ಇಲ್ಲಿ ಮಾಸ್ಕ ಎನ್ನುವುದು ಕೇವಲ ನೆಪ ಮಾತ್ರ....

ಅಸಲಿಗೆ ನಾವು ಪ್ರಕೃತಿಗೆ ಮುಖ ತೋರಿಸುವ ಅರ್ಹತೆಯನ್ನೇ ಕಳೆದುಕೊಂಡಿದ್ದೇವೆ...! 

ದೇವರ ಸೃಷ್ಠಿಯು ಸರಿಯಾಗಿತ್ತು. ಆದರೆ ಆ ಮಾನವನಿಗೆ ಈ ನಿಸರ್ಗದ ರಹಸ್ಯವನ್ನು ಅರಿಯಬೇಕೆನ್ನುವ ಕೆಟ್ಟ ಕುತೂಹಲವಿತ್ತು. ಅದರ ಹಠಕ್ಕೆ ಬಿದ್ದು ತನ್ನ ಅಂತ್ಯಕ್ಕೆ ತಾನೇ ಮುನ್ನಡಿ ಬರೆದುಕೊಂಡ. ಭೂಮಿಯ ಮೇಲೆ ವಾಸಿಸಲು ಅವಕಾಶ ಸಿಕ್ಕರು ಕೂಡ ಅದರಿಂದ ತೃಪ್ತಿಯಾಗದ ಮಾನವ ಹಕ್ಕಿಯಂತೆ ಹಾರಲು ದುರಾಸೆ ಪಟ್ಟ, ಕೊನೆಗೆ ಲೋಹದ ಹಕ್ಕಿಯನ್ನು ಸೃಷ್ಠಿಸಿಕೊಂಡು ಆಕಾದೆಡೆಗೆ ನೆಗೆದೇ ಬಿಟ್ಟ. ಮುಂದೆ ಅದೇ ಲೋಹದ ಹಕ್ಕಿ ಮಾನವನ ಅಂತ್ಯಕ್ಕೆ ಸಿಕ್ಕ ಆಯುಧವಾಗಿ ಮಾರ್ಪಟ್ಟಿದೆ. ಹೀಗೆ ಮುಂದುವರೆದ ಮಾನವ ಮೀನಿನಂತೆ ಈಜುವುದನ್ನು ಕಲಿತ, ತನ್ನ ಪಾಲಿಗೆ ಬಂದ ಭೂಮಿಯನ್ನು; ಬಿಟ್ಟು ಮಂಗಳನ ಅಂಗಳದಲ್ಲಿ ಕಾಲಿಟ್ಟು ಬಂದ, ಚಂದಿರನ ಮೇಲೆ ಕುಣಿದಾಡಿ ಬಂದ. ನಿಸರ್ಗ ಕಲಿಸದೇ ಉಳಿಸಿದ ಪಾಠಗಳೆಲ್ಲವನ್ನು ಕಲಿತ. ಆದರೆ ಬದುಕುವುದನ್ನು ಮಾತ್ರ ಕಲಿಯಲಿಲ್ಲ. ನಾನು ಜ್ಞಾನಿ, ನಾನು ಮಾಡಿದ್ದೇ ಶ್ರೇಷ್ಠ, ಭ್ರಹ್ಮಾಂಡ ಹೊಂದಿರುವ ರಹಸ್ಯವನ್ನೆಲ್ಲ ಬಯಲು ಮಾಡುತ್ತೇನೆ ಎನ್ನುವ ಭಂಡತನದಿಂದ, ಆಧುನಿಕತೆ ಎನ್ನುವ ಮಾಯಾಜಾಲದ ಬಲದಿಂದ, ತನಗೆ ಸರಿ ಎನಿಸಿದ ದಾರಿಯಲ್ಲಿ ಹೆಜ್ಜೆ ಹಾಕಿದ. ಕೊನೆಗೆ ಸುಂದರವಾಗಿದ್ದ ಪರಿಸರವನ್ನು ಸುಡುಗಾಡು ಮಾಡಿದ. ಪರಿಣಾಮ ಇಂದು ಆ ನಿಸರ್ಗದ ಎದುರು ಸೋತು ಸುಣ್ಣವಾಗಿ ಸಾವಿನ ದಾರಿಯನ್ನು ಕಾಯುತ್ತ ಕೂರುವಂತಾಗಿದೆ. ಅದರಲ್ಲೂ ಕೊರೊನಾ ಎನ್ನುವ ಕಳ್ಳ ಕ್ರಿಮಿಯ ಕೈಯಲ್ಲಿ ಸಿಕ್ಕ ಮನುಕುಲ ಅಕ್ಷರಶಃ ನಲುಗಿ ಹೋಗಿದೆ. ಕಣ್ಣಿಗೆ ಕಂಡಿದ್ದೆಲ್ಲವನ್ನು ತನ್ನದಾಗಿಸಿಕೊಳ್ಳುವ ಹುಂಬತದಲ್ಲಿದ್ದ ಮಾನವಿಗೆ ಕಾಣದ ಜೀವಿಯೊಂದು ಕಂಗಾಲಾಗುವಂತೆ ಮಾಡಿದೆಯಲ್ಲ ಅದೇ ಈ ಪೃಥ್ವಿ ಹೊಂದಿರುವಂತ ನಿಗೂಢವಾದ ಶಕ್ತಿ. ಅದನ್ನು ಅರಿಯುವ ಬರದಲ್ಲಿ ವಿಜ್ಞಾನದ ಹೆಸರಲ್ಲಿ ಅಜ್ಞಾನ ದಾರಿಯಲ್ಲಿ ಹೆಜ್ಜೆ ಹಾಕಿದ ಮಾನವನಿಂದು ನಿಸರ್ಗದ ಎದುರು ಮುಖ ಮುಚ್ಚಿಕೊಂಡು ಬದುಕುವಂತ ಅನಿವಾರ್ಯತೆ ಸೃಷ್ಠಿಸಿಕೊಂಡು ಬಿಟ್ಟಿದ್ದಾನೆ. ಇಂದು ಪ್ರಾಣ ಉಳಿಸಿಕೊಳ್ಳುವುದಕ್ಕೆ ಮಾಸ್ಕ ಧರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಇಲ್ಲಿ ಮಾಸ್ಕ ಎನ್ನುವುದು ಕೇವಲ ನೆಪ ಮಾತ್ರ, ಅಸಲಿಗೆ ನಾವು ಪ್ರಕೃತಿಗೆ ಮುಖವನ್ನು ತೋರಿಸುವ ಅರ್ಹತೆಯನ್ನು ಕಳೆದುಕೊಂಡಿದ್ದೇವೆ ಎನ್ನುವುದರ ಸ್ಪಷ್ಟವಾದ ಸಂದೇಶವಾಗಿದೆ.

ಮನುಕುಲ ಸೃಷ್ಠಿಯಾದಾಗ ಎಲ್ಲವೂ ಸರಿಯಾಗಿಯೇ ಇತ್ತು. ಯಾರಿಗೆ ಏನು ಸಲ್ಲಬೇಕೋ ಅದು ಸಲ್ಲುತ್ತಿತ್ತು. ಯಾವಾಗ ಮಾನವನಿಗೆ ಅರಿವಿನ ದಾರಿ ತೆರೆದುಕೊಂಡಿತೋ ಆವಾಗ ಸ್ವಾರ್ಥ ಎನ್ನುವುದು ಮೆಲ್ಲನೆ ಮೊಳಕೆ ಒಡೆಯಿತು. ಅದರ ಪರಿಣಾಮವಾಗಿ ತನ್ನನ್ನು ಸೃಷ್ಠಿಸಿದ ನಿಸರ್ಗದ ಒಡಲಿಗೆ ಕೈ ಹಾಕಿದ. ಜ್ಞಾನದಿಂದ ವಿಜ್ಞಾನದ ಸೃಷ್ಠಿಯಾಗಿದ್ದರೂ ಕೂಡ ಅದನ್ನು ಮೀರಿದ ಕಾರ್ಯಕ್ಕೆ ಮುಂದಾದ. ತನ್ನ ಸ್ವಾರ್ಥವನ್ನು ಈಡೇರಿಸಿಕೊಳ್ಳಲು ಕಾಡನ್ನು ಕಡಿದ, ನೆಲವನ್ನು ಅಗೆದ, ಸಾಗರವನ್ನು ಬಗೆದ, ಜೀವ ಜೀವಗಳನ್ನು ಹಿಂಡಿ ಹಿಪ್ಪೆ ಮಾಡಿದ, ತಿನ್ನಬಾರದ್ದನ್ನು ತಿಂದು ತೇಗಿದ. ಕೊನೆಗೆ ತಾನು ಮಾಡಿದ ತಪ್ಪಿನ ಅರಿವು ಮೂಡುವ ಮುನ್ನ ಮಸಣದ ಹೂವಿನಂತೆ ಅತ್ತ ಪೂಜೆ ಬಾರದೇ, ಇತ್ತ ಮುಡಿಯನ್ನು ಸೇರದೆ ಅನಿವಾರ್ಯದ ಅಂತ್ಯಕ್ಕೆ ಬಂದು ತಲುಪಿದ್ದಾನೆ. ಕೊರೋನಾ ಎನ್ನುವ ಸೂಕ್ಷ್ಮಾಣು ಜೀವದಿಂದ ಜಗತ್ತಿನಾಧ್ಯಂತ ಸಾಕಾಗುವಷ್ಟು ಅನಾಹುತಗಳು ನಡೆದು ಹೋಗಿವೆ. ನೆಮ್ಮದಿಯಾಗಿದ್ದವರ ಬದುಕಿಗೆ ಬೆಂಕಿ ಬಿದ್ದಿದೆ. ಆದರೆ ಅದರ ಜೊತೆಯಲ್ಲಿ ನಿಜಕ್ಕೂ ಮಾನವನ ತಪ್ಪುಗಳು ಅನಾವರಣಗೊಳ್ಳುತ್ತಿವೆ, ಮುಖವಾಡಗಳು ಒಂದೊಂದಾಗಿ ಕಳಚುತ್ತಿವೆ, ಬಾಂಧ್ಯವಗಳ ನಿಜವಾದ ಬಣ್ಣ ಬಯಲಾಗುತ್ತಿದೆ, ಸಂಬಂಧಗಳೆಂಬ ಸುಳ್ಳಿನ ಸರಮಾಲೆ ಬಿಚ್ಚಿಕೊಳ್ಳುತ್ತಿದೆ, ಬದುಕಿನ ನಾಟಕದ ಪರದೆ ನಿಧಾನವಾಗಿ ಜಾರುತ್ತಿದೆ. ಒಟ್ಟಿನಲ್ಲಿ ಕೊರೊನಾದ ಸಂಕಟದ ಮಧ್ಯದಲ್ಲಿ ಬದುಕಿನ ಸತ್ಯ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಪ್ರಪಂಚ ಎನ್ನುವುದು ಸ್ವಾರ್ಥದಿಂದ ಕೂಡಿದ ಸಂತೆ ಎಂದಾಗ ನಂಬಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಆ ಸತ್ಯ ಜಗಜ್ಜಾಹೀರಾಗಿದೆ. ಮಾನವನಿಗೆ ಆಹಾರಕ್ಕಾಗಿ ಹಣ್ಣು ಹಂಪಲು, ದವಸ ದಾನ್ಯಗಳು, ತರಕಾರಿಗಳು ಸೇರಿದಂತೆ ಹತ್ತು ಹಲವು ಆಯ್ಕೆಗಳನ್ನು ಕೊಟ್ಟ ಪರಿಸರದ ಆಜ್ಞೆಯನ್ನು ಮೀರಿದ ಮಾನವ; ಅವೆಲ್ಲವನ್ನು ಬಿಟ್ಟು ಬೇಕಾ ಬಿಟ್ಟಿ ಆಹಾರ ತಿನ್ನುವುದಕ್ಕೆ ಮುಂದಾದನು. ಹೀಗಾಗಿಯೇ ಚೀನಾದಂತ ರಾಷ್ಟ್ರದಲ್ಲಿ ಯಾವೊಂದು ಪ್ರಾಣಿಯನ್ನು ಬಿಡದೆ ಎಲ್ಲವನ್ನು ಆಹಾರಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಾಣಿಗಳಷ್ಟೆ ಅಲ್ಲ, ಚಿರ ಯೌವ್ವನ ಪ್ರಾಪ್ತಿಯಾಗುತ್ತದೆ ಎಂದು ಹೇಳಿಕೊಂಡು ನವಜಾತ ಶಿಶುಗಳನ್ನು ಕೂಡ ಭಕ್ಷಣೆ ಮಾಡುತ್ತಿರುವುದನ್ನು ಕಂಡಾಗ ಮಾನವನ ನಿಜ ರೂಪ ಬಯಲಾಗುತ್ತದೆ. ನಿಸರ್ಗದ ನಿಯಮದಲ್ಲಿ ಯಾವತ್ತು ಸಿಂಹವನ್ನು ಸಿಂಹವಾಗಲಿ, ಹುಲಿಯನ್ನು ಹುಲಿಯಾಗಲಿ ಬೇಟೆ ಆಡುವುದಿಲ್ಲ. ಆದರೆ ಮನುಷ್ಯ ಮನುಷ್ಯನನ್ನೆ ಬೇಟೆಯಾಡುತ್ತಾನೆ. ತಿಂದು ತೇಗುತ್ತಾನೆ ಎನ್ನುವುದಕ್ಕೆ ಇದು ಅತ್ಯತ್ತಮ ಉದಾಹರಣೆಯಾಗಿದೆ. ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಬದುಕುವ ನಮ್ಮಂತವರಿಗೆ ಬುದ್ಧಿ ಕಲಿಸುವುದಕ್ಕೆ ನಿಸರ್ಗವೇ ಮುಂದಾಗುತ್ತದೆ. ತನ್ನ ಪಾಡಿಗೆ ತಾನು ಹರಿಯುತ್ತಿದ್ದ ನದಿಯ ದಂಡೆಯ ಮೇಲೆ ಆಶ್ರಯ ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು ಎನ್ನುವುದನ್ನು ನಾವು ಸಿಂಧೂ ನಾಗರಿಕತೆ, ಈಜಿಪ್ತ ನಾಗರಿಕತೆಯ ಮೂಲಕ ತಿಳಿದುಕೊಂಡಿದ್ದೇವೆ. ಆದರೆ ಅದನ್ನು ತಿಳಿದ ಬಳಿಕವು ನಾವು ನಮ್ಮ ಮೊಂಡತನವನ್ನು ಮುಂದುರಿಸಿಕೊಂಡು ಹೋಗುತ್ತಿದ್ದೇವೆ. ತನ್ನ ಪಾಡಿಗೆ ಹರಿಯುವ ನದಿಯನ್ನು ತಡೆದು ನಿಲ್ಲಿಸಿ ನಮ್ಮ ಮನಸ್ಸಿಗೆ ಬಂದ ಕಡೆಗೆ ತಿರುಗಿಸಿಕೊಳ್ಳಲು ಮುಂದಾಗಿದ್ದೇವೆ. ನಾವು ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆಯಲ್ಲಿ ನದಿಗಳ ಒಡಲಿಗೆ ಕೈ ಇಟ್ಟು ಮರುಳನ್ನು ಹೆಕ್ಕುವ ಕಾರ್ಯ ಮಾಡುತ್ತಿದ್ದೆವೆ. ಇದೇ ಭೂಕಂಪ ಸುನಾಮಿಯಂತ ನಿಸರ್ಗದ ಕೋಮಕ್ಕೆ ತುತ್ತಾಗಲು ಕಾರಣವಾಗುತ್ತಿರುವುದು. ತನ್ನಿಂದ ಪಡೆದ ಮರುಳನ್ನು ಮರಳಿ ಪಡೆಯಬೇಕು ಎಂದು ನದಿಯು ಮನೆಬಾಗಿಲಿಗೆ ಪ್ರವಾಹದ ರೂಪದಲ್ಲಿ ಬಂದು ನಿಲ್ಲುತ್ತಿರುವುದು. ಇದಕ್ಕೆ ಕಾರಣವಾಗಿದ್ದಾದರು ಏನು? ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ನಾವು ನಡೆಯುತ್ತಿರುವ ನಡೆ. ಅದಕ್ಕೆ ಹೇಳಿದ್ದು ಪ್ರಕೃತಿಗೆ ಮುಖ ತೋರಿಸುವ ಅರ್ಹತೆಯನ್ನು ಮಾನವ ಕಳೆದುಕೊಂಡಿದ್ದಾನೆ ಎಂದು.

ನಮ್ಮ ಕಥೆ ಇಲ್ಲಿಗೆ ಮುಗಿಯುವುದಿಲ್ಲ, ನಿಸರ್ಗದೊಂದಿಗೆ ಹುಡುಗಾಟವಾಡುತ್ತ ಬದುಕನ್ನು ಪೀಕಲಾಟಕ್ಕೆ ತಂದುಕೊಂಡಿರುವ ನಾವುಗಳು ನಮ್ಮ ಮಧ್ಯದಲ್ಲಿನ ಸಂಬಂಧಗಳನ್ನಾದರೂ ಸುಸ್ಥಿರವಾಗಿಟ್ಟುಕೊಂಡಿದ್ದೀವಾ? ಅದೂ ಇಲ್ಲ. ಇಲ್ಲಿಯೂ ನಾವು ಸ್ವಾರ್ಥಪರತೆಯನ್ನು ಮೆರೆಯುತ್ತಿದ್ದೇವೆ. ಇಷ್ಟುದಿನದ ನಾಟಕೀಯತೆಯ ನಡೆಯನ್ನು ಇಂದು ಕರೋನಾ ಎನ್ನುವ ಒಂದು ಸೂಕ್ಷ್ಮಾಣು ಜೀವಿ ಬಟಾ ಬಯಲು ಮಾಡಿದೆ ಎಂದರೆ ನಾವು ನಂಬಲೇ ಬೇಕು. ನಮ್ಮ ತಪ್ಪು ಹಾಗೂ ವಿಷಾಧದ ನಡೆಯನ್ನು ಒಪ್ಪಿಕೊಳ್ಳಲೇ ಬೇಕು. ಸುಂದರ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಹುಟ್ಟಿಕೊಂಡ ಸಂಬಂಧಗಳನ್ನು ಇಷ್ಟು ದಿನ ಲಾಭಕ್ಕಾಗಿ, ಹೆಮ್ಮೆಗಾಗಿ ಬಳಸಿಕೊಂಡಿದ್ದೇವೆ. ಬಾಯಲ್ಲಿ ಬೆಲ್ಲ ಮೆಲ್ಲುತ್ತ ಎದೆಯಲ್ಲಿ ಕತ್ತರಿಯನ್ನಿಟ್ಟುಕೊಂಡು ಬದುಕಿದ್ದೇವೆ. ಇವೆಲ್ಲವನ್ನು ಕೆಲವೇ ಕೆಲವು ದಿನಗಳ ಈ ಸ್ಥಿತಿ ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಒಬ್ಬೊಬ್ಬರ ವ್ಯಕ್ತಿತ್ವದ ಚಿತ್ರಣವನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಯತಾವತ್ತಾಗಿ ತೋರಿಸಿ ಬದುಕನ್ನು ಬೆತ್ತಲೆಯಾಗಿಸಿ ಬಿಟ್ಟಿದೆ. "ನನ್ನ ಮಗ ಅಮೇರಿಕಾದಲ್ಲಿ ಇಂಜಿನಿಯರ್ ಆಗಿದ್ದಾನೆ, ಲಕ್ಷ ಲಕ್ಷ ಸಂಬಳ ಎಣಿಸುತ್ತಾನೆ, ಅವನಂತ ಮಗನನ್ನು ಪಡೆಯಬೇಕೆಂದರೆ ನಾವು ಅದೃಷ್ಟ ಮಾಡಿದ್ದೆವೆ" ಎಂದೆಲ್ಲ ಕೊಚ್ಚಿಕೊಳ್ಳುತ್ತಿದ್ದವರು ಇಂದು ಮಾತಿನ ವರಸೆಯನ್ನೇ ಬದಲಿಸಿ ಬಿಟ್ಟಿದ್ದಾರೆ. ಅಮೇರಿಕಾದಿಂದ ಮನೆಗೆ ಬರುವ ಮಗನ ಬಗ್ಗೆ ಹೆತ್ತವರೇ ಅನುಮಾನ ಪಡುತ್ತಿದ್ದಾರೆ. ಅಣ್ಣ, ತಮ್ಮ, ಅತ್ತಿಗೆ, ಮೈದುನ ಎನ್ನುತ್ತ ಮಾತಿಗಿಳಿಯುತ್ತಿದ್ದವರ ಬಾಯಲ್ಲಿ ಇವರ್ಯಾಕಪ್ಪ ಈಗ ಬರುತ್ತಿದ್ದಾರೆ ಎನ್ನುವ ಅನುಮಾನದ ಮಾತುಗಳು ಸಿಡಿಯುತ್ತಿವೆ. ವಿದೇಶದಲ್ಲಿದ್ದವರ ಕುರಿತು ಹೆಮ್ಮೆ ಪಡುತ್ತಿದ್ದವರು ಸಧ್ಯದ ಸ್ಥಿತಿಯಲ್ಲಿ ಅನುಮಾನ ಪಡುತ್ತಿದ್ದಾರೆ. ಇಲ್ಲಿಯವರೆಗಿನ ಎಲ್ಲ ಮಾತುಗಳು ಅವಕಾಶ ಸಿಕ್ಕಾಗ ಆಡಿದ ಮಾತುಗಳೇ ಹೊರತು ಅಂತರಂಗದಿಂದ ಅರಳಿದ ಮಾತುಗಳಲ್ಲ ಎನ್ನುವುದನ್ನು ತೋರಿಸುವಲ್ಲಿ ಕರೋನಾದ ಪಾತ್ರ ಬಹಳ ಮಹತ್ವದ್ದಾಗಿದೆ. ಅದಕ್ಕೆ ಹೇಳಿದ್ದು ಮಾಸ್ಕ ಎನ್ನುವುದು ನಮ್ಮ ತಪ್ಪುಗಳನ್ನ ಮುಚ್ಚು ಹಾಕಿಕೊಳ್ಳುವುದಕ್ಕಾಗಿ ಬಳಸುತ್ತಿರುವ ಆಯುಧವಾಗುತ್ತಿದೆ ಅಷ್ಟೆ.

ಮೊದಲೊಂದು ಕಾಲವಿತ್ತು ಆಗ "ಕೆಟ್ಟು ಪಟ್ಟಣ ಸೇರು" ಎನ್ನುತ್ತಲಿದ್ದರು. ಆದರೆ ವಾಸ್ತವದಲ್ಲಿ ಆ ಮಾತಿನ ವರಸೆಯೇ ಬದಲಾಗಿ ಹೋಗಿದೆ. ಪ್ರಸ್ತುತ "ಪಟ್ಟಣ ಕೆಟ್ಟಿದೆ ಊರು ಸೇರು" ಎನ್ನುವ ಹಂತಕ್ಕೆ ಬಂದು ತಲುಪಿದೆ. ಆ ಮಾತಿನ ಮರ್ಮವನ್ನು ಕರಾಳ ಕರೋನಾ ಮನದಟ್ಟು ಮಾಡಿ ಕೊಟ್ಟಿದೆ. ಇರುವ ಜಮೀನಿನಲ್ಲಿ ಉತ್ತು ಬಿತ್ತು ಜೀವನ ನಡೆಸಬಾರದೇಕೆ? ಎನ್ನುವುದು ತಂದೆಯ ವಾದವಾದರೇ, ಪಿತ್ರಾಜರ್ಿತವಾಗಿ ಬಂದ ಜಮೀನಿನಲ್ಲಿ ನಾನ್ಯಾಕೆ ದುಡಿಯಲಿ, ನಾನು ಕಲಿತಿದ್ದು ಇದಕ್ಕಾಗಿಯೇ? ಎನ್ನುವುದು ಮಗನ ವಾದ. ರೈತನಲ್ಲ ಎನ್ನುವ ಕಾರಣಕ್ಕೆ ನಿನ್ನನ್ನು ಮದುವೆಯಾದೆ ಎನ್ನುವುದು ಹೆಂಡತಿಯ ವಾದ, ಈ ವಾದಗಳ ಮಧ್ಯದಲ್ಲಿ ಹಳ್ಳಿಯಲ್ಲಿದ್ದರೆ ಬೆಳವಣಿಗೆ ಅಸಾಧ್ಯ ಎಂದು ಹೇಳಿ, ವರ್ಷಕ್ಕೆ ಹತ್ತು ಲಕ್ಷ ಬೆಳೆಯಬಹುದಾದ ಜಮೀನಿಗೆ ನಮಸ್ಕಾರ ಮಾಡಿ, ಹತ್ತು ಸಾವಿರ ರೂಪಾಯಿಗಳ ತಿಂಗಳ ಸಂಬಳಕ್ಕೆ ದುಡಿಯಲು ಪಟ್ಟಣಕ್ಕೆ ಕಾಲಿಟ್ಟ ನಾವುಗಳು ಇಂದು ಕೊರೋನಾ ಹೊಡೆತ ನೀಡುತ್ತಲೇ ಹುಟ್ಟಿದ ಊರನ್ನು ಬಿಟ್ಟು ಬಂದು ತಪ್ಪು ಮಾಡಿದೆವು ಎಂದು ಹೇಳುತ್ತ ಊರಿನ ಕುರಿತು ಜಪ ಮಾಡುತ್ತಿದ್ದೇವೆ. 

ಆ ದಿನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳುವುದನ್ನು ಬಿಟ್ಟು, ಪಟ್ಟಣ ಎನ್ನುವ ಪ್ರಪಂಚದಲ್ಲಿ ಬದುಕು ಕಟ್ಟಿಕೊಳ್ಳಲು ಅಡಿ ಇಟ್ಟೆವು. ಜೀವನ ಎನ್ನುವ ಬ್ಲ್ಯಾಕ್ ಅಂಡ್ ವೈಟ್ ಚಿತ್ರವನ್ನು ಕಲರ್ ಕನ್ನಡಕ ಧರಿಸಿಕೊಂಡು ನೋಡಿ ರಂಗು ರಂಗಾಗಿ ಕಂಡು ಖುಷಿ ಪಟ್ಟೆವು. ಕಣ್ಣಿಗೆ ಹಾಕಿದ ಬಣ್ಣದ ಕನ್ನಡಕವನ್ನು ಕಿತ್ತೆಸೆದು ಬದುಕು ಎಂದರೆ ನೀನಂದುಕೊಂಡಂತೆ ನಡೆಯುವುದಲ್ಲ ನಾನು ಹೇಳಿದ ಹಾಗೆ ನಡೆಯಬೇಕು ಎನ್ನುವ ಸರ್ವಶ್ರೇಷ್ಠ ಸತ್ಯವನ್ನು ಕೊರೋನಾದ ಮೂಲಕ ಪ್ರಕೃತಿ ಇಂದು ನಮಗೆ ಮನದಟ್ಟು ಮಾಡಿ ಕೊಡುತ್ತಲೇ ಮತ್ತೆ ಹಳ್ಳಿ ಎಡೆಗೆ ಮುಖ ಮಾಡಿ ನಿಂತಿದ್ದೇವೆ. ಅದಕ್ಕೆ ಹೇಳಿದ್ದು ಇಂದು ನಾವು ಹಾಕಿಕೊಳ್ಳುತ್ತಿರುವ ಮಾಸ್ಕ ಕೇವಲ ನೆಪ ಮಾತ್ರ, ವಾಸ್ತವದಲ್ಲಿ ನಮ್ಮ ಹೆತ್ತವರಿಗೂ ಮುಖ ತೋರಿಸುವ ಯೋಗ್ಯತೆಯನ್ನು ನಾವು ಕಳೆದುಕೊಂಡಿದ್ದೇವೆ.

ಕೊರೊನಾದ ನಿಯಂತ್ರಕ್ಕಾಗಿ ಇಡೀ ಭಾರತವನ್ನೇ ಲಾಕ್ಡೌನ್ ಮಾಡಿದಾಗ ನಿಜಕ್ಕೂ ಪ್ರಕೃತಿಗೆ ಒಂದು ದೊಡ್ಡ ರಿಲೀಪ್ ದೊರೆತ ಅನುಭವವಾಗಿತ್ತು. ಎಲ್ಲೆಡೆ ನೀರವ ಮೌನ. ಯಂತ್ರಗಳ ಕರ್ಕಶ ಶಬ್ದವಿಲ್ಲ, ವಾಹನಗಳ ಓಡಾಟವಿಲ್ಲ, ವಿಷಕಾರಕ ಹೊಗೆಯು ಹೊರ ಹೊಮ್ಮುತ್ತಿಲ್ಲ, ವಾಯು ಮಾಲಿನ್ಯ, ಜಲ ಮಲಿನ್ಯ, ಶಬ್ದ ಮಾಲಿನ್ಯಗಳಿಗೆ ಒಂದೇ ಬಾರಿ ಬ್ರೇಕ್ ಬಿದ್ದಂತಾಗಿ ಭಾರತದ ಚಿತ್ರಣವೇ ಬೇರೆಯಾಗಿ ಹೋಗಿತ್ತು. ಅಷ್ಟೂದಿನಗಳಲ್ಲಿ ಕೇಳದ ಹಕ್ಕಿಗಳ ನಿನಾದ ಕೇಳಲಾರಂಭಿಸಿತ್ತು. ದೇಹಕ್ಕೆ ಶುದ್ಧ ಗಾಳಿಯನ್ನು ಸೇವಿಸುತ್ತಿರುವ ಅನುಭವವಾಗುತ್ತಿತ್ತು. ನದಿಗಳು ಖುಷಿಯಾಗಿ ಹರಿಯುತ್ತಲಿದ್ದವು. ಮರಗಳು ಹಾಯಾಗಿ ತೂಗಾಡುತ್ತಿದ್ದವು. 

ಹೂಗಳು ಸಂತೋಷದಿಂದ ಕಂಪು ಸೂಸೂತ್ತಿದ್ದವು. ದುಂಬಿಗಳು ಯಾರ ಅಂಜಿಕೆ ಅಳುಕಿಲ್ಲದೆ ಪರಾಗ ಹೀರುವ ಕಾಯಕದಲ್ಲಿ ಮಗ್ನವಾಗಿದ್ದವು. ಬೆಂಗಳೂರಿನಂತ ಕಾಂಕ್ರಿಟ್ ಕಾಡಿನಲ್ಲೂ ಕೂಡ ನವಿಲುಗಳು ನಡು ರಸ್ತೆಗಿಳಿದು ನರ್ತನ ಮಾಡಿದವು. ಕಾಡಿನಲ್ಲಿನ ಪ್ರಾಣಿಗಳು ವಾಯು ವಿಹಾರಕ್ಕೆಂದು ನಗರಕ್ಕಾಗಮಿಸಿದವು. ಈ ಎಲ್ಲ ಚಿತ್ರಣಗಳನ್ನು ಕಣ್ಣಾರೆ ಕಂಡಾಗ ನಾವು ನಿಜವಾಗಲು ಮಾಡಿದ ಹಾಗೂ ಮಾಡುತ್ತಲಿರುವ ತಪ್ಪಿನ ಅರಿವು ನಮಗಾಗುತ್ತದೆ. ಲಾಕ್ಡೌನ್ ಮುಂಚೆ ಇಂಥ ದೃಷ್ಯಗಳನ್ನು ಯಾವತ್ತೂ ಕಾಣುವುದಕ್ಕೆ ಸಾಧ್ಯವೇ ಇರಲಿಲ್ಲ. ಹಕ್ಕಿಯ ಹಾಡುಗಳಾಗಲಿ, ಗಾಳಿಯ ಘಮವಾಗಲಿ, ಹೂವಿನ ಗಂಧವಾಗಲಿ ಯಾವುದು ಶುದ್ಧವಾಗಿ ಉಳಿದಿರಲಿಲ್ಲ. ಉಳಿದಿರಲಿಲ್ಲ ಎನ್ನುವುದಕ್ಕಿಂತ ಅದುನ್ನು ಹಾಳು ಮಾಡಿ ಬಹಳ ವರ್ಷಗಳೇ ಕಳೆದು ಹೊಗಿವೆ. ಕಾಡುಗಳನ್ನು ನಾಶ ಮಾಡಿದ ನಾವು ಕಾಡು ಪ್ರಾಣಿಗಳ ಆಶ್ರಯವನ್ನು ಕಿತ್ತುಕೊಂಡೆವು. ಅವುಗಳ ಸಾಮ್ರಾಜ್ಯವನ್ನು ಕಬಳಿಸಿದ ನಾವುಗಳು ಇಂದು ಕಾಡು ಪ್ರಾಣಿಗಳ ಜಾಗದಲ್ಲಿ ಕಾಡುವ ಪ್ರಾಣಿಗಳಾಗಿ ಬದುಕು ಮಾಡುತ್ತಿದ್ದೇವೆ. ಮಾನವನ ದೌರ್ಜನ್ಯಕ್ಕೆ ನಲುಗಿದ ಆ ಪ್ರಾಣಿಗಳೆಲ್ಲ ಒಲಸೆ ಹೋಗುವಂತಾಯಿತು. ಇದು ಕೂಡ ನಾವು ನಿಸರ್ಗಕ್ಕೆ ಮಾಡಿದ ಅವಮಾನವಲ್ಲದೇ ಮತ್ತೇನಾಗಲು ಸಾಧ್ಯ?.ಹೀಗೆ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಹೆಜ್ಜೆ ಹಾಕುತ್ತ ಬಂದ ನಮಗಳಿಗೆ ಈಗ ಬಂದೊದಗಿರುವ ಸ್ಥಿತಿ ಒಂದು ಹಂತದಲ್ಲಿ ನಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಎನ್ನಬಹುದು. ತಿನ್ನುವ ಆಹಾರಕ್ಕೆ ವಿಷಹಾಕಿ ಬೆಳೆಸುವ ನಮಗೆ ಅದು ಶಕ್ತಿ ನೀಡು ಎಂದರೆ ಎಲ್ಲಿಂದ ನೀಡಲು ಸಾಧ್ಯ? ಕಾಯಿ ಹಣ್ಣಾಗುವುದುಕ್ಕೆ ನಿದರ್ಿಷ್ಟ ಸಮಯವಿದೆ. ಆದರೆ ಆ ಸಮಯದ ವರೆಗೆ ಕಾಯುವಷ್ಟು ಸಂಯಮವಾಗಲಿ, ತಾಳ್ಮೆಯಾಗಲಿ ನಮಗಿಲ್ಲ. ಆದ ಕಾರಣ ರಾಸಾಯನಿಕಗಳನ್ನು ಬಳಸಿ ಸಮಯಕ್ಕೂ ಮೊದಲೆ ಹಣ್ಣಾಗಿಸಿ ತಿನ್ನುವ ನಮಗಳಿಗೆ ಆರೋಗ್ಯ ಬಾ ಎಂದರೆ ಎಲ್ಲಿಂದ ಬರಲು ಸಾಧ್ಯ? ಫಲವತ್ತಾದ ನೆಲದಲ್ಲಿ ಅಧಿಕವಾದ ಲಾಭ ಪಡೆಯುವ ದುರಾಸೆಯಿಂದ ರಾಸಾಯನಿಕ ಗೊಬ್ಬರಗಳನ್ನು ಹಾಕಿ ನೆಲವನ್ನು ಹಾಳು ಮಾಡಿದ್ದೇವೆ. 

ಇನ್ನು ಆ ನೆಲದಲ್ಲಿ ಬೆಳೆಯುವ ಬೆಳೆ ನಮಗೆ ಶಕ್ತಿ ನೀಡುತ್ತದೆ ಎಂದು ನಂಬಿದರೆ ನಮ್ಮಂತ ಮೂರ್ಖ ಮತ್ತೊಬ್ಬನಿರಲಾರ. ದೇಶ ದೇಶಗಳನ್ನು ಸೃಷ್ಠಿಮಾಡಿ ದಾಸ್ಯ ಸಂಕೋಲೆಗಳನ್ನು ಹಾಕಲು ಬಯಸುವ ಮಾನವನಿಗೆ ಸರಿಯಾದ ಶಾಸ್ತಿ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ನಿಸರ್ಗ ಪದೆ ಪದೆ ನಮ್ಮನ್ನು ಪರೀಕ್ಷೆಗೆ ಒಡ್ಡುತ್ತಿದೆ. ಆದರೂ ಬುದ್ಧಿ ಕಲಿಯದ ನಾವುಗಳು ಪ್ರವಾಹಕ್ಕೆ ಎದುರಾಗಿ ಈಜುವ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದೇವೆ. ಹುಟ್ಟು ಎಂದಮೇಲೆ ಅದಕ್ಕೆ ಸಾವು ಇದ್ದೇ ಇದೆ. ಅದು ಕಟ್ಟಿಟ್ಟ ಬುತ್ತಿ. 

ಅದು ಬಂದಾಗ ಬರಲಿ ಬಿಡಿ. ಅದನ್ನು ಬಿಟ್ಟು ನಿಸರ್ಗದ ವಿರುದ್ಧ ನಡೆದುಕೊಂಡರೆ ಸಾವನ್ನೇ ನಾವು ಆಹ್ವಾನ ಪತ್ರಿಕೆ ನೀಡಿ ಕರೆಸಿಕೊಂಡಂತೆ ಆಗುತ್ತದೆ. ಕೊರೊನಾದಿಂದ ಜಗತ್ತಿಗೆ ಸಾಕಷ್ಟು ತೊಂದರೆ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಜೊತೆಯಲ್ಲಿ ನಮ್ಮ ಕರಾಳ ನಡೆಯ ಪರಿಣಾಮವನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಲ್ಲಿಯೂ ಈ ಕಳ್ಳ ಕ್ರಿಮಿ ಯಶಸ್ವಿಯಾಗಿದೆ. ಈ ರೋಗದಿಂದ ತಪ್ಪಿಸಿಕೊಳ್ಳಲು ಮಾಸ್ಕ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ಇನ್ನೊಂದು ಬದಿಯಿಂದ ಯೋಚಿಸಿದರೆ ನಿಜಕ್ಕೂ ಮಾಸ್ಕ್ ಎನ್ನುವುದು ನೆಪಮಾತ್ರವಾಗುತ್ತದೆ. ಅಸಲಿಗೆ ನಾವು ಈ ನಿರ್ಗಕ್ಕೆ ಮುಖ ತೋರಿಸುವ ಅರ್ಹತೆಯನ್ನೇ ಕಳೆದುಕೊಂಡಿದ್ದೇವೆ ಎನ್ನುವುದರ ಪ್ರತಿಕವಾಗಿ ಕಾಣುತ್ತದೆ. ಅಲ್ಲವೇ?

ಮಂಜುನಾಥ ಜುನಗೊಂಡ

ವಿಜಯಪುರ