“ಇಲ್ಲಿ ಕಸ ಎಸೆಯಬೇಡಿ”

“ಇಲ್ಲಿ ಕಸ ಎಸೆಯಬೇಡಿ”  “Don't throw garbage here”


ಶಿರಹಟ್ಟಿ 20: ನಗರ ಮತ್ತು ಪಟ್ಟಣಗಳ ಸ್ವಚ್ಛತೆ ಕೇವಲ ಪೌರಕಾರ್ಮಿಕರ ಹೊಣೆಗಾರಿಕೆಯಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾದಾಗ ಮಾತ್ರ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯ ಎಂದು ಶಿರಹಟ್ಟಿ ಪಟ್ಟಣ ಪಂಚಾಯತಿ ಅಭಿಪ್ರಾಯಪಟ್ಟಿದೆ. 

ಬೆಳಗಿನ ಜಾವದಿಂದಲೇ ಚಳಿಹಿಮಳೆಯನ್ನೂ ಲೆಕ್ಕಿಸದೇ ಪೌರಕಾರ್ಮಿಕರು ಶಿರಹಟ್ಟಿ ಪಟ್ಟಣದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಕಾರ್ಯನಿರತರಾಗಿದ್ದಾರೆ. ಅವರ ಪರಿಶ್ರಮಕ್ಕೆ ಬೆಂಬಲವಾಗಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯವನ್ನು ಪಟ್ಟಣ ಪಂಚಾಯತಿ ಸಿಬ್ಬಂದಿ ಪ್ರತಿನಿತ್ಯ ನಡೆಸುತ್ತಿದ್ದಾರೆ. 

ಪಟ್ಟಣದ ಪ್ರತಿ ಬೀದಿಗಳಲ್ಲಿ ದಿನನಿತ್ಯ ಕಸ ಸಂಗ್ರಹಣಾ ವಾಹನಗಳು ಸಂಚರಿಸಿ ಮನೆಗಳು ಹಾಗೂ ಅಂಗಡಿಹಿಮುಂಗಟ್ಟುಗಳಿಂದ ಒಣಕಸ ಮತ್ತು ಹಸಿಕಸವನ್ನು ಸಂಗ್ರಹಿಸುತ್ತಿವೆ. ಆದರೆ ನೀರೀಕ್ಷಿತ ಮಟ್ಟದಲ್ಲಿ ಕಸ ಸಂಗ್ರಹಣೆ ಆಗದ ಕಾರಣ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಪಟ್ಟಣ ಪಂಚಾಯತಿ ಮುಂದಾಗಿದೆ. 

ಇಷ್ಟಾದರೂ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪೌರಕಾರ್ಮಿಕರಿಗೆ ಅಗತ್ಯಮಟ್ಟದ ಸಾರ್ವಜನಿಕ ಸಹಕಾರ ದೊರೆಯದಿರುವುದು ವಿಷಾದಕರ ಸಂಗತಿಯಾಗಿದೆ. 

20 ಬ್ಲಾಕ್ ಸ್ಪಾಟ್‌ಗಳ ಗುರುತು 

ಶನಿವಾರ ರಂದು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚಿರುವುದನ್ನು ಗಮನಿಸಿದ ಪಟ್ಟಣ ಪಂಚಾಯತಿ, ಸ್ವಚ್ಛತೆ ಮತ್ತು ಪರಿಸರ ಹಾನಿಯಾಗುತ್ತಿರುವ 20 ಸಾರ್ವಜನಿಕ ಸ್ಥಳಗಳನ್ನು ‘ಬ್ಲಾಕ್ ಸ್ಪಾಟ್‌’ಗಳಾಗಿ ಗುರುತಿಸಿದೆ. ಈ ಜಾಗೆಗಳನ್ನು ಸ್ವಚ್ಛಗೊಳಿಸಿ, ವಿಶೇಷ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 

ಆರಂಭಿಕವಾಗಿ ವಾರ್ಡ್‌ ನಂ.9ರ ಒಂದು ಬ್ಲಾಕ್ ಸ್ಪಾಟ್ ಪ್ರದೇಶದಲ್ಲಿ ಸುಣ್ಣಹಿಬಣ್ಣ ಬಳಿದು, ಹೂಗಿಡಗಳನ್ನು ನೆಟ್ಟು ಅಲಂಕರಿಸುವ ಮೂಲಕ “ಇಲ್ಲಿ ಕಸ ಎಸೆಯಬೇಡಿ” ಎಂಬ ಸಂದೇಶವನ್ನು ವಿನೂತನವಾಗಿ ಸಾರಲಾಗಿದೆ. 

ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ದಂಡ 

ಗುರುತಿಸಿರುವ ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಮರುಕಳಿಸಿ ಕಸ ಎಸೆಯುವವರ ವಿರುದ್ಧ ಸರ್ಕಾರದ ಮಾರ್ಗಸೂಚಿಯಂತೆ ದಂಡ ವಿಧಿಸಲು ಪಟ್ಟಣ ಪಂಚಾಯತಿ ಮುಂದಾಗಿದೆ. ಸಾರ್ವಜನಿಕರು ಸ್ವಚ್ಛತೆಯ ಮಹತ್ವ ಅರಿತು ಪೌರಕಾರ್ಮಿಕರಿಗೆ ಸಹಕರಿಸಿ, ಶಿರಹಟ್ಟಿಯನ್ನು ಸ್ವಚ್ಛ ಹಾಗೂ ಆರೋಗ್ಯಕರ ಪಟ್ಟಣವನ್ನಾಗಿ ರೂಪಿಸಬೇಕು ಎಂಬುದು ಪಟ್ಟಣ ಪಂಚಾಯತಿ ಕಚೇರಿಯ ಆಶಯವಾಗಿದೆ.