'ಅಧಿಕಾರ್'- ಸಿಎಎ ವಿರುದ್ಧ ಮಮತಾ ಗೀತೆ ರಚನೆ

ಕೋಲ್ಕತಾ, ಜ 10 :            ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಪಿಆರ್) ವಿರುದ್ಧ ಪ್ರತಿಭಟನೆಯ ಧ್ಯೋತಕವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೀತೆಯೊಂದರನ್ನು ರಚಿಸಿದ್ದಾರೆ.  

ಮಮತಾ ಅವರು 'ಅಧಿಕಾರ್ ' ಎಂಬ ಶೀರ್ಷಿಕೆಯ ಗೀತೆಯನ್ನು ರಚಿಸಿದ್ದಾರೆ. ಈ ಗೀತೆಯನ್ನು ಗಾಯಕ ಮತ್ತು ರಾಜ್ಯ ಸಚಿವ ಇಂದ್ರನಿಲ್ ಸೇನ್ ಹಾಡಿದ್ದಾರೆ. ಈ ಗೀತೆಯಲ್ಲಿ ಭಾರತ ಒಗ್ಗಟ್ಟಿನ ರಾಷ್ಟ್ರ ಎಂಬ ಸಂದೇಶವಿದ್ದು, ಸಿಎಎ ಮತ್ತು ಎನ್ ಆರ್ ಸಿಯನ್ನು ತೀವ್ರವಾಗಿ ವಿರೋಧಿಸಿದೆ.  

ಈ ಹಿಂದೆ ಕೂಡ ಬ್ಯಾನರ್ಜಿ ಅವರು ಸಿಎಎ ವಿರುದ್ಧ ಒಂದು ಕವಿತೆ ಬರೆದಿದ್ದರು. ಅದಕ್ಕೆ ಕೂಡ 'ಅಧಿಕಾರ್' ಎಂಬ ಶೀರ್ಷಿಕೆ ನೀಡಿದ್ದರು. ಜೊತೆಗೆ, ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರು 'ಗೋರ್ಜ್ ಒಥೋ'(ಪ್ರತಿಭಟನೆಯ ಅಬ್ಬರ) ಎಂಬ ಗೀತೆ ರಚಿಸಿದ್ದಾರೆ.  

ಮಮತಾ ಅವರು ತಾವೇ ಸೃಷ್ಟಿಸಿದ ಘೋಷಣೆಗಳನ್ನು ಕೂಗುತ್ತಾ, ತಾಳಕ್ಕೆ ಕೈತಟ್ಟುತ್ತಾ ವಿಭಿನ್ನ ರೀತಿಯಲ್ಲಿ ಜನರನ್ನು ತಲುಪಿದಿದ್ದಾರೆ.  

ಫೇಸ್ ಬುಕ್ ನಲ್ಲಿ ಅಧಿಕಾರ್ ಗೀತೆಯನ್ನು ಪೋಸ್ಟ್ ಮಾಡಿರುವ ಅವರು, ಈ ದೇಶ ಯಾವಾಗಲೂ ಒಗ್ಗಟ್ಟು, ಸೌಹಾರ್ದತೆಯ ಪ್ರತೀಕವಾಗಿದೆ. ಕೇಂದ್ರ ಸರ್ಕಾರದ ಎನ್ ಆರ್ ಸಿ ಮತ್ತು ಸಿಎಎ ಈ  ಒಗ್ಗಟ್ಟಿನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ದೇಶದಲ್ಲಿ ಕತ್ತಲು ಕವಿದಾಗ, ಕಲಾತ್ಮಕ ಮನಸ್ಸು ಪ್ರತಿಭಟನೆಯ ಭಾಷೆಯನ್ನು ಹೊರತರುತ್ತದೆ ಎಂದು ಬರೆದುಕೊಂಡಿದ್ದಾರೆ.