೆ. ಈ ವಾರ ತೆರೆಗೆ ಬಂದ ‘ಭೈರಾದೇವಿ’ ಜನರಿಗೆ ಇಷ್ಟವಾಗುವ ವಿಶೇಷವಾದ ಸಿನಿಮಾ. ಭೈರಾದೇವಿಯಲ್ಲಿ ಬರುವ ಆತ್ಮಕ್ಕೂ ಒಂದು ಸೇಡಿನ ಕಥೆ ಇದೆ. ಚಿತ್ರದಲ್ಲಿ ಕೌಟುಂಬಿಕ ಕಥೆ ಇದ್ದು, ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ಚಿತ್ರದಲ್ಲಿ ಗಟ್ಟಿಯಾದ ಕಥೆ ಇದೆ. ಅಚ್ಚುಕಟ್ಟಾದ ನಿರೂಪಣೆಯೊಂದಿಗೆ ಪ್ರೇತಾತ್ಮದ ಆರ್ಭಟವಿದೆ. ಕಾಳಿಯನ್ನು ಆರಾಧಿಸುವ ಅಘೋರಿಗಳ ಜೀವನಶೈಲಿ, ತಂತ್ರ, ಮಂತ್ರಗಳ ಅದ್ಧೂರಿತನದೊಂದಿಗೆ ತೆರೆ ಮೇಲೆ ಬಂದಿದೆ ‘ಬೈರಾದೇವಿ’. 

ಡಿಸಿಪಿ ಅರವಿಂದ್ (ರಮೇಶ್ ಅರವಿಂದ್)ಗೆ ಮನೆಯಲ್ಲಿ ಪ್ರೇತಾತ್ಮದ ಕಾಟ. ಹಾಗಾಗಿ ತಾಯಿ ಇಲ್ಲದ (ಅದಿತಿ) ಮಗಳನ್ನು ಬೋಡಿಂರ್ಗ್ ಸ್ಕೂಲ್‌ನಲ್ಲಿ ಇಟ್ಟಿದ್ದು, ಅಲ್ಲಿಯೂ ಆತ್ಮದ ಕಾಟ ತಪ್ಪಿಲ್ಲಾ. ಪ್ರೇತ ನಾಶಕ್ಕೆ ಹಲವು ರೀತಿ ಪ್ರಯತ್ನ ಪಟ್ಟರೂ ಪರಿಹಾರ ಸಿಕ್ಕಿಲ್ಲ. ಆಗ ಕಾನ್ಸ್ಟೇಬಲ್ ವಿರಯ್ಯ (ರಂಗಾಯಣ ರಘು) ಮುಖೇನ ಅಘೋರಿಗಳ ಕಡೆಯಿಂದ ಪರಿಹಾರ ಕಂಡುಕೊಳ್ಳುವ ಮಾರ್ಗ ತಿಳಿಯುತ್ತದೆ. ಅಘೋರಿಯನ್ನು ಅರಸಿ ಹೊರಟ ಅರವಿಂದ್, ವೀರಯ್ಯ ದೂರದ ವಾರಣಾಸಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಸ್ವಾಮಿಯೊಂದಿಗೆ ಬಾಬಾ ಸ್ವಾಮಿನಾಥ (ರವಿಶಂಕರ್) ಅವರನ್ನು ಭೇಟಿಯಾಗಿ ಕಷ್ಟ ಹೇಳಿಕೊಳ್ಳುವರು. ಆಗ ಬಾಬಾ ಕಷ್ಟ ಪರಿಹಾರಕ್ಕಾಗಿ ತನ್ನ ಶಿಷ್ಯಳಾದ ಅಘೋರಿ ಭೈರಾ ದೇವಿಯನ್ನು ಅವರ ಜೊತೆ ಕಳಿಸುತ್ತಾನೆ. ಸ್ಥಳಕ್ಕೆ ಬರುವ ಭೈರಾದೇವಿ ಆತ್ಮ ಶೋಧನೆ ಹೇಗೆ ಮಾಡುತ್ತಾಳೆ, ಎಂಬುದೇ ಕಥೆಯ ಪ್ರಮುಖ ಹೈಲೈಟ್‌. 

ಪ್ರಾರಂಭದಿಂದ ಕ್ಲೈಮ್ಯಾಕ್ಸ್‌ವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಭೈರಾದೇವಿ ಚಿತ್ರಕ್ಕಿದೆ. ಪ್ರೇತಾತ್ಮದ ಕಾಟದಿಂದಲೇ ಶುರುವಾಗುವ ಕಥೆಯಲ್ಲಿ ರಂಗಾಯಣ ರಘು ಅವರ ಹಾಸ್ಯ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಎಲ್ಲಿಯೂ ಬೋರ್ ಎನಿಸದಂತೆ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದುದ್ದಕ್ಕೂ ರಮೇಶ್ ಅರವಿಂದ್ ಅವರ ಅಭಿನಯ ಮೆಚ್ಚಲೇ ಬೇಕು. ಅಲ್ಲದೆ ಅಘೋರಿಗಳಾಗಿ ರವಿಶಂಕರ್, ರಾಧಿಕಾ ಕುಮಾರಸ್ವಾಮಿ ನಟನೆ ಅದ್ಭುತ. ಅದರಲ್ಲೂ ರಾಧಿಕಾ ಅಘೋರಿ, ಕಾಳಿ ಅವತಾರದ ಜೊತೆಗೆ ಇನ್ನೊಂದು ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಆ ಪಾತ್ರ ಏನೂ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮೊದಲಾರ್ಧದ ಕಥೆ ಪೊಲೀಸ್, ಆತ್ಮ, ಅಘೋರಿಗಳ ಮೇಲೆ ಸಾಗಿದರೆ, ದ್ವಿತಿಯಾರ್ಧ ಕೌಟುಂಬಿಕ ಹಿನ್ನಲೆಯಲ್ಲಿ ಸಾಗುತ್ತದೆ. ಭೈರಾದೇವಿಯನ್ನು ಮೊದಲಾರ್ಧವಷ್ಟೇ ನೋಡಿ ಸಿನಿಮಾ ಬಗ್ಗೆ ಜಡ್ಜ್‌ ಮಾಡಲು ಸಾಧ್ಯವೆ ಇಲ್ಲ. ಏಕೆಂದರೆ ಮಧ್ಯಂತರದ ನಂತರ ಬೇರೆಯದ್ದೆ ಫೀಲ್ ಕೊಡುವ ಚಿತ್ರವಿದು. ಅರವಿಂದ್ ಅವರಿಗೆ ಆಗಿರುವ ತೊಂದರೆ ಏನು? ಅಘೋರಿ ಭೈರಾದೇವಿ ಆತ್ಮ ಆಹ್ವಾನ ಮಾಡಿದಾಗ ಬಂದ ಕನ್ಯಯೆ ಆತ್ಮ ಯಾರದು? ಭೈರಾದೇವಿ ಆ ಆತ್ಮಕ್ಕೆ ಹೇಗೆ ಮುಕ್ತಿ ನೀಡುತ್ತಾಳೆ ಎಂಬುದಕ್ಕೆ ಸಿನಿಮಾ ನೋಡಲೇ ಬೇಕು. 

ಬಹು ದಿನಗಳ ನಂತರ ಒಂದು ಒಳ್ಳೆಯ ಫ್ಯಾಮಿಲಿ ಸಿನಿಮಾ ನೋಡಿದ ಅನುಭವ ನೀಡುತ್ತದೆ 'ಭೈರಾದೇವಿ'. ಟ್ರೇಲರ್, ಹಾಡು ನೋಡಿ ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೆ ಸರ​‍್ೈಸ್ ಅಂತು ಖಂಡಿತ ಇದೆ. ಚಿತ್ರದಲ್ಲಿ ಬರುವ ಮೂರು ಗೀತೆ ಹಾಗೂ ಹಿನ್ನಲೆ ಸಂಗೀತ ಸಿನಿಮಾದ ಶಕ್ತಿಯಾಗಿದೆ. ಅಷ್ಟೇ ಸುಂದರವಾಗಿ ಛಾಯಾಗ್ರಹಣವಿದೆ. ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಿರ್ದೇಶನದ ವಿಷಯಕ್ಕೆ ಬಂದರೆ, ಅಚ್ಚುಕಟ್ಟಾಗಿ ಸಿನಿಮಾ ಮೂಡಿ ಬಂದಿದೆ. ಮಧ್ಯಂತರ ಕಥೆಯ ಬಗ್ಗೆ ಪ್ರೇಕ್ಷಕ ಊಹೆ ಕೂಡ ಮಾಡಿರದ ಹಾಗೆ ಸಸ್ಪೆನ್ಸ್‌ ಕಾಯ್ದು ಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ನವರಾತ್ರಿಗೊಂದು ಒಳ್ಳೆಯ ಫ್ಯಾಮಿಲಿ ಮನರಂಜನಾ ಸಿನಿಮಾ ‘ಭೈರಾದೇವಿ’ ಆಗಲಿದೆ ಎಂದು ಹೇಳಬಹುದು. 

ಚಿತ್ರ; ಭೈರಾದೇವಿ 

ನಿರ್ದೇಶನ; ಶ್ರೀಜೈ 

ನಿರ್ಮಾಣ; ರಾಧಿಕಾ ಕುಮಾರಸ್ವಾಮ್ಳಿ 

ಸಂಗೀತ; ಕೆ.ಕೆ ಸೆಂಥಿಲ್ 

ಛಾಯಾಗ್ರಹಣ; ಜೆ.ಎಸ್‌. ವಾಲಿ 

ತಾರಾಗಣ; ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರಂಗಾಯಣ ರಘು, ಸ್ಕಂದ ಅಶೋಕ, ಶಿವರಾಮಣ್ಣ, ರವಿಶಂಕರ್ ಮುಂತಾದವರು.