ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
-ನಾಗೇಶ್ ಜೆ. ನಾಯಕ
ಶಿಕ್ಷಕರು, ಸವದತ್ತಿ
ದೂರದರ್ಶನ ಚಂದನವಾಹಿನಿಯಲ್ಲಿ ಕಾರ್ಯಕ್ರಮ ನಿದರ್ೇಶಕಿಯಾಗಿ ಕೆಲಸ ಮಾಡುತ್ತಿರುವ ಆರತಿ ಎಚ್. ಎನ್. ಮೂರು ದಶಕದಿಂದಲೂ ಕಾವ್ಯದ ಸಾಂಗತ್ಯದಲ್ಲಿ ಸುಖ-ಯಾತನೆ, ನೆಮ್ಮದಿ-ಚಡಪಡಿಕೆ ಕಂಡುಕೊಂಡವರು. ತಮ್ಮ ಎರಡು ಕವನ ಸಂಕಲನಗಳ ಮೂಲಕ ಚಿರಪರಿಚಿತರಾಗಿದ್ದ ಇವರು ಈಗ 'ಸ್ಮೋಕಿಂಗ್ ಝೋನ್ ಎಂಬ ಮೂರನೆಯ ಕವನ ಸಂಕಲನ ಪ್ರಕಟಿಸಿ ಓದುಗರಿಗೆ ಮುಖಾಮುಖಿಯಾಗಿದ್ದಾರೆ. ಬದುಕಿನ ನಾನಾ ಮಜಲುಗಳನ್ನು ಕವಿತೆಯ ಮೂಲಕ ಹಿಡಿದಿಡುವ ಆರತಿ, ನಮಗೆ ತೀರಾ ಇಷ್ಟವಾಗುವುದು ಮುಕ್ತ, ನಿಭರ್ಿಡೆಯ ಬರವಣಿಗೆಯಿಂದ. ಬೆಂಗಳೂರಿನಂತ ಸಿಟಿಯಲ್ಲಿ ಹೆಣ್ಣುಮಗಳೊಬ್ಬಳು ತನ್ನ ಉದ್ಯೋಗದೊಂದಿಗೆ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಸ್ಥಿತಿ, ಬದಲಾದ ಕಾಲಘಟ್ಟದಲ್ಲಿ ಆಕೆ ಅನುಭವಿಸುವ ಥರಹೇವಾರಿ ಸಂಕಟಗಳು, ಅವೆಲ್ಲವನ್ನೂ ಎದುರಿಸಿ ಮುನ್ನುಗ್ಗುವ ಪರಿ, ಗುರುತ್ವ ಸಾಧಿಸಲೆತ್ನಿಸುವ ಪುರುಷ ಸಮಾಜದ ಮುಖವಾಡಗಳೆಲ್ಲವೂ ಕವಿತೆಯಲ್ಲಿ ವಿಷಯವಸ್ತುಗಳಾಗಿ ಗಮನ ಸೆಳೆಯುತ್ತವೆ.
ಎಚ್. ಎನ್. ಮೋಹನ್ ಸಂಕಲನಕ್ಕೆ ಬರೆಯುತ್ತಾ "ಬೆರಗುಗಣ್ಣಿನ ಆರತಿಯ ಕಾವ್ಯದ ಪುಟಗಳನ್ನು ತಿರುಗಿಸುತ್ತಾ ಹೋದರೆ ನಿಮಗೆ ತಕ್ಷಣ ಗೊತ್ತಾಗುವುದು ಅವಳ ಕಾವ್ಯಕ್ಕೂ ಬೆರಗುಗಣ್ಣು ಇದೆ ಎಂದು. ಮಾಧ್ಯಮದ ಗಿರಣಿ ಹೊಕ್ಕವರ ಬರಹದ ಕಥೆ ಮುಗಿಯಿತು ಎನ್ನುವಾಗ ಆರತಿ ಮಾಧ್ಯಮದ ಗಿರಣಿಯೊಳಗಿಂದಲೇ ಕವಿತೆ ಎತ್ತಿ ತರುತ್ತಾಳೆ. ಈ 'ಸ್ಮೋಕಿಂಗ್ ಝೋನ್ ಪುಟ ತಿರುಗಿಸಿ ನೋಡಿ 'ಯಾಕೆ ಈ ಕವಿತೆಗಳನ್ನು ನಮಗೆ ಮೊದಲೇ ಕೊಡಲಿಲ್ಲ ಎಂದು ನೀವು ಅವಳನ್ನು ತರಾಟೆಗೆ ತೆಗೆದುಕೊಳ್ಳದಿದ್ದರೆ ಕೇಳಿ" ಎಂದು ಆಪ್ತವಾಗಿ ಕವಿತೆಯ ಬೆರಗುಗಳ ಬಗ್ಗೆ ತೆರೆದಿಡುತ್ತಾರೆ. ಪ್ರತಿಭಾ ನಂದಕುಮಾರ್ ಅವರೂ ಕೂಡ "ಈ ಸಂಕಲನದ ಕವನಗಳು ಮೇಲ್ನೋಟಕ್ಕೆ ಬಹಳ ಸರಳ ಅನ್ನಿಸುತ್ತವೆ. ಆದರೆ, ಸ್ವಲ್ಪ ತಡಿ ಇನ್ನೊಮ್ಮೆ ಓದೋಣ ಎಂದು ನಿಧಾನಿಸಿದಾಗ ಸಾಲುಗಳು ಸ್ಲೋ ಮೋಷನ್ನಿನಲ್ಲಿ ಬಿಚ್ಚಿಕೊಳ್ಳುತ್ತಾ ಹೋಗಿ ಒಳಗೆ ಇಳಿಯುತ್ತವೆ" ಎನ್ನುತ್ತಾರೆ. ಸಂಕಲನದ ಎಲ್ಲ ಕವಿತೆಗಳನ್ನು ಓದಿದಾಗ ನಮಗೂ ಹಾಗೆನಿಸದೇ ಇರದು. 'ಹೇಳುವಷ್ಟು ಹೇಳಿದ್ದೇನೆ, ಹೇಳಲಾಗದ್ದು ಬೇಕಾದಷ್ಟಿದೆ. ಹಾಗಾಗಿ, ಹೇಳಲು ಇನ್ನೂ ಎಷ್ಟೋ ಉಳಿಸಿಕೊಂಡಿದ್ದೇನೆ' ಎನ್ನುತ್ತಲೇ ಓದುಗನಲ್ಲಿ ಇನ್ನಷ್ಟು ಕುತೂಹಲ ಹುಟ್ಟಿಸುವ ಆರತಿ ಅವರ 'ಸ್ಮೋಕಿಂಗ್ ಝೋನ್ ನಲ್ಲಿ 36 ಕವಿತೆಗಳಿವೆ.
ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಬಿಗ್ಗಬಿಗಿ ಸಂಕೋಲೆಗಳಲ್ಲಿ ಬಂಧಿಸಿಟ್ಟ ಸಂಪ್ರದಾಯಗಳು, ಆಕೆಯ ಒಳಮನಸಿನ ಕನಸುಗಳಿಗೆ ಕಿವಿಯಾಗುವುದನ್ನು ನಿಲ್ಲಿಸಿ ಎಷ್ಟೋ ಶತಮಾನಗಳೇ ಕಳೆದವು. ನಿಯಮ ಪಾಲಿಸಿದರೆ ಮಾತ್ರ ಪತಿವೃತೆಯ ಪಟ್ಟವನ್ನು ಕಟ್ಟುವ ಲೋಕದ ಜಂಜಡಗಳಿಂದ ದೂರ ದೂರ ಹೋಗಬೇಕೆನ್ನುವ ಮಹಿಳೆ ಹೋಗುವುದಾದರೂ ಎಲ್ಲಿಗೆ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವ 'ಹೊರಡಬೇಕಿದೆ ಎಲ್ಲ ಬಿಟ್ಟು' ಕವಿತೆ ಹೆಣ್ಣಿನ ಅಂತರಂಗದ ಭಾವಗಳಿಗೆ ವೇದಿಕೆಯಾಗುತ್ತದೆ. ಹಾಗೆಯೇ ಹೊರಡುತ್ತೇನೆ ಈ ಕ್ಷಣ ಎಲ್ಲ ಬಿಟ್ಟು ಎನ್ನುವವರು ಯಾರೂ ಯಾವತ್ತೂ ಯಾರಿಗೂ ಹೇಳಿ ಹೋಗುವುದಿಲ್ಲ ಎನ್ನುವ ವಾಸ್ತವವನ್ನು ತೆರೆದಿಡುತ್ತದೆ.
ಹೊರಡಬೇಕಿದೆ ಎಲ್ಲ ಬಿಟ್ಟು ಜರೂರಾಗಿ
ಭೂಪಟ ತೆರೆದರೆ, ಬರೀ ಗಡಿರೇಖೆ
ಸರಹದ್ದು, ಮುಳ್ಳು ಬೇಲಿಗಳೇ
ಹೊರಟ ಜಾಗಕ್ಕೂ ಇಲ್ಲಿಗೂ ಹೆಚ್ಚೇನೂ
ವ್ಯತ್ಯಾಸವಿಲ್ಲ. ನಿಯಮ ಇರುವುದು
ಕೇವಲ ಮುರಿಯುವದಕ್ಕಲ್ಲ
ಪಾಲಿಸಲು ಪರಮಾತ್ಮನಾಗಬೇಕಿಲ್ಲ
ಪ್ರತಿವೃತೆಯಾದರೆ ಸಾಕು!
ಅಷ್ಟು ಸುಲಭವಾಗಿ ಸಂಬಂಧಗಳನ್ನು ಜತನದಿಂದ ಬಿಡಿಸಿಕೊಂಡು ನಡೆದು ಬಿಡುವುದು ಆಗುವುದಿಲ್ಲ. ಕರುಳಬಳ್ಳಿಯ ಬಂಧ ಕಾಲಿಗೆ ತೊಡರಿಕೊಂಡು ಮುಂದಡಿ ಇಡದಂತೆ ಮಾಡುತ್ತದೆ. ಘಾಸಿ ಮಾಡಲೇಬೇಕು ಎಂದು ನಿರ್ಧರಿಸಿದ ಮನಸೂ ಆಸೆ-ಭಾಷೆ, ಕನಸು-ಮನಸನ್ನು ಮುರಿದುಕೊಂಡು ಶಪಥದಿಂದ ಹಿಂದೆ ಸರಿಯುತ್ತದೆ. ಘಾತಕ್ಕೆ ಒಳಗಾದ ಮನಸು ಮಾತ್ರ ಯಾರಿಗೂ ಆಘಾತ ಮಾಡದೆ ಮಾನವೀಯತೆ ಮೆರೆಯುತ್ತದೆ. 'ಮುರಿಯಲೇ ಬೇಕು' ಎನ್ನುವ ಕವಿತೆ ಹೊಮ್ಮಿಸುವ ಭಾವ ಆಪ್ತವೆನಿಸುತ್ತದೆ.
ಮುರಿಯಲಾಗದು ಬಾಳು
ಅದು ಸುಲಭವಲ್ಲ
ಭಾವ ತಂತುಗಳ ಜಗ್ಗಿ
ಹಿಡಿದು ನಗುತ್ತದೆ ಮಗು
ಘಾತ ಗೊತ್ತಿದ್ದವರು
ಆಘಾತ ಮಾಡುವುದಿಲ್ಲ
ಸಂಕಲನದ 'ಲಿಫ್ಟ್' ಕವಿತೆ ವಿಭಿನ್ನ ಮನಸ್ಥಿತಿಯ ಜಗತ್ತಿನ ಅನಾವರಣ ಮಾಡುತ್ತದೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ಸಾಗುವ ಕವಿತೆ ಕೊನೆಗೆ ಸಮಷ್ಠಿಯನ್ನು ದಶರ್ಿಸುತ್ತದೆ. ಲಿಫ್ಟ್ನೊಳಗಿನ ಕೃತಕ ಕಸಿವಿಸಿಯ ಮೌನ, ಮೈಗಂಧ, ಉದುರಿ ಚಪ್ಪಟೆಯಾದ ಹೂವಿನ ಎಸಳು, ಹರಡಿಕೊಂಡ ಹುಸಿಮುನಿಸು, ತೊಟ್ಟಿಕ್ಕಿರುವ ಕಣ್ಣೀರು, ಆವರಿಸಿಕೊಂಡ ಮುಗುಳುನಗು, ಹೊಸಪ್ರೇಮಿಯ ಅಭೀಪ್ಸೆ ಎಲ್ಲವನ್ನೂ ಈಗಷ್ಟೇ ನಡೆದಂತೆ ಕಟ್ಟಿಕೊಡುವ ಪರಿ ಅನನ್ಯವೆನಿಸುತ್ತದೆ. ಬದುಕಿನ ಸಿದ್ಧಾಂತಗಳೆಲ್ಲ ಲಿಫ್ಟ್ನ ಮೂಲಕವೇ ಅನಾವರಣಗೊಳಿಸುವ ಪರಿ ಅನೂಹ್ಯವಾದುದು.
ನಮ್ಮದಲ್ಲದ ಈ ಜಾಗಕ್ಕೆ
ಧಡಕ್ಕನೇ ತೆರೆಯುವ ಬಾಗಿಲು
ಒಳಹೊಕ್ಕ ಕೂಡಲೇ ಹರಡುವ
ಕೃತಕ ಕಸಿವಿಸಿಯ ಮೌನ
ಯಾರದೋ ಬೇಡದ ಸಾವಿಗೆ
ಗೌರವ ಸೂಚಿಸುವ ಶೋಕಸಭೆ
ಈಗ ಲಿಫ್ಟಿನೊಳಗೆ
'ಸೆಲ್ಫಿಯ ಹುಚ್ಚು ಜಗವನ್ನು ಆವರಿಸಿಕೊಂಡಿರುವ ರೀತಿ ಅಚ್ಚರಿ ಮೂಡಿಸಿದೆ. ಯಾರಿಗೆ ಯಾರೂ ಸಂಬಂಧವೇ ಇಲ್ಲವೇನೋ ಎಂಬಂತೆ, ತಮ್ಮಷ್ಟಕ್ಕೆ ತಾವೇ ತಮ್ಮ ತಮ್ಮ ಮುಖವನ್ನೇ ನೋಡಿಕೊಳ್ಳುತ್ತಾ, ಕೃತಕ ನಗೆಯ ಸೋಗುಗಳಲ್ಲೇ ಕಳೆದು ಹೋಗಿರುವ ಕ್ಷಣದಲ್ಲಿ ಕಣ್ಣ ವಿಷಾದಗಳಿಗೆಲ್ಲಿಯ ಕಿಮ್ಮತ್ತು? ದೇವರು ವರವ ನೀಡುವೆನೆಂದು ಬಂದರೂ ಆತನ ಜೊತೆಗೂ ಒಂದು ಸೆಲ್ಫಿ ತೆಗೆಸಿಕೊಳ್ಳುವ ಆತ್ಮರತಿಯ ಬದುಕು ಮಬ್ಬುಚಿತ್ರದಂತೆ ಕಾಣುವ ಸ್ಥಿತಿಯನ್ನು 'ಸೆಲ್ಫಿ ಕವಿತೆ ಕಾಣಿಸುತ್ತದೆ.
ಜಗತ್ತಿನಿಂದ ಕಳಚಿಕೊಂಡ ಕೊಂಡಿಗಳು
ಎಲ್ಲೆಲ್ಲೂ. ಸುತ್ತ ಬರೀ ಮುಖಗಳೇ
ಮುಖಕ್ಕೆ ಮುಖ ಕೊಟ್ಟು ಮಾತಾಡಲೂ
ಪುರುಸೊತ್ತಿಲ್ಲದ ಅಬ್ಬರದಲ್ಲಿ
ಕಣ್ಣ ವಿಷಾದಕ್ಕೇನು ಕೆಲಸ?
ಸದಾ ಹೊಳೆಯುತ್ತಿರಬೇಕು ಮುಖಾರವಿಂದ!
ಪೊಗದಸ್ತಾಗಿ ಹೆಂಡತಿಯ ಬೈಗುಳದ ಊಟ ಮಾಡಿ, ಬಸ್ಸಿಗೂ ಕಾಸಿಲ್ಲದೇ ನಡೆದು ಬಂದ ಪಾದ, ಮಕ್ಕಳ ಬೇಡಿಕೆಯ ಲಿಸ್ಟು ಜೇಬಿನಿಂದ ಎದೆಗೆ ಗುದ್ದಿದರೂ, ಬೆಳಿಗ್ಗೆ ಅತ್ತೆ, ಮುಡಿ ಹಿಡಿದು ಎಳೆದಾಡಿದ್ದರೂ, ಸಾಕೆಂದರೂ ರಾತ್ರಿ ಗಂಡ ಹಿಂಡಿ ಅದುಮಿದ್ದ ದೇಹ ದುಮುಗುಡುತ್ತಿದ್ದರೂ, ಕಾಸು ಬಿಸುಟು ಹೊರಟ ಮಗನ ನೆನಪು ಕಾಡಿದರೂ ಏನನ್ನೂ ತೋರಿಸಿಕೊಳ್ಳದೆ ಕೃತಕ ನಗೆಯನ್ನು ಮೊಗದಲ್ಲಿ ತಂದುಕೊಂಡು 'ನಾನು ಚೆನ್ನಾಗಿದ್ದೇನೆ' ಎಂದು ತೋರಿಸಿಕೊಳ್ಳುವ ಮುಖವಾಡಗಳ ಹಿಂದಿನ ವಿಷಾದಕ್ಕೆ ದನಿಯಾಗುತ್ತದೆ ಕವಿತೆ.
ನೀವು ಚೆನ್ನಾಗಿದ್ದೀರಾ?
ಹೌದು, ನಾನು, ನೀವು
ಎಲ್ಲಾ ಹೀಗೇ
ಚೆನ್ನಾಗಿದ್ದೀವಿ....
ಧಾವಂತದ ಜಗತ್ತಿನಲ್ಲಿ ಪ್ರೀತಿ ಪ್ರೇಮಕ್ಕೆ ಸಮಯವೇ ಇಲ್ಲದಂತಾಗಿ ಯಾಂತ್ರೀಕೃತ ಬದುಕು ಸುಡುವ ಸಿಗರೇಟಿನಂತೆ ದುಮುದುಮುಗುಟ್ಟುತ್ತಿದೆ. ನಿಗಿನಿಗಿ ಕೆಂಡದಂಥ ಕಣ್ಣುಗಳು ಹೊಗೆಯುಗುಳಿ ವಿರಹ, ವಿಷಾದದ ಬೇಗೆಯಲ್ಲಿ ಬದುಕು ವಿಲವಿಲಗುಟ್ಟುತ್ತಿರುವುದನ್ನು ಸಂಕಲನದ ಶೀಷರ್ಿಕೆಯ ಕವಿತೆ 'ಸ್ಮೋಕಿಂಗ್ ಝೋನ್ ವ್ಯಕ್ತಪಡಿಸುತ್ತದೆ.
ಗದ್ದಲದ ಜಗತ್ತಿನಲ್ಲಿ
ಪ್ರೇಮಕ್ಕುಳಿದಿದೆ
ಬಟ್ಟಲು ಶರಾಬಿನಷ್ಟೇ
ಸಮಯ!
ಉಸಿರಿಗೂ ಪರವಾನಿಗೆ ಯಾಚಿಸುವ ಯಾತನೆ ಯಾರಿಗೂ ಬರಬಾರದು, ಮುಚ್ಚಿದ ಬಾಗಿಲ ಹೊರಗೆ, ಜಗತ್ತಿಗೆ ಎಲ್ಲವೂ ಸರಿಯಾಗಿದೆ ಎಂದು ತೋರಿಸುವುದು ಅದೆಷ್ಟು ಸುಲಭ, ನಿನ್ನ ಬೆರಳಲ್ಲಿರುವ ಸಿಗರೇಟು, ಬೂದಿ ಕೊಡವಿದಂತೆ ನನ್ನ ಭಾವನೆಗಳು ಹರಡಿವೆ ಚೆಲ್ಲಾಪಿಲ್ಲಿ, ಕವಿತೆ ಹುಟ್ಟುವ ಘಳಿಗೆಯನ್ನು ಒಮ್ಮೆಯಾದರೂ ಧರಿಸಿ ನೋಡಬೇಕಿತ್ತು, ಹೇಳಲಾದೀತೆ ಹೆಣ್ಣಿನ ಸಂಕಟವನ್ನು ಖುಲ್ಲಂ ಖುಲ್ಲಂ, ನುಡಿಗೆ ಸಿಗುತ್ತದೆಯೇ ನೋವಿನ ನಾನಾ ಹೆರಳುಗಳು, ಸೀತೆ, ಗೆರೆ ದಾಟಿದ್ದು ಏಕೆ ಎಂಬುದು ಈಗ ಅರ್ಥವಾಗುತ್ತಿದೆ, ಒಂದೇ ಕಾರಿನಲ್ಲಿ ನಾಲ್ವರು ಅಪರಿಚಿತರು, ನಾವು ಹೀಗೆ ಒಟ್ಟಿಗಿದ್ದೇವೆ, ಒಗ್ಗಟ್ಟಾಗಿದ್ದೇವೆ, ಮನಸು ಗಾಜು ಜೋಪಾನ ಮಾಡಬೇಕು ಹೀಗೆ ಸಂಕಲನದ ಕವಿತೆಗಳ ತುಂಬ ಕಾಡುವ ಸಾಲುಗಳು ತೀರಾ ಇಷ್ಟವಾಗುತ್ತವೆ. ಕವಿತೆಗಳನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಹೇಳಲು ಉಳಿಸಿಕೊಂಡಿರುವ ಎಷ್ಟೋ ವಿಷಯಗಳನ್ನು ಕವಿತೆಗಳ ಮೂಲಕ ನಮಗೆ ಹೇಳುತ್ತಲೇ ಇರಲಿ ಎಂದು ಆಶಿಸುತ್ತಾ ಅಪರೂಪದ ಕವನ ಸಂಕಲನ ನೀಡಿದ ಆರತಿ ಎಚ್. ಎನ್. ಅವರನ್ನು ಅಭಿನಂದಿಸುತ್ತೇನೆ.