‘ಕಾವ್ಯ ಕಟ್ಟುವ ಬಗೆ’ ಕಾರ್ಯಕ್ರಮ

‘ಕಾವ್ಯ ಕಟ್ಟುವ ಬಗೆ’ ಕಾರ್ಯಕ್ರಮ ‘How to compose poetry’ program

ಧಾರವಾಡ 16: ಸಮಾಜದಲ್ಲಿಯ ಅಸಮಾನತೆ ಹೋಗಲಾಡಿಸುವುದಕ್ಕಾಗಿ, ನೋವಿಗೆ ಮಿಡಿಯುವ ಮನಸ್ಸುಗಳಿಂದ, ಸುಶಿಕ್ಷಿತವಾದ ಹೃದಯದಿಂದ ಹುಟ್ಟಿದ ಕಾವ್ಯ ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಕತೆಗಾರ್ತಿ ಸುನಂದಾ ಕಡಮೆ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘದ ‘ಸಾಹಿತ್ಯ ಮತ್ತು ಅನುಭಾವ ಮಂಟಪ’ವು ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಾವ್ಯ ಕಟ್ಟುವ ಬಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  

ಸಮಾಜದ ಕೂಸಾಗಿರುವ ಸಾಹಿತಿ, ತಾನು ದಿನನಿತ್ಯ ಕಾಣುವ ಸಂದರ್ಭ, ಸನ್ನಿವೇಶಗಳ ಅನುಭವದಿಂದ ಕಾವ್ಯ ಸೃಷ್ಟಿಸುತ್ತಾನೆ. ಕಲ್ಪನೆಗಿಂತ ಅನುಭವದಿಂದ ಬಂದ ಕಾವ್ಯ ಉತ್ಕೃಷ್ಟವಾಗಿರುತ್ತದೆ ಎಂದು ಹೇಳಿ ರೈತರ ಸಂಕಷ್ಟ ಕುರಿತು ಕಾವ್ಯವಾಚನ ಮಾಡಿದರು.  

ಸಮಾರಂಭದ ಅತಿಥಿಯಾಗಿ ಮಾತನಾಡಿದ ಕವಿ ಮಹಾಂತಪ್ಪ ನಂದೂರ ಅವರು, ಕಾವ್ಯ, ಸಾಹಿತ್ಯ, ಅಂತರಂಗದಲ್ಲಿ ನೆಮ್ಮದಿಯ ತಾಣವಾಗಿ ಇದ್ದದ್ದು, ಮೊದಲು ಕಾವ್ಯ ಹುಟ್ಟುತ್ತದೆ. ನಂತರ ಅದನ್ನು ಶಬ್ದ ಸಂಪತ್ತನ್ನು ಬಳಸಿ ಕಟ್ಟಬೇಕಾಗುತ್ತದೆ. ಒತ್ತಡಗಳ ಜೀವನದಿಂದ ಬುದ್ಧಿ ಪ್ರೇರಿತ ಆಗಬಾರದು, ಭಾವ ಪ್ರೇರಿತವಾಗಬೇಕು, ಬುದ್ಧಿ ಮತ್ತು ಭಾವ ಎರಡನ್ನು ಸಮನ್ವಯಗೊಳಿಸಿದಾಗ ಆಸಕ್ತಿ, ಸಾಮರ್ಥ್ಯ, ಪ್ರತಿಭೆಗಳನ್ನು ಆಧರಿಸಿ ಕಾವ್ಯ ಹುಟ್ಟುತ್ತದೆ. ಸಾಹಿತ್ಯ ಭಾವ ಬದುಕಿನ ಪ್ರವೇಶ ಪಡೆಯಲಿಕ್ಕೆ ಮಾರ್ಗದರ್ಶಿಯಾಗಿರುವಂತಹದ್ದು. ಕವಿತೆ ಒಂದು ಹಣ್ಣು. ಅದನ್ನು ತಿಂದಾಗ ಅದರಿಂದ ಹೊರಹೊಮ್ಮುವ ರಸವೆ ಕಾವ್ಯ. ಬದುಕಿನ ತಲ್ಲಣ-ತಾಕಲಾಟಗಳ ಮುಖಾ-ಮುಖಿಯಿಂದ ಕಾವ್ಯ ಹುಟ್ಟನ್ನು ಪಡೆದುಕೊಳ್ಳುತ್ತದೆ. ಅದನ್ನು ಬರೆಯಲೇಬೇಕೆಂಬ ಇಚ್ಛೆ ಹೊರಬರುತ್ತದೆ. ಅದು ಮೊದಲು ಅಂತರಂಗದಲ್ಲಿ ಹುಟ್ಟುತ್ತದೆ, ತದನಂತರ ಕಲಾತ್ಮಕ ರೀತಿಯಿಂದ ಅದನ್ನು ಕಟ್ಟಬಹುದು ಎಂದು ಹೇಳಿದ ಅವರು, ಹೃದಯದಿಂದ ಹುಟ್ಟುವ ಕಾವ್ಯ ಸಹೃದಯರನ್ನು ತಟ್ಟುತ್ತದೆ. ಎರಡು ಹೃದಯಗಳ ಸೇತುವೆಯಾಗಿ ಕಾವ್ಯ ನಿಲ್ಲುತ್ತದೆ. ಕವಿಯಾದವನು ತನ್ನ ಮನೋಭೂಮಿಕೆಯನ್ನು ವಿಸ್ತಾರಗೊಳಿಸುತ್ತ್ತ ಕಾವ್ಯ ರಚನೆಗೆ ತೊಡಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

ಪ್ರಾಚಾರ್ಯರಾದ ಡಾ. ರಮೇಶ ರಟಗೇರಿ ಅಧ್ಯಕ್ಷತೆ ವಹಿಸಿ, ಕಾವ್ಯ ರಚನೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ಅದಕ್ಕೆ ಪರಂಪರೆ ಇರಬೇಕು, ಜೊತೆಗೆ ನಿರಂತರ ಶ್ರಮಪಡಬೇಕಾಗುತ್ತದೆ. ಬೇರೆಯವರು ಬರೆದ ಸಾಹಿತ್ಯವನ್ನು ಓದಿದಾಗ ಅಲ್ಲಿಯ ಶಬ್ದ ಸಂಪತ್ತು ಕಾವ್ಯ ರಚನೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. 

ರಂಗನಾಥ ಕಂಟನಕುಂಟೆ ಸ್ವಾಗತಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮತ್ತು ಅನುಭಾವ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೈ.ಎಂ. ಭಜಂತ್ರಿ ವಂದಿಸಿದರು. ಡಾ. ಸುಜಾತ ದೇವರಮನಿ ನಿರೂಪಿಸಿದರು. 

ಡಾ. ಶಾರದಾ ಭಟ್, ಸುಮಾ ಹಡಪದ, ಸಲೀಮಾ ನೆಗಳೂರ, ಮಹಾದೇವ ಹೆಬ್ಬಳ್ಳಿ, ಅನ್ನಪೂರ್ಣ ಬೆಳವಟಿಕೆ, ಭೂಮಿಕಾ ಗುಂಡೂರ, ಸಹನಾ ನವಲಿ, ಮಹಾಂತೇಶಗೌಡ ಪಾಟೀಲ, ಕಾರ್ತಿಕ ಕಾಳಿ, ಸ್ವರಚಿತ ಕವನಗಳನ್ನು ವಾಚಿಸಿದರು. ಸಮಾರಂಭದಲ್ಲಿ ಸಲಹಾ ಸಮಿತಿ ಸದಸ್ಯರಾಗಿ ವಿಜಯಲಕ್ಷ್ಮೀ ಕಲ್ಯಾಣಶೆಟ್ಟಿ, ಲಲಿತಾ ಪಾಟೀಲ, ಸುಜಾತ ಹಡಗಲಿ, ಶ್ರೀದೇವಿ ಪಾಟೀಲ ಉಪಸ್ಥಿತರಿದ್ದರು.