'ಮೋಹ'ದ ಬಲೆಯ ಸರಿಸಿ, ಹರಿಯನ್ನು ಸ್ಮರಿಸಿ....

*ದೋಹಾ:* 

ಜಗದ ಮೋಹ ಇರುವನಕ 

ಭಕ್ತಿ ಮೊಳೆಯದಲ್ಲಿ, 

ಮೋಹವಾ ತ್ಯಜಿಸಿ 

ಹರಿಯನು ಭಜಿಸು 

ಭಕ್ತಿ ಬೆಳೆವುದಲ್ಲಿ, 

ಕಬೀರಾ, 

ಭಕ್ತಿ ಬೆಳೆವುದಲ್ಲಿ.... 

*ಅರ್ಥ:* 

ಈ ಜಗತ್ತಿನಲ್ಲಿ ಜನಿಸಿ ಬರುವ ಬಹಳಷ್ಟು ಜನರು ಹೆಣ್ಣು-ಹೊನ್ನು-ಮಣ್ಣಿನ ವ್ಯಾಮೋಹಕ್ಕೆ ಸಿಲುಕಿ ಅಂತ್ಯವಾಗಿ ಹೋಗಿದ್ದಾರೆ. 

ಒಂದು ಕಡೆ ಹೇಳುತ್ತಾರೆ; 

ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು 

ಮಡದಿ ಮಕ್ಕಳ ಮೋಹ ಪರಿಜನರ ಮೋಹ| 

ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ 

ಜಗದ ದುಸ್ಥಿತಿಗೆ ಮೂಲವೋ ಮೂಢ|| 

ಇದಕ್ಕೆ ಮೂಲವಾಗಿ ಒಂದು ಕಥೆ ನೆನಪಾಗುತ್ತದೆ. 

ಒಮ್ಮೆ ನಾರದರು ಕೃಷ್ಣನಿಗೆ "ಮಾಯೆ" ಯ ಅರ್ಥ ಕೇಳಿದರು. ಕೃಷ್ಣ ನಕ್ಕು ಸುಮ್ಮನಾದ. ನಾರದರಿಗೆ ಬೇಸರ ಆಯಿತು. ಸ್ವಲ್ಪ ದಿನಗಳ ನಂತರ ಮರೆತೂಬಿಟ್ಟರು. 

ಕೆಲವು ದಿನಗಳ ನಂತರ ಕೃಷ್ಣ ನಾರದರು ಎಲ್ಲಿಗೋ ವಾಯುವಿಹಾರಕ್ಕೆಂದು ಹೊರಟರು. ಬೇಸಿಗೆಕಾಲ. ಕೃಷ್ಣನಿಗೆ ಬಾಯಾರಿಕೆ ಮತ್ತು ಆಯಾಸವಾಯಿತು. ಕೃಷ್ಣ ನಾರದರನ್ನು ಕರೆದು ನೀರು ತರಲು ಹೇಳಿದರು. ನಾರದರು ಹತ್ತಿರದಲ್ಲಿ ಯಾವುದಾದರೂ ಮನೆ ಅಥವಾ ಆಶ್ರಮ ಸಿಗಬಹುದೆಂದು ಹುಡುಕುತ್ತಾ ಹೊರಟರು. ದೂರದಲ್ಲಿ ಒಂದು ಮನೆ ಕಂಡಿತು. ನಿಟ್ಟುಸಿರು ಬಿಡುತ್ತಾ ಆ ಮನೆ ಕಡೆಗೆ ಹೋದ ನಾರದರು ಬಾಗಿಲನ್ನು ಬಡಿದರು, ಒಳಗಿನಿಂದ ಬಾಗಿಲು ತೆಗೆದು ಹೊರ ಬಂದಳು ಸುಂದರ ಯುವತಿ. 

ಅವಳ ಸೌಂದರ್ಯ ನೋಡಿ ನಾರದರಿಗೆ ಪೂತರ್ಿ ವ್ಯಾಮೋಹ ಉಕ್ಕಿತು. ತಾವು ಬಂದಿರುವ ಉದ್ದೇಶವನ್ನೆ ಮರೆತರು. ಅವಳು ಕೇಳಿದಳು "ಯಾರು ನೀವು? ನಿಮಗೇನು ಬೇಕೆಂದು" ನಾರದರು ನೀರು ಕೇಳುವ ಬದಲು "ನನಗೆ ನೀನು ಬೇಕು" ಎಂದುಬಿಟ್ಟರು. ನನ್ನನ್ನು ಮದುವೆಯಾಗುವೆಯಾ.? ಎಂದರು ಅವಳು ನಾಚುತ್ತಾ, ನುಲಿಯುತ್ತಾ "ಸಾಯಂಕಾಲ ನಮ್ಮ ತಂದೆಯವರು ಬರುತ್ತಾರೆ ಅವರನ್ನು ಕೇಳಿ" ಎಂದಳು. ಸಾಯಂಕಾಲದ ತನಕ ನಾರದರು ಅಲ್ಲೇ ಇದ್ದು ಅವಳ ತಂದೆಯ ಮುಂದೆ ವಿಷಯ ಪ್ರಸ್ತಾಪ ಮಾಡಿದರು. ಅವರೂ ಒಪ್ಪಿದರು.ಬ್ರಹ್ಮಚಾರಿಯಾಗಿದ್ದ ನಾರದರು ತಮ್ಮ ಉದ್ದೇಶವನ್ನು ಮರೆತು ಮದುವೆ ಆದರು .ಐದು ವರ್ಷ ಆಯಿತು. 

ಎರಡು ಮಕ್ಕಳು. ಹೀಗೆ ಸಂಸಾರ ಸಾಗಿತು. ಒಂದು ದಿನ ಭಾರೀ ಪ್ರವಾಹ ಬಂತು. ನಾರದರ ಹೆಂಡತಿ ಮನೆಗೆ ನೀರು ನುಗ್ಗಿತು. ಪ್ರವಾಹ ಹೆಚ್ಚಿತು ಹೆಂಡತಿ ಮಕ್ಕಳ ಜೊತೆ ಒಂದು ಕಟ್ಟಿಗೆಯನ್ನು ಹಿಡಿದು ನೀರಿಗೆ ಜಿಗಿದರು. ಮಧ್ಯದಲ್ಲಿ ಚಿಕ್ಕ ಮಗು ಕೊಚ್ಚಿ ಹೋಯಿತು. ನಾರದರು "ಅಯ್ಯೋ ನನ್ನ ಮಗೂ ಮಗೂ" ಎಂದು ಸಾವರಿಸಿಕೊಳ್ಳುವಷ್ಟರಲ್ಲಿ ದೊಡ್ಡ ಮಗು ಮತ್ತು ಹೆಂಡತಿಯೂ ತನ್ನ ಕಣ್ಮುಂದೆಯೇ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದರು. ನಾರದರಿಗೆ ತುಂಬಾ ದುಃಖ ಆಯಿತು. ಜೋರಾಗಿ ಅಳುತ್ತಾ ಕಟ್ಟಿಗೆಯ ಸಹಾಯದಿಂದ ದಡ ಸೇರಿದರು. ದೂರದಲ್ಲಿ ಯಾರೋ "ನಾರದ, ಓಹ್ ನಾರದ ನೀರು ತಂದೆಯಾ" ಎಂದು ಆಗ ನಾರದರಿಗೆ ನೆನಪಾದ ಕೃಷ್ಣ. ಓಡೋಡಿ ಬಂದ ನಾರದರು ಕೃಷ್ಣನ ಕಾಲಿಡಿದು "ಭಗವಂತ ಏನು ನಿನ್ನ ಲೀಲೆ..?" ಎಂದಾಗ ಕೃಷ್ಣ ಹೇಳಿದ "ನೀನೆ ಕೇಲಿದೆಯಲ್ಲಾ ಮಾಯೆಯ ಅರ್ಥ ಎಂದು ನಕ್ಕ ಕೃಷ್ಣ ಪರಮಾತ್ಮ." ನಾರದರು ನಾಚುತ್ತಾ "ಭಗವಂತ ತಿಳಿಯಿತು ನಿನ್ನ ಈ ಮಾಯೆಯಾಟ" ಎಂದರು. 

ಇದು ನಮ್ಮೆಲರಿಗೂ ಕಥೆ ಎನಿಸಬಹುದು ಆದರೆ ಒಳಹೊಕ್ಕಿ ನೋಡಿದರೇ ನಾವು-ನೀವುಗಳೆಲ್ಲಾ ಆ ಭಗವಂತನ ಮಾಯೆಗೆ ಸಿಲುಕಿದವರೆ. ಅದು ನಮಗೆ ತಿಳಿಯುವವರೆಗೂ ಹೆಂಡತಿ ಮಕ್ಕಳು ಫ್ಯಾಮಿಲಿ ನನ್ನ ಧರ್ಮ ನನ್ನ ಜಾತಿ ಎಂಬ ವ್ಯಾಮೋಹಕ್ಕೆ ಸಿಲುಕಿ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದೇವೆ. ಇದಕ್ಕೆಲ್ಲಾ ಪರಿಹಾರ ನಾವೆಲ್ಲರೂ ಭಗವಂತನ ವ್ಯಾಮೋಹಕ್ಕೆ ಸಿಲುಕಬೇಕೆ ಹೊರತು ಹೆಂಡತಿ, ಮಕ್ಕಳ ವ್ಯಾಮೋಹಕ್ಕಲ್ಲಾ. 

ಹನ್ನೆರಡನೇ ಶತಮಾನದ ಮಧ್ಯಭಾಗದಲ್ಲಿ ಅವತರಿಸಿ ಬಂದು 'ಕಾಯಕವೇ ಕೈಲಾಸ' ಎಂದು ನಂಬಿ, ಅನುಭವ ಮಂಟಪ ಕಟ್ಟಿದ ಅಪ್ಪ ಬಸವಣ್ಣನವರು ತಮ್ಮ ಒಂದು ವಚನ ದಲ್ಲಿ ಹೀಗೆ ಹೇಳುವುದುಂಟು. 

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, 

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, 

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, 

ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ. 

ಈ ಮಾಯೆಯ ಕಳೆವಡೆ ಎನ್ನಳವಲ್ಲ, 

ನೀವೆ ಬಲ್ಲಿರಿ ಕೂಡಲಸಂಗಮದೇವಾ ! 

*ಸಮಗ್ರ ವಚನ ಸಂಪುಟ: 1* 

*ವಚನದ ಸಂಖ್ಯೆ: 15* 

ಇದರ ಅರ್ಥ ಹೀಗಿದೆ: 

ಈ ಮಾಯೆ ಹೇಗಿದೆ ಎಂದರೆ ತಾಯಿಯಾಗಿ ವಾತ್ಸಲ್ಯದಿಂದ ಬರಬಹುದು, ಮೋಹದ ಮಗಳಾಗಿ ಬರಬಹುದು, ಪ್ರೀತಿಯ ಮಡದಿಯಾಗಿ ಬರಬಹುದು, ಈ ಮಾಯಾ ಮೋಹದ ಬಲೆಗೆ ಬಿದ್ದವರು ಈ ಮಾಯಾ ಲೋಕದಲ್ಲಿ ಬಂಧಿಗಳೇ ಸರಿ. ಈ ಮಾಯೆಯೇ ಬಂಧನದಿಂದ ತಪ್ಪಿಸಿಕೊಳ್ಳಲು ದೈವಕೃಪೆ ಮತ್ತು ಗುರುಕೃಪೆ ಇರಬೇಕು ಎಂಬುದಾಗಿ. 

ಮಾಯೆಯ ಪರದೆಯನ್ನು ಕಿತ್ತೆಸೆದು ಚೆನ್ನ ಮಲ್ಲಿಕಾಜರ್ುನನ್ನೇ ತನ್ನ ಪತಿಯೆಂದು ಭಾವಿಸಿ ಉಡುತಡಿಯಿಂದ ಕದಳಿ ವನಕ್ಕೆ ಬಂದ 'ಅಕ್ಕ ಮಹಾದೇವಿಯವರು' ತಮ್ಮ ವಚನದಲ್ಲಿ ಮಾಯೆಯ ಬಗ್ಗೆ ಹೀಗೆ ಹೇಳಿದ್ದಾರೆ. 

ಬಿಟ್ಟೆನೆಂದರೂ ಬಿಡದೀ ಮಾಯೆ! ಬಿಡದಿದ್ದರೆ ಬೆಂಬತ್ತಿತ್ತು ಮಾಯೆ ! ಯೋಗಿಗೆ ಯೋಗಿಣಿಯಾಯಿತ್ತು ಮಾಯೆ! ಸವಣಂಗೆ ಸವಣಿಯಾಯಿತ್ತು ಮಾಯೆ! ಯತಿಗೆ ಪರಾಕಿಯಾಯಿತ್ತು ಮಾಯೆ! ನಿನ್ನ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾಜರ್ುನದೇವ, ನಿಮ್ಮಾಣೆ. 

ಜಗತ್ ಪ್ರಸಿದ್ಧ ವಿಜ್ಞಾನಿ ಆಲ್ಬಟರ್್ ಐನ್ ಸ್ಟಿನ್ ಕೂಡ, "ವಾಸ್ತವಿಕತೆ ಎನ್ನುವುದು ನಿರಂತರವಾಗಿ ತೋರುವ ಒಂದು ಭ್ರಮೆ ಮಾತ್ರ (ಖಜಚಿಟಣಥಿ  ಟಜಡಿಜಟಥಿ ಚಿಟಿ ಟಟಣಠಟಿ, ಚಿಟಛಜಣ ಚಿ ತಜಡಿಥಿ ಠಿಜಡಿಣಜಟಿಣ ಠಟಿಜ) ಎನ್ನುತ್ತಾರೆ. 

12ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದವರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದವರು. ಬಸವಾದಿ ಶರಣರಲ್ಲಿ ಪ್ರಮುಖರಾದ "ಅಲ್ಲಮ ಪ್ರಭುದೇವರು" ಈ ಮಾಯೆಯ ಬಗ್ಗೆ ತಮ್ಮ ಒಂದು ವಚನದಲ್ಲಿ ಹೀಗೆಂದಿದ್ದಾರೆ: 

ಬ್ರಹ್ಮ ಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ, 

ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ, 

ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ, 

ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ, 

ಸರ್ವವೂ ನಿನ್ನ ಮಾಯೆ! 

ಒಬ್ಬರನ್ನೊಳಕೊಂಡಿತ್ತೆ ಹೇಳಾ ಗುಹೇಶ್ವರಾ.? 

ನಮ್ಮ ಕನ್ನಡ ನಾಡು ಕಂಡಂತಹ ಶ್ರೇಷ್ಠ ಕವಿಗಳು, ಆಧುನಿಕ ಕನ್ನಡ ಸಾಹಿತ್ಯ ಲೋಕದ  ದಿಗ್ಗಜರು, "ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದೇ ಕರೆಸಿ ಕೊಂಡ . ದೇವನಹಳ್ಳಿ ವೆಂಕಟ ರಮಣಯ್ಯ ಗುಂಡಪ್ಪ ಎಂದೇ ಪ್ರಸಿದ್ಧರಾದ 'ಡಿವಿಜಿ'ಯವರು ಹೇಳುತ್ತಾರೆ: 

ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು | 

ತೇಲುವುದ ಮೇಯಸತ್ತ್ವದಲಿ ಮೇಯ ಜಗ || ಮೂಲದಶೆಯೊಳಗೊಂದು; ಮಾಪನದ ಬಗೆಗೆರಡು | ಗಾಳಿಯುಸಿರುಗಳಂತೆ - ಮಂಕುತಿಮ್ಮ || 

ಇದರರ್ಥ ಬಹಳ ಅದ್ಭುತ, 

ಹಾಲಿನೊಳಗೆ ಬೆಣ್ಣೆ ಇದೆ ಆದರೇ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ, 

ಹಾಗಿಯೇ ಸಮುದ್ರದ ನೀರಿನೊಳಗೆ ಮಂಜುಗೆಡ್ಡೆಯಿದೆ ಆದರೇ ಅದು ತಕ್ಷಣವೇ ಗೋಚರವಾಗುದಿಲ್ಲವೋ ಹಾಗೆಯೇ ಹೊರಗೆ ಗಾಳಿ ಇದೆ ಆದರೇ ನಮ್ಮೊಳಗೆ ಹೋದಾಗ ಅದು ಉಸಿರಾಗುತ್ತದೆ. ಹಾಗೆ ಈ ಜಗತ್ತನ್ನು ಆಡಿಸುವ ಶಕ್ತಿಯೊಂದಿದೆ ಅದು ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಏಕೆಂದರೆ ನಮ್ಮೊಳಗೆ ಮಾಯೆಯ ಪರದೆ ಸುತ್ತಿಕೊಂಡಿದೆ. ಆ ಮಾಯೆಯ ಪರದೆ ಹರಿದಾಗ ಮಾತ್ರ ಆ ಅಗೋಚರ ಶಕ್ತಿ ಕಣ್ಮುಂದೆ ಬರುವುದು ಎಂಬುದಾಗಿ 'ಡಿ.ವಿ.ಜಿ'ಯವರು ಹೇಳಿದ್ದಾರೆ. 

ಇನ್ನು ಭಗವದ್ಗೀತೆಯ 7ನೇ ಅಧ್ಯಾಯದ 14ನೇ ಶ್ಲೋಕದಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ: 

ದೈವೀ ಹೈಷಾ ಗುಣಮಯಿ ಮಮ 

ಮಾಯಾ ದುರತ್ಯಯಾ| 

ಮಾಮೇವ ಯೇ ಪ್ರಪದ್ಯಂತೇ 

ಮಾಯಾಮೇತಾಂ ತರಂತಿ ತೇ || 

ಈ ಶ್ಲೋಕದ ಅರ್ಥ ಹೀಗಿದೆ: 

ಈ ನನ್ನ ತ್ರಿಗುಣ ರೂಪವಾದಂತಹ ನನ್ನ ದೈವೀಕ ಮಾಯೆಯನ್ನು ದಾಟುವುದು ಬಹಳ ಕಷ್ಟ. ಆದರೇ ಯಾರೂ ನನ್ನನ್ನೇ ಗಟ್ಟಿಯಾಗಿ ನಂಬಿದ್ದಾರೋ, ಸದಾ ನನ್ನನ್ನೇ ಭಜಿಸುವರೋ ಅವರು ಮಾತ್ರ ಈ ಮಾಯೆಯ ಪರದೆಯನ್ನು ದಾಟಲು ಸಾಧ್ಯ ಎಂದು. 

ಪರಮಪಿತನಾದ ಪರಮಾತ್ಮ ಶ್ರೀಕೃಷ್ಣನೇ ಈ ಮಾಯೆಯ ಬಗ್ಗೆ ಈ ರೀತಿಯಾಗಿ ಹೇಳಿದ ಮೇಲೆ ಮಾಯೆಯು ಹೇಗೆಲ್ಲಾ ನಮ್ಮನ್ನು ಆವರಿಸಬಹುದು ಎಂದು ಆಲೋಚಿಸಬೇಕಿದೆ. ಮಾಯೆಯಿಂದ ಪಾರಾಗುವಂತೆ ನಾವು ನಂಬುವ ಆ ಶಕ್ತಿಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕಿದೆ.

- ಶ್ವೇತಾ ಫಣಿವೇಣಿ 

(ಯುವ ಲೇಖಕಿ, ಮಂಡ್ಯ