ದೊಡ್ಡಸ್ತಿಕೆಯ ಬೆನ್ನು ಹತ್ತಿ...!

ಹರಟೆ

 ( ಚೌತಿ ಸ್ಪೆಶಲ್ ) 


"ನಿಮಗೆ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಬರುವದಿಲ್ಲ.. " ಎಂದು ನನ್ನ ಹೆಂಡತಿಯದು ಯಾವಾಗಲೂ ತಕರಾರು.  ( ಅಂದರೆ ಈಗಿನ ಕಾಲದಲ್ಲಿ ಬದುಕಲು ನೀವು ಯೋಗ್ಯರಲ್ಲ ಎಂದ ಹಾಗೆ ಇರಬಹುದು). ಈ ಆಕ್ಷೇಪಣೆಗೆ ನಿರಾಕ್ಷೇಪಣಾ ಪತ್ರ ( ಓಔಅ) ಸಲ್ಲಿಸಲು ದಾಂಪತ್ಯದ ಕಳೆದ ಐವತ್ತು ವರ್ಷಗಳಲ್ಲಿ ಒಮ್ಮೆಯೂ  ನನಗೆ ಸಾಧ್ಯವಾಗಿಲ್ಲ. ಅದಕ್ಕೆ ನಾನೇ ಜವಾಬ್ದಾರಿ ಹೊರಬೇಕಾಗುತ್ತದೆ. ಏಕೆಂದರೆ ನನಗೂ ಈ ದೊಡ್ಡಸ್ತಿಕೆಗೂ ಎಣ್ಣೆ - ಸೀಗೇಕಾಯಿ ಸಂಬಂಧ. ಅಲ್ಲದೇ ನನಗೆ ನಿಜವಾಗಿಯೂ ಈ ದೊಡ್ಡಸ್ತನ ಅಥವಾ ದೊಡ್ಡಸ್ತಿಕೆ ಅಂದರೇನು, ಯಾವುದು ಎನ್ನುವದು ಸ್ಪಷ್ಟವಾಗಿ ಅರ್ಥವಾಗಿಲ್ಲವೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. 

ಯಾರೋ ಹಿರಿಯರು ಅಥವಾ ಗುರುಗಳು ನಾನು ಸಣ್ಣವನಿರುವಾಗಲೇ " ಸಿಂಪಲ್ ಲಿವಿಂಗ್ ಹಾಯ್ ಥಿಂಕಿಂಗ್" ಎಂಬ ಒಂದು ಜೀವನ ಸಿದ್ಧಾಂತವನ್ನು ( ತಪ್ಪು ಕಲ್ಪನೆಯನ್ನು?) ನನ್ನ ತಲೆಯಲ್ಲಿ ತುಂಬಿಟ್ಟುಬಿಟ್ಟಿದ್ದರಿಂದ ನಾನೂ ಅದನ್ನೇ ನಿಜವೆಂದು ನಂಬಿ  ಈತನಕ ನಿಷ್ಠೆಯಿಂದ ಅದನ್ನು ಅನುಸರಿಸಿಕೊಂಡು ಬಂದಿದ್ದಂತೂ ನಿಜ. ಅದರಿಂದ ನನಗೆ ಲಾಭ ಅಥವಾ ಹಾನಿ ಆಗಿದೆಯೇ ಇಲ್ಲವೇ ನಾನು ಹೇಳಲಾರೆ. ಆದರೆ ನನ್ನ ಹೆಂಡತಿ ಹೇಳುವಂತಹ " ದೊಡ್ಡಸ್ತಿಕೆ" ಯನ್ನು ಮೈಗೂಡಿಸಿಕೊಳ್ಳುವ ನನ್ನ ಎಲ್ಲ ಪ್ರಯತ್ನಗಳು ವಿಫಲವಾಗಿರುವದಂತೂ ನಿಜ. 

ದೊಡ್ಡಸ್ತಿಕೆ ಹೆಚ್ಚಿಸಿಕೊಳ್ಳಲು ಹಲವು ದಾರಿಗಳಿವೆ ಎನ್ನುವದು ನನ್ನ ಹೆಂಡತಿಯ ಅಭಿಪ್ರಾಯ. ಆಗಾಗ ನನಗೆ  ಆ ಕುರಿತು ಮಾರ್ಗದಶರ್ಿ ಸೂತ್ರಗಳನ್ನು ನೀಡುತ್ತಿದ್ದರೂ ಅವು ನನ್ನ ಪೂವರ್ಾಗ್ರಹಪೀಡಿತ ಮನಸ್ಸಿನೊಳಗೆ ಇಳಿಯಲು ನಿರಾಕರಿಸುತ್ತಿದ್ದವು. ಆದರೂ ಸಹ ಜೀವನದಲ್ಲೊಮ್ಮೆಯಾದರೂ ಆ ದೊಡ್ಡಸ್ತಿಕೆಯನ್ನು ಅಳವಡಿಸಿಕೊಳ್ಳಲೇಬೇಕೆಂಬ ಹಟ ನನ್ನಲ್ಲಿದೆ. ಅದಕ್ಕಾಗಿ ನಾನು ಮೊದಲು ಒಂದು ಭರ್ಜರಿ ವಿದೇಶೀ ನಾಯಿಯನ್ನು ಖರೀದಿಸುವ ವಿಚಾರ ಮಾಡಿದ್ದೇನೆ. ಆ ನಾಯಿ ಬೊಗಳಲಿ ಬಿಡಲಿ, ಕಚ್ಚಲಿ ಬಿಡಲಿ, ಕಾಣಲಿಕ್ಕಂತೂ ಭವ್ಯವಾಗಿರಬೇಕು ಮತ್ತು ದಿನಾಲು ಬೆಳಿಗ್ಗೆ ಹಾಗೂ ಸಂಜೆ ಆ  " ರುದ್ರರಮ್ಯ" ಶ್ವಾನವನ್ನು ಅದರ ಕೊರಳಿಗೆ ಕಟ್ಟಲಾದ ಬೆಲೆಬಾಳುವ  ಬೆಲ್ಟನೊಂದಿಗೆ  ಆಚೀಚೆ ಬೀದಿಗಳಲ್ಲಿ ಕೊಂಡೊಯ್ಯುವ ಮೂಲಕವಾದರೂ ನನ್ನ ದೊಡ್ಡಸ್ತಿಕೆಯನ್ನು ಪ್ರದಶರ್ಿಸಬೇಕು ಎಂಬ ಆಸೆ ನನ್ನದು. ಅದರಿಂದ ನನ್ನ ಘನತೆ ಹೆಚ್ಚುತ್ತದೋ ಇಲ್ಲವೋ ಗೊತ್ತಿಲ್ಲವಾದರೂ ನನ್ನ ಹೆಂಡತಿಯ ಆಸೆ ಸ್ವಲ್ಪವಾದರೂ ಈಡೇರಬಹುದೆಂಬ ಭಾವನೆ ನನ್ನದು. 

ಈ ನನ್ನ ನಾಯಿ ತನ್ನದೇ ಆದ ಘನಗಾಂಭೀರ್ಯದೊಡನೆ ರಸ್ತೆಯಲ್ಲಿ ಹೋಗುತ್ತ ಅಲ್ಲಲ್ಲಿ ನಿಂತು ನೆಲವನ್ನೋ , ಗಿಡಮರಗಳನ್ನೋ, ಲೈಟ್ ಕಂಬಗಳನ್ನೋ ಮೂಸಿ ಮೂಸಿ ನೋಡುತ್ತ , ಸಾಧ್ಯವಾದಷ್ಟು ಅವುಗಳ ಮೇಲೆ ಜಲಾಭಿಷೇಕ ಮಾಡುತ್ತ ಹೋಗುವ ಪರಿಯೇ ಅನ್ಯಾದೃಶ!. ನಾನು ಗಮನಿಸಿರುವಂತೆ  ಆ ಸಮಯದಲ್ಲಿ ನಾಯಿ ತಾನೇ        " ಯಜಮಾನ", ತನ್ನನ್ನು ಒಯ್ಯುತ್ತಿರುವವನೇ ಸೇವಕ ಎಂಬಂತಹ ಒಂದು ಭಾವವನ್ನೂ ಪ್ರದಶರ್ಿಸುತ್ತದೇನೋ ಎಂಬ ಗುಮಾನಿ ನನ್ನದು. ಆ ಸಂದರ್ಭದಲ್ಲಿ  ನಾಯಿ ಎಳೆದತ್ತ ನಾವು ಹೋಗಬೇಕೇ ಹೊರತು, ನಾವು ಎಳೆದತ್ತ ಅದು ಬರುವದಿಲ್ಲ. 

ಹೋಗಲಿ, ಈ ನಾಯಿ ವಿಹಾರಕ್ಕೂ ದೊಡ್ಡಸ್ತಿಕೆಗೂ " ಎತ್ತಣಿಂದೆತ್ತಣ ಸಂಬಂಧವಯ್ಯಾ"  ಎಂದು ನೀವು ಕೇಳುವದು ಸಹಜ. ಯೋಚಿಸಿ, ಆ ನಾಯಿ ಅಂತಿಂಥಾದ್ದಲ್ಲ. ಬೆಲೆ ಬಾಳುವ ವಿದೇಶೀ ನಾಯಿ.ನಮ್ಮಂತಹ ಜನಸಾಮಾನ್ಯರ ಮನೆಗಳಲ್ಲೋ, ಬೀದಿಗಳಲ್ಲೋ ಕಾಣುವ ಕಂತ್ರಿ ನಾಯಿಯಲ್ಲ. ಮುನಸಿಪಾಲಿಟಿ ನಾಯಿಯೂ ಅಲ್ಲ.  ಅದಕ್ಕೆ ಅದರದೇ ಆದ ವಜನ್ ಇದೆ, ಕಿಮ್ಮತ್ತಿದೆ, ನಿಲುವೂ ಇದೆ,  ಶ್ರೀಮದ್- ಗಾಂಭೀರ್ಯವೂ ಇದೆ. ಅದೆಂದಾದರೂ ನಮ್ಮ ಕಂತ್ರಿ ನಾಯಿಗಳಲ್ಲಿ ಕಾಣಲು ಸಾಧ್ಯವಿದೆಯೇ! ಆ ಮುಖವೋ, ಆ ಕೂದಲು ರಾಶಿಯೋ, ಆ ನಿಲುವೋ! ನಾಯಿ ಇದ್ದರೆ ಹಾಗಿರಬೇಕು ಎನ್ನುವಂತಿರುತ್ತದಲ್ಲವೇ? 

ಅಂಥಾ ನಾಯಿಯನ್ನು ರಾಜಬೀದಿಗಳಲ್ಲಿ ಕೊಂಡೊಯ್ಯುವದೇ ಒಂಥರಾ ಹೆಮ್ಮೆಯ ಸಂಗತಿಯಲ್ಲವೆ. ಶ್ರೀಸಾಮಾನ್ಯರು ಹಾಗೆ ತಮ್ಮ ಮನೆಯ ನಾಯಿಯನ್ನು ವಿಹಾರಕ್ಕೆ ಒಯ್ದುದನ್ನು ಎಂದಾದರೂ ನೀವು ನೋಡಿದ್ದೀರಾ? ಹೋಗಲಿ, ಆ ನಾಯಿಗಳೆಂದಾದರೂ ತಮ್ಮ ಮಾಲಕನನ್ನು ದಿನಾಲು ಹೊರಗೆ ಕರೆದೊಯ್ಯುವಂತೆ ಪೀಡಿಸುವದುಂಟೆ? ಛೇ ಛೇ, ಅಂತಹ ಯಾವ ದೊಡ್ಡಸ್ತಿಕೆಯ ಗುಣಗಳೂ ನಮ್ಮ ಈ ಸಾದಾ ನಾಯಿಗಳಲ್ಲಿಲ್ಲ ಬಿಡಿ.. ಆದ್ದರಿಂದಲೇ ನಾವು ನಮ್ಮ ದೊಡ್ಡಸ್ತಿಕೆಯನ್ನು ಹೆಚ್ಚಿಸಿಕೊಳ್ಳಲು ಈ ಬಗೆಯ ನಾಯಿಗಳನ್ನು ಸಾಕುವದು ಅನಿವಾರ್ಯ ಎಂಬ ನನ್ನ ಹೆಂಡತಿಯ ವಾದದಲ್ಲೂ ಹುರುಳಿದೆ ಎನ್ನುವದನ್ನು ಅಲ್ಲಗಳೆಯಲಾಗದು. 

ನನಗೂ ಗೊತ್ತಿರುವ ನನ್ನ ಇನ್ನೊಂದು ದೊಡ್ಡ ದೋಷವೆಂದರೆ ಎಲ್ಲರೊಡನೆಯೂ ಸರಳವಾಗಿ ಬೆರೆತುಬಿಡುವದು. ಹಾಗೆ ಮಾಡುವದರಿಂದ ನಮ್ಮ ವ್ಯಕ್ತಿತ್ವಕ್ಕೆ ಆಗುವ ಹಾನಿಯ ಕುರಿತು ನನ್ನ ಗಮನ ಸೆಳೆದವರು ಮಿತ್ರ ಗುಂಡೇನಟ್ಟಿ ಮಧುಕರರು. ಅವರು ನನಗೆ ಯಾವಾಗಲೂ ಹೇಳುತ್ತಿರುತ್ತಾರೆ - ಹಾಗೆಲ್ಲ ಸಿಕ್ಕಸಿಕ್ಕವರೊಡನೆ ನೀವು ಕಾಣಿಸಿಕೊಂಡರೆ ಅಗ್ಗವಾಗಿಬಿಡುತ್ತೀರಿ. ಆದಷ್ಟು "ಹೈಲೆವಲ್ " ಜನರೊಡನೆಯೇ ನೀವು ಒಡನಾಟ ಇರಿಸಿಕೊಳ್ಳಬೇಕು" ಎಂದು. ಆದರೆ ನಾನು ನನ್ನ " ಸರಳ ಜೀವನ ತತ್ವ" ದ ಭ್ರಮೆಯಲ್ಲಿದ್ದುದರಿಂದ ಅವರ ಮಾತನ್ನು ನಾನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೊನೆಗೆ ಹೆಂಡತಿಯ ಸಲಹೆಯಂತೆ ಈ ಎರಡನೇ ಪ್ರಯೋಗವನ್ನೂ ಮಾಡಲು ನಿರ್ಧರಿಸಿದೆ. 

ಆದರೆ ನನಗೆ ಈ ಹೈಲೆವಲ್ ಜನರೆಂದರೆ ಯಾರು, ಅವರೊಂದಿಗೆ ಹೇಗೆ ವತರ್ಿಸಬೇಕು ಇತ್ಯಾದಿ ಅಂಶಗಳೂ ಗೊತ್ತಿರಲಿಲ್ಲ. ಆಗ ಮತ್ತೆ ಗುಂಡೇನಟ್ಟಿಯವರ ಮಾರ್ಗದರ್ಶನವನ್ನೇ ಪಡೆಯಬೇಕಾಯಿತು. ಆಗಿನಿಂದ ನಾನು ಹುಡುಕಿ ಹುಡುಕಿ ಹೈಲೆವಲ್ ಮಂದಿಯ ನಡುವೆ ಕಾಣಿಸಿಕೊಳ್ಳತೊಡಗಿದೆ. ಅವರದೇ ವೇಷಭೂಷಣ, ಅವರದೇ ಕೃತಕ ನಗೆ, ಅವರದೇ ಹಾವಭಾವ,  ಅವರದೇ ಒಣಗತ್ತು ಎಲ್ಲ ಕಲಿಯುತ್ತ ಹೋದ ಹಾಗೆ ನಾನು ಬಹಳ ಹಿಂದುಳಿದಿದ್ದೇನೆ ಎಂದು ನನಗೇ ಅನಿಸತೊಡಗಿತು. ಅಲ್ಲದೇ ದೊಡ್ಡಸ್ತಿಕೆ ತೋರಿಸಿಕೊಳ್ಳುವದೂ ಅಷ್ಟು ಸುಲಭವಲ್ಲ ಎಂಬ ಭಾವನೆಯುಂಟಾಯಿತು. ಎಲ್ಲಕ್ಕಿಂತ ಮಹತ್ವದ ಮಾತೆಂದರೆ ಸಮಾಜದಲ್ಲಿ ಹೈಲೆವಲ್ ಜನ ಎಂದು ಹೇಳಿಸಿಕೊಳ್ಳುವವರಲ್ಲಿ ಹೆಚ್ಚಿನವರು ಅತ್ಯಂತ ಲೋಲೆವಲ್ ಜನ ಎಂಬ ಸತ್ಯದರ್ಶನವೂ ನನಗಾಗತೊಡಗಿತು. 

ಇದರಿಂದಾಗಿ ನನ್ನ  ದೊಡ್ಡಸ್ತಿಕೆ ಹೆಚ್ಚಿಸುವ ನನ್ನ ಹೆಂಡತಿಯ ಪ್ರಯತ್ನಕ್ಕೂ ಹಿನ್ನಡೆಯುಂಟಾಗತೊಡಗಿತು. ನನಗೆ ಅದರಿಂದ  ಬಹಳ ಬೇಸರವುಂಟಾಗಲಿಲ್ಲವಾದರೂ ನನ್ನ ಹೆಂಡತಿ ಮಾತ್ರ ಈಗಲೂ ತನ್ನ ಪ್ರಯತ್ನ ಮುಂದುವರಿಸಿದ್ದಾಳೆ  ಮತ್ತು ನನ್ನ ಪರಿವರ್ತನೆಯ ಬಗ್ಗೆ ಅವಳಿನ್ನೂ ಆಶಾವಾದಿಯಾಗಿದ್ದಾಳೆ.