‘ವಿಶ್ವ ಮಹಿಳಾ ದಿನಾಚರಣೆ’ ಹಾಗೂ ‘ಶ್ರಮಿಕ ಮಹಿಳೆ ಪ್ರಶಸ್ತಿ’ ಪ್ರದಾನ

‘ವಿಶ್ವ ಮಹಿಳಾ ದಿನಾಚರಣೆ’ ಹಾಗೂ ‘ಶ್ರಮಿಕ ಮಹಿಳೆ ಪ್ರಶಸ್ತಿ’ ಪ್ರದಾನ ‘International Women’s Day’ and ‘Working Woman Award’ presented

        ಧಾರವಾಡ 10:  ಮಹಿಳೆ ಕುಟುಂಬದ ಆಧಾರಸ್ತಂಭ. ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಅಂತಹ ಮಹಿಳೆ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೇ ದುರ್ಲಭ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಅನುರಾಧ ವಸ್ತ್ರದ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶತಾಯುಷಿ ದಿ.   ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ಕಾರ್ಯಕ್ರಮದಲ್ಲಿ ‘ವಿಶ್ವ ಮಹಿಳಾ ದಿನಾಚರಣೆ’ ಹಾಗೂ ‘ಶ್ರಮಿಕ ಮಹಿಳೆ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು. 

ವಿಶ್ವ ಮಹಿಳಾ ದಿನದ ಉದ್ದೇಶ ಶೋಷಿತ ಮಹಿಳಾ ಕುಲಕ್ಕೆ ಭರವಸೆ ನೀಡಿ ಶಕ್ತಿ ತುಂಬುವ ದಿನವಾಗಿದೆ. ಡೆನ್ಮಾರ್ಕ್‌ ರಾಜಧಾನಿ ಕೋಪನ್ ಹೇಗನ್‌ದಲ್ಲಿ 1910 ರಲ್ಲಿ ಮಹಿಳಾ ಸಮಾವೇಶದಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜಟ್ಕಿನ್ ಮಹಿಳೆಯರಿಗೆ ಮತದಾನದ ಹಕ್ಕು ಸೇರಿದಂತೆ ಇತರ ಹಕ್ಕುಗಳಿಗೆ ಹಕ್ಕೊತ್ತಾಯ ಪ್ರಸ್ತಾಪಿಸಿದರು. ವಿಶ್ವಸಂಸ್ಥೆ 1975 ರಲ್ಲಿ ‘ವಿಶ್ವ ಮಹಿಳಾ ದಿನಾಚರಣೆ’ ಆಚರಿಸಲು ಕರೆ ನೀಡಿತು. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾಳೆ. 

ಇಂದು ಮಹಿಳೆ ಕುಟುಂಬದಲ್ಲಿ ತಾಯಿಯಾಗಿ, ಮಡದಿಯಾಗಿ, ಸೊಸೆಯಾಗಿ, ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾಳೆ. 19ನೇ ಶತಮಾನದಲ್ಲಿ ಅನೇಕ ಸಮಾಜ ಸುಧಾರಕರು ಮಹಿಳೆಯರಿಗೆ ಶಿಕ್ಷಣ ಸಮಾನತೆಗೆ ಹೋರಾಡಿದ್ದನ್ನು ಸ್ಮರಿಸಬಹುದು. ಶಿಕ್ಷಣದಿಂದ ಮಾತ್ರ ಮಹಿಳೆ ಏನನ್ನಾದರೂ ಸಾಧಿಸಬಹುದು. ನನ್ನ ಸಾಧನೆಗೆ ನನ್ನ ಪತಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಕಾರಣರು ಎಂದರು. 

ಕವಿವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಶೈಲಜಾ ಅಮರಶೆಟ್ಟಿ ‘ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಶ್ರಮ’ ಕುರಿತು ಉಪನ್ಯಾಸ ನೀಡಿ, ಮಹಿಳೆ ಇಂದು ತನ್ನ ಶಕ್ತಿ ಸಾಮರ್ಥ್ಯದ ಮೂಲಕ ಅಚ್ಚುಕಟ್ಟಾಗಿ ಕುಟುಂಬ ನಿರ್ವಹಣೆ ಮಾಡುತ್ತ ಅಪಾರ ಸಾಧನೆ ಮಾಡಿದ್ದಾಳೆ. ಮಹಿಳೆ ಒಂದು ದೊಡ್ಡ ಶಕ್ತಿ. ಆದರೂ ಮಹಿಳೆ ಮೇಲೆ ಶೋಷಣೆ, ದೌರ್ಜನ್ಯ ನಿಲ್ಲದಿರುವುದು ವಿಷಾದ ಎಂದು ಹೇಳಿದರು. 

ದತ್ತಿದಾನಿಗಳ ಪರವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶ್ರಾಂತ ಉಪನಿರ್ದೇಶಕ ಆರ್‌. ಸಿ. ಹಲಗತ್ತಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಮಹಿಳೆಯರಿಗೆ ಸಮಾನತೆ ನೀಡಿದ್ದರಿಂದ 36 ಜನ ವಚನಗಾರ್ತಿಯರು ವಚನಗಳನ್ನು ಬರೆಯಲು ಸಾಧ್ಯವಾಯಿತು. ನಮ್ಮ ತಾಯಿ ಗೌರಮ್ಮನವರು ನಮಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. 

ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕರಾದ ಹನುಮಾಕ್ಷಿ ಗೋಗಿ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅನುದಿನವು ಮಹಿಳೆಯರನ್ನು ಗೌರವಿಸುವಂತಾಗಬೇಕು. ಶಿಕ್ಷಣದಿಂದ ಮಹಿಳೆ ಏನೆಲ್ಲಾ ಸಾಧನೆ ಮಾಡಬಹುದು. ಇಂದಿನ ಸಂಕೀರ್ಣ ಬದುಕಿನಲ್ಲಿ ಒಬ್ಬರೇ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ. ಏನಾದರೂ ಒಂದು ಆದಾಯದ ಮೂಲ ಅಗತ್ಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶ್ರಮಿಕ ಮಹಿಳೆ ಪೌರಕಾರ್ಮಿಕರಾದ ಸುನಿತಾ ಮಾದರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಂಕರ ಹಲಗತ್ತಿ ಸನ್ಮಾನಿತರನ್ನು ಪರಿಚಯಿಸಿದರು. ಸತೀಶ ತುರುಮರಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. 

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಜಿನದತ್ತ ಹಡಗಲಿ, ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಬಿ.ಎಲ್‌. ಪಾಟೀಲ, ಸಿ.ಎಸ್‌. ಪಾಟೀಲ, ರತ್ನಾ ಹಲಗತ್ತಿ, ಸಿದ್ಧರಾಮಪ್ಪ ಲಕ್ಷ್ಮೇಶ್ವರ, ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ. ಮಾರ್ಕಂಡೇಯ ದೊಡಮನಿ, ಬಿ.ಎಸ್‌. ಶಿರೋಳ, ಜಗದೀಶ ಬರದೇಲಿ, ಗುರು ತಿಗಡಿ, ಎಂ.ಎಂ. ಚಿಕ್ಕಮಠ, ಪ್ರಕಾಶ ಮಲ್ಲಿಗವಾಡ ಸೇರಿದಂತೆ ಹಲಗತ್ತಿ ಪರಿವಾರದವರು ಉಪಸ್ಥಿತರಿದ್ದರು.