ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ ನಾಗೇಶ ನಾಯಕ
ಕವಿತೆ ಬರೆಯುವವರಿಗೆ ಇಂದು ಫೇಸ್ಬುಕ್, ವ್ಯಾಟ್ಸಾಪ್, ಬ್ಲಾಗ್ನಂಥ ಸಾರ್ವಜನಿಕ ಸಂಪರ್ಕ ಜಾಲಗಳಲ್ಲಿ ವಿಫುಲ ಅವಕಾಶಗಳಿವೆ. ಹಾಗೆಂದೇ ಬರೆಯುವ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರವಣಿಗೆ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ತಾನು ಬರೆದದ್ದು ಪುಸ್ತಕ ರೂಪದಲ್ಲಿ ಮುದ್ರಣಗೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬ ಬರಹಗಾರನದಾಗಿರುತ್ತದೆ. ಆದರೆ ಅದಕ್ಕೆ ಸರಿಯಾದ ಸ್ಪಂದನೆ ಸಿಗುವುದಿಲ್ಲ. ನಾಡಿನ ಉದ್ದಗಲಕ್ಕೂ ಕವಿತೆ ಬರೆಯುವವರನ್ನು ಒಂದು ಕಡೆ ಸೇರಿಸಿ, ಅವರಿಂದ ಕವಿತೆ ಓದಿಸಿ, ಅವುಗಳನ್ನೆಲ್ಲ ಒಟ್ಟುಗೂಡಿಸಿ ಸಂಕಲನದ ರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದೆ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ. ಅದು ಪ್ರಕಟಿಸಿರುವ 'ಓ ಬೆಳಕೆ ಬಾ ಹೊಂಬೆಳಕೆ' ಎಂಬ ಪ್ರಾತಿನಿಧಿಕ ಕವನ ಸಂಕಲನವನ್ನು ಸಂಪಾದಕ ಸ.ರಾ. ಸುಳಕೂಡೆ ಹೊರತಂದಿದ್ದಾರೆ. ನಾಡಿನ ನೂರು ಕವಿಗಳ ಕವಿತೆಗಳು ಇದರಲ್ಲಿವೆ. ಈಗ ತಾನೆ ಕಾವ್ಯಕ್ಷೇತ್ರಕ್ಕೆ ಕಾಲಿಟ್ಟ ಉದಯೋನ್ಮುಖ ಬರಹಗಾರರಿಂದ ಹಿಡಿದು ಕಾವ್ಯಕ್ಷೇತ್ರದಲ್ಲಿ ಪಳಗಿರುವ ಬರಹಗಾರರ ಕವಿತೆಗಳು ಹಾಗೂ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾಥರ್ಿಗಳು ಬರೆದ ಕವನಗಳು ಈ ಸಂಕಲನದಲ್ಲಿವೆ. ತರಹೇವಾರಿ ವಿಷಯ ವೈವಿಧ್ಯತೆಯಿಂದ ಕೂಡಿದ ಕವಿತೆಗಳು ಗಮನ ಸೆಳೆಯುತ್ತವೆ. ಸಮಾಜದ ನೋವಿಗೆ, ಸಮಸ್ಯೆಗಳಿಗೆ ಸ್ಪಂದಿಸದ ಲೇಖಕ ಉತ್ತಮ ಬರಹಗಾರನಾಗಲಾರ. ಹೆಣ್ಣಿನ ಅಳಲು, ರೈತನ ಸ್ಥಿತಿ, ದೇಶಪ್ರೇಮ, ನಾಡು-ನುಡಿಯ ಕಾಳಜಿ, ವಚನಕಾರರ ಬದುಕು-ಬರಹ, ರಾಜಕೀಯ ಪ್ರಹಸನ, ಬುದ್ಧಿಜೀವಿಗಳ ಹತ್ಯೆ ಹೀಗೆ ವಿಭಿನ್ನ ವಿಷಯಗಳ ಮೇಲೆ ಬೆಳಕು ಚೆಲ್ಲಿದ ಕವಿತೆಗಳು ಓದುಗರಿಗೆ ಇಷ್ಟವಾಗುತ್ತವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ಮುನ್ನುಡಿಯಲ್ಲಿ ಹೇಳುವಂತೆ "ಈ ಕೃತಿಯಲ್ಲಿ ಇಂದಿನ ಸಾಮಾಜಿಕ, ರಾಜಕೀಯ, ಧಾಮರ್ಿಕ, ನೆಲ, ಜಲ ಸಮಸ್ಯೆ ಮುಂತಾದ ವಸ್ತು ವಿಷಯಗಳು ಅತ್ಯಂತ ನವಿರಾಗಿ ಮೂಡಿವೆ. ಈ ಸಂಕಲನದಲ್ಲಿ ಮಾನವನ ಸಹಜನಡೆ, ನುಡಿಗಳ ನಡಾವಳಿಗಳಿಗೂ ಅವಕಾಶ ದೊರೆತಿರುವುದು ವಿಶೇಷ. ಮಹಿಳಾ ಸಮಾನತೆ, ಹೆಣ್ಣು ಭ್ರೂಣ ಹತ್ಯೆಯನ್ನು ಕೇಂದ್ರವಾಗಿಸಿಕೊಂಡು ರಚಿಸಿರುವ ಕವಿತೆಗಳು ಸಮಾಜದ ಕಣ್ಣು ತೆರೆಸುವಂತಿವೆ." ಸಂಕಲನದ ನೂರು ಕವಿತೆಗಳಲ್ಲಿ ಮೂವತ್ತು ಕವಿತೆಗಳು ಅಣ್ಣ ಬಸವಣ್ಣನ ಕುರಿತಾಗಿ ರಚಿಸಿದ್ದಾಗಿವೆ. ಬಸವಣ್ಣನವರ ಬಾಲ್ಯ, ಬದುಕು, ಸಮಾಜಕ್ಕೆ ನೀಡಿದ ಕೊಡುಗೆ, ವಚನಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಬಯಸಿದ್ದು, ಧರ್ಮ, ಜಾತಿ, ಮೂಢನಂಬಿಕೆ, ಅಂತಜರ್ಾತಿ ವಿವಾಹ, ಸಮಾನತೆ, ಕಾಯಕತತ್ವ ಮುಂತಾದ ವಿಷಯಗಳ ಮೇಲೆ ರಚನೆಯಾಗಿವೆ. ಇಂದಿನ ಯುವ ಸಮೂಹ ಹನ್ನೆರಡನೇ ಶತಮಾನದ ವಚನಕಾರರ ಕುರಿತು ತೋರಿಸಿರುವ ಒಲವು, ಶೃದ್ಧೆ ಮೆಚ್ಚುವಂತದ್ದಾಗಿದೆ. ಹಿರಿಯ ಕವಿ ಬಿ.ವಿ. ನೇಸರಗಿ ಅವರು 'ಬಸವಣ್ಣ' ಕವಿತೆಯಲ್ಲಿ ಬಸವಣ್ಣನವರು ಸರ್ವರನೂ ಸಮಾನತೆಯ ಬಿಗಿಯಪ್ಪುಗೆಯಲ್ಲಿ ಬಂಧಿಸಿದ ಬಗೆಯನ್ನು ಈ ರೀತಿ ಬಣ್ಣಿಸುತ್ತಾರೆ.
ಅವನು ಯಾರು, ಇವನು ಯಾರು
ಎಂದೆನಿಸದೆ ಎಲ್ಲವನ್ನು ಅಪ್ಪಿದೆ
ಕಾಲಚಕ್ರದ ಸುಳಿಯಲ್ಲಿ ಸಿಲುಕಿದೆ
ಜನರನ್ನು ಕೈ ಹಿಡಿದು ಮೇಲಕ್ಕೆತ್ತಿದೆ
ರೈತನ ಸ್ಥಿತಿ ಇಂದು ಅಧೋಗತಿಗಿಳಿದಿದೆ. ಸಾಲ ಮಾಡಿ ಅನ್ನ ಬೆಳೆಯುವ ರೈತ ಹಸಿವಿನಿಂದ ಸಾಯುವ ಹಾಗಾಗಿದೆ. ಯಾವುದೇ ಸರಕಾರಗಳು ಮಣ್ಣಿನ ಮಗನ ಗೋಳನ್ನು ಕೇಳುತ್ತಿಲ್ಲ. ಅವನಿಗೆ ನೆಮ್ಮದಿಯ ಬದುಕನ್ನು ನೀಡುತ್ತಿಲ್ಲ. ದಯವಿಟ್ಟು ಅವನಿಗೆ ಸಂತೃಪ್ತಿಯ ಬದುಕನ್ನು ಕಟ್ಟಿಕೊಡಿ ಎಂದು ರುಬಿನಾ ಎಂ. ಎ. ಅವರು 'ಗಿರಿಯ ಮುಟ್ಟದ ನರಿಯ ಕೂಗಿನಂತೆ' ಎಂಬ ಕವಿತೆಯಲ್ಲಿ ರೈತನ ನೋವನ್ನು ಬಿಚ್ಚಿಡುತ್ತಾರೆ.
ಜನನಾಯಕರ ಸಾಂತ್ವನದ ನಡಿಗೆ
ಗಿರಿಯ ಮುಟ್ಟದ ನರಿಯ ಕೂಗಿನಂತೆ
ದಯವಿಟ್ಟು ಬದುಕು ಕಟ್ಟಿ ಕೊಡಿ
ಇವರಿಗೊಂದಿಷ್ಟು ಸಂತೃಪ್ತಿಯ
ಬದುಕು ಕಟ್ಟಿ ಕೊಡಿ!
ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹಾಗೆಯೇ ಇಂದಿನ ಯುವ ಬರಹಗಾರರು ಪ್ರೀತಿ-ಪ್ರೇಮದ ನವಿರು ಭಾವಗಳನ್ನು ತಮ್ಮ ಕಾವ್ಯದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಕಾವ್ಯವೆಂದರೆ ಪ್ರೀತಿಸುವ ಎರಡು ಪುಟ್ಟ ಹೃದಯಗಳ ಮಧ್ಯದ ಸೇತುವೆಯಿದ್ದಂತೆ. ನಲ್ಲನೊಬ್ಬ ತನ್ನ ಪ್ರಿಯತಮೆಯನ್ನು ನಿಸರ್ಗದ ಚಲನೆಗಳಿಗೆ ಹೋಲಿಸಿ ಮುದಗೊಳ್ಳುತ್ತಾನೆ. ಹೋಲಿಕೆಗೆ ನಿಲುಕದ ಗೆಳತಿಯೊಬ್ಬಳ ಕುರಿತು ಕವಿ ಮಹೇಶ ಕುಲಕಣರ್ಿ 'ನೀನೆಂದರೆ...' ಎಂಬ ಕವಿತೆಯಲ್ಲಿ ಬರೆಯುತ್ತಾರೆ.
ನೀನೆಂದರೆ....
ಬಾನ ಚಂದಿರನ ಬೆಳದಿಂಗಳಿನಂತೆ
ಜಗವ ಬೆಳಗೋ ನೇಸರನ ಕಿರಣದಂತೆ
ಹಸಿರೆಲೆಯ ಮೇಲೆ ಮಲಗಿದ ಇಬ್ಬನಿಯಂತೆ
ಹನಿಗಳ ಬಣದ ಕಾಮರ್ೊಡದಂತೆ...
ಕೆ. ವಿ. ಮಾಗಳದ ಬರೆದ 'ಒಲವಿನ ಅಜ್ಜಿ' ಎಂಬ ಮಕ್ಕಳ ಕವಿತೆ, ಪುಟ್ಟ ಮಕ್ಕಳ ಬದುಕಿನಲ್ಲಿ ಅಜ್ಜಿಯ ಪಾತ್ರದ ಹಿರಿಮೆಯನ್ನು ಅಥರ್ೈಸುತ್ತದೆ. ಮೊದಲಾದರೆ ಅಜ್ಜಿ ಕಥೆ ಹೇಳುವುದು, ಚುಕ್ಕು ತಟ್ಟಿ ಮಲಗಿಸುವುದು, ಊಟ ಮಾಡಿಸುವುದು, ತಪ್ಪುಗಳನ್ನು ತಿದ್ದುವುದು ಎಲ್ಲ ಮಾಡುತ್ತಿದ್ದಳು. ವಿಭಕ್ತ ಕುಟುಂಬದ ಇಂದಿನ ದಿನಮಾನದಲ್ಲಿ ದೂರದರ್ಶನದ ಧಾರಾವಾಹಿಗಳಿಗೆ ಅಂಟಿಕೊಂಡ ಅಜ್ಜಿಯಂದಿರೆ ಸಿಗುತ್ತಾರೆ. ಮಕ್ಕಳ ಕಲ್ಪನೆ ಗರಿಗೆದರಿಸುವ, ಬೇರೊಂದು ಲೋಕಕ್ಕೆ ಅವರನ್ನು ಸೆಳೆದೊಯ್ಯುವ ಅಜ್ಜಿ ಇಂದು ಕಣ್ಮರೆಯಾಗಿದ್ದಾಳೆ.
ಮಕ್ಕಳ ತಪ್ಪು
ತಿದ್ದುವ ಅಜ್ಜಿ
ಬಿಸಿ ಬಿಸಿ ತಿಂಡಿಯ
ತಿನಿಸುವ ಅಜ್ಜಿ
ಸಿಹಿ ಸಿಹಿ ಕತೆಗಳ
ಹೇಳುವ ಅಜ್ಜಿ
ಹೆಣ್ಣು ಎಲ್ಲರ ಬದುಕಿನಲ್ಲಿ ವಹಿಸುವ ಪಾತ್ರಗಳು ಅನನ್ಯ. ಆಕೆಗೆ ವೈಯಕ್ತಿಕ ಬದುಕೇ ಇಲ್ಲದಂತೆ ತನ್ನ ನಂಬಿದವರ ಸಲಹುವ ಆಕೆ ಒಳಗೊಳಗೆ ತಿನ್ನುವ ನೋವು ವಿವರಣೆಗೆ ನಿಲುಕದ್ದು. ಪುರುಷ ವರ್ಗದ ದಬ್ಬಾಳಿಕೆಯನ್ನು ಅವುಡುಗಚ್ಚಿ ಸಹಿಸಿ, ಪ್ರತಿದಿನ ಅಗ್ನಿಕುಂಡವನ್ನು ಹಾದು ಬರುವ ಹೆಣ್ಣಿನ ಅಂತರಂಗದ ಅಳಲನ್ನು ಡಾ. ಜಯಲಕ್ಷ್ಮಿ ಪಾಟೀಲ 'ನಿನ್ನಂತೆ ನಾನು' ಎಂಬ ಕವನದಲ್ಲಿ ಹಿಡಿದಿಡುತ್ತಾರೆ.
ಪ್ರತಿದಿವಸವೂ ಅಗ್ನಿಯ ಕಿಡಿಗಳು
ಸಾಲು ಸಾಲಾಗಿ ಬಂದು ಮುತ್ತಿಕ್ಕುವವು ನನ್ನ
ನೋವು ಸಹಿಸಿಯೂ ನೋವಿಲ್ಲದಂತಾದೆ
ಮುಖದಲ್ಲಿ ಸದಾ ಮಂದಹಾಸವನ್ನೇ
ಬೀರುವಂತವಳಾದೆ
ಎಲ್ಲ ಹುದ್ದೆಗಳಿಗೂ ಅರ್ಹತೆಯ ಮಾನದಂಡಗಳಿರುವಂತೆ ರಾಜಕಾರಣಿಗಳಿಗೂ ಅನ್ವಯಿಸುವಂತ ನಿಯಮಗಳು ಇದ್ದಿದ್ದರೆ ಇಂದು ರಾಜಕಾರಣ ಸ್ವಚ್ಛ, ಶುದ್ಧ, ಜನಪರವಾಗಿರುತ್ತಿತ್ತೇನೋ? ಪತ್ರಿಕೆಗಳ ಪುಟ ತೆರೆದರೆ ತೋರುವ 'ಬೇಕಾಗಿದ್ದಾರೆ' ಎನ್ನುವ ಕಾಲಮ್ಮು ಎಸ್. ಆರ್ ರಾವಳ ಅವರ ಭಾವಕ್ಕೆ ನಿಲುಕಿ ರಾಜಕಾರಣಿಗಳ ಬುಡವನ್ನು ಮುಟ್ಟಿದೆ. ಹಾಗೆಂದೇ ಅವರು 'ರಾಜಕಾರಣಿಗಳು ಬೇಕಾಗಿದ್ದಾರೆ' ಎನ್ನುವ ಕವಿತೆಯಲ್ಲಿ ಇಂದಿನ ರಾಜಕೀಯದ, ರಾಜಕಾರಣಿಗಳ ಜನ್ಮ ಜಾಲಾಡುವ, ವಿಡಂಬನೆಯ ಮೂಲಕ ಇಂತಹ ಸಜ್ಜನ ರಾಜಕಾರಣಿಗಳ ಕೊರತೆಯಿದೆ ಎನ್ನುವುದನ್ನು ವ್ಯಂಗ್ಯವಾಗಿ ಹೇಳುತ್ತಾರೆ.
ಕುಚರ್ಿಗಾಗಿ ಕಸರತ್ತು ಮತ್ತು ಮಸಲತ್ತು
ಮಾಡದ, ನಾಡಿನ ನೆಲ, ಜಲ ಭಾಷಾ
ಬಾಂಧವ್ಯ ಕಾಯ್ವ ರಾಜಕಾರಣಿಗಳು ಬೇಕಾಗಿದ್ದಾರೆ
ಕಚೆ ಹರುಕಿಲ್ಲದ, ಮಚ್ಚೆ ಕೈಗೆತ್ತಿಕೊಳ್ಳದ
ಉಚ್ಚ ವಿಚಾರ, ಸ್ವಚ್ಚ ಬಾಯಿಯ ಹೊಚ್ಚ
ಹೊಸ ರಾಜಕಾರಣಿಗಳು ಬೇಕಾಗಿದ್ದಾರೆ
ಆನಂದ ಮಾಲಗಿತ್ತಿಯವರ 'ಹತ್ಯಾಕಾಂಡ' ಕವಿತೆ ಪೆನ್ನು ಮತ್ತು ಗನ್ನಿನ ನಡುವೆ ನಡೆದ ಸಂಭಾಷಣೆ ರೂಪದಲ್ಲಿ ವ್ಯಕ್ತವಾಗಿದೆ. ಗೌರಿ ಲಂಕೇಶ್ರ ಕೊಲೆಯನ್ನು ಸಾಂಕೇತಿಕವಾಗಿ ಪ್ರತಿಭಟಿಸುವ ಕವಿತೆ, ಹತ್ಯೆಗೈದವರಿಗೆ ಎಚ್ಚರಿಕೆ ನೀಡುತ್ತದೆ. ಸತ್ಯವನ್ನು ಎಂದಿಗೂ ಗುಂಡು ಹೊಡೆದು ಹೂತು ಹಾಕಲು ಸಾಧ್ಯವಿಲ್ಲ. ಕೊನೆಗೊಂದು ದಿನ ಸತ್ಯದ ಬಾವುಟವೇ ಬಾನೆತ್ತರದಲ್ಲಿ ಪಟಪಟಿಸುವುದು ಎನ್ನುತ್ತದೆ.
ನೂರು ಗೌರಿ ಲಂಕೇಶರ
ಕೊಲೆಗೈದರೇನು
ಕೋಟಿ ಕಲ್ಬುಗರ್ಿಯ
ಹಣೆ ಸೀಳಿದರೇನು?
ನೀ ಮಾಡಿದ್ದೆಲ್ಲವೂ ದಂಡ
ಮೂಢನೆ ನಾನಿರಲು
ನಡೆಯದು ಸತ್ಯದ ಹತ್ಯಾಕಾಂಡ
ಸಂಕಲನದ ಬಹಳಷ್ಟು ಕವಿತೆಗಳು ಓದಿಸಿಕೊಂಡು ಹೋಗುತ್ತವೆ. ಹೊಸ ಕವಿಗಳಿಗೆ ಇನ್ನಷ್ಟು ಓದು, ಧ್ಯಾನ, ನಿಯಮಗಳ ಕುರಿತು ಮಾರ್ಗದರ್ಶನದ ಅವಶ್ಯಕತೆಯಿದೆ. ವಾಚ್ಯತೆಯನ್ನು ಮೀರಿ ಪ್ರತಿಮೆ, ರೂಪಕಗಳ ಮೂಲಕ ಬಹಳ ಕಾಲ ಓದುಗರ ಮನದೊಳಗೆ ನಿಲ್ಲುವಂತ ಕವಿತೆ ಹುಟ್ಟಬೇಕು. ಅದಕ್ಕಾಗಿ ಯುವ ಬರಹಗಾರರು ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಿ ಎಂದು ಸಲಹೆ ನೀಡುತ್ತಾ ನೂರು ಕವಿತೆಗಳನ್ನು ಒಟ್ಟಿಗೆ ಓದುವ ಸದವಕಾಶ ಒದಗಿಸಿದ ಹೊಂಬೆಳಕು ಸಾಂಸ್ಕೃತಿಕ ಸಂಘಕ್ಕೆ, ವಿಶೇಷವಾಗಿ ಸಂಘದ ಪ್ರಧಾನ ಕಾರ್ಯದಶರ್ಿ ಮೋಹನ ಪಾಟೀಲ ಅವರನ್ನು ಅಭಿನಂದಿಸುತ್ತೇನೆ.