‘ಹದಿಹರೆಯದ ಮಾನಸಿಕ ತುಡಿತಗಳು ಹಾಗೂ ಪರಿಣಾಮ’ಮತ್ತು ‘ವಿದ್ಯಾರಶ್ಮಿ’ ಪ್ರಶಸ್ತಿ ಪ್ರದಾನ ಸಮಾರಂಭ

‘ಹದಿಹರೆಯದ ಮಾನಸಿಕ ತುಡಿತಗಳು ಹಾಗೂ ಪರಿಣಾಮ’ಮತ್ತು ‘ವಿದ್ಯಾರಶ್ಮಿ’ ಪ್ರಶಸ್ತಿ ಪ್ರದಾನ ಸಮಾರಂಭ ‘Adolescent Mental Stress and its Impact’ and ‘Vidyarashmi’ Award Presentation Ceremony

ದಾರವಾಡ 20: ಹದಿಹರೆಯದಲ್ಲಿ ಮಕ್ಕಳು ತಾವು ಕಂಡ ಕನಸುಗಳನ್ನು, ಆಸೆಯನ್ನು ಈಡೇರಿಸುವ ಬರದಲ್ಲಿ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಈ ಹದಿಹರೆಯ ಮಕ್ಕಳ ಪಾಲಿಗೆ ಸಂಕ್ರಮಣ ಕಾಲ ಎಂದು ಕ.ವಿ.ವ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ರಶ್ಮಿ ಮಂಜುನಾಥ ನಾಯಕ ದತ್ತಿ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ‘ಹದಿಹರೆಯದ ಮಾನಸಿಕ ತುಡಿತಗಳು ಹಾಗೂ ಪರಿಣಾಮ’ ಕುರಿತು ಉಪನ್ಯಾಸ ಹಾಗೂ ‘ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಸ್‌ ವಿತರಣೆ’ ಮತ್ತು ‘ವಿದ್ಯಾರಶ್ಮಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.  

ಮಕ್ಕಳು ಪರಿಸರ, ಸಹಪಾಠಿಗಳ ಹಾಗೂ ಹಿರಿಯರು ಮಾಡುವ ಕಾರ್ಯಗಳ ಅನುಕರಣೆ ಮಾಡುವುದರ ಮೂಲಕ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಪಾಲಕರು, ಶಿಕ್ಷಕರು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬದಲಾವಣೆ ಸೂಕ್ಷ್ಮವಾಗಿ ಗಮನಿಸಬೇಕು. ಲೈಂಗಿಕ ಆಕರ್ಷಣೆ ಹಾಗೂ ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಸು, ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಮಕ್ಕಳಿಗೆ ಬಂಧನಕಾರಿ ವಾತಾವರಣ ಸರಿಯಲ್ಲ, ಸಹಜ ಸ್ವಾತಂತ್ರ್ಯ ಅಗತ್ಯ.ಹದಿಹರೆಯದಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವಾಗಲಿ, ಅತಿಯಾದ ಸ್ವಾತಂತ್ರ್ಯ ನೀಡುವುದೂ ಸಹ ಕಷ್ಟ. ಇಂದು ಭಾರತದಲ್ಲಿ ಹದಿಹರೆಯದಲ್ಲಿ ಸ್ವೇಚ್ಛಾಚಾರ ಪ್ರವೃತ್ತಿಯಿಂದ, ಬೇಡವಾದ ಗರ್ಭಪಾತದಿಂದ ಒಂದು ವರ್ಷಕ್ಕೆ ಐವತ್ತು ಲಕ್ಷ ಗರ್ಭಪಾತಗಳಾಗುತ್ತಿದ್ದು ಆತಂಕಕಾರಿಯಾಗಿದೆ. ಈ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಅಗತ್ಯ ಎಂದು ಹೇಳಿದರು. 

ವಿಶ್ರಾಂತ ಪೊಲೀಸ ಅಧೀಕ್ಷಕ ಡಿ.ಎಂ. ನಾಯಕ ಮಾತನಾಡಿ, ಭಾಷೆಗಿಂತ ಭಾವನೆ ಮುಖ್ಯ. ಇದೊಂದು ಭಾವನಾತ್ಮಕ ಕಾರ್ಯಕ್ರಮ. ಕೆ.ಎಚ್‌. ನಾಯಕ ಅವರು ದತ್ತಿ ಮೂಲಕ ಮಗಳ ಅಕಾಲಿಕ ಅಗಲಿಕೆಯ ಸ್ಮರಣೆ ಮಾಡುತ್ತಿರುವುದು ಸ್ಮರಣೀಯ ಎಂದರು. 

ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 2024-25ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೆ.ಇ.ಬೋರ್ಡ್‌ ಆಂಗ್ಲ ಮಾಧ್ಯಮ ಶಾಲೆಯ ಕು. ಸಮರ್ಥ ಉಮರ್ಜಿ ಅವರಿಗೆ ‘ವಿದ್ಯಾರಶ್ಮಿ’ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಧನ್ಯವಾದಗಳನ್ನು ಸಲ್ಲಿಸಿದರು. ಧಾರವಾಡದ ವಿವಿಧ ಪ್ರೌಢಶಾಲೆಯ ಅರ್ಹ ಮಕ್ಕಳಿಗೆ ಉಚಿತ ನೋಟ್‌ಬುಕ್ಸ್‌ಗಳನ್ನು ವಿತರಿಸಲಾಯಿತು. 

ವೇದಿಕೆಯಲ್ಲಿ ದತ್ತಿದಾನಿ ಕೆ.ಎಚ್‌. ನಾಯಕ ದತ್ತಿ ಆಶಯ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಶಾಂತವೀರ ಬೆಟಗೇರಿ ಅವರ ನಿಧನಕ್ಕೆ ಒಂದು ನಿಮಿಷದ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ನವಲೂರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಪ್ರಿ. ಶಶಿಧರ ತೊಡಕರ ವಂದಿಸಿದರು.  

ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಧನವಂತ ಹಾಜವಗೋಳ, ಎಂ.ಎಂ. ಚಿಕ್ಕಮಠ, ಜಿ.ಬಿ. ಸಜ್ಜನ, ಎಸ್‌. ಬಿ. ಕೊಡ್ಲಿ, ಡಾ. ಮಿಹಿರ ನಾಯಕ, ಬಿ. ಎಸ್‌. ಗಾಂವಕರ, ಅಶೋಕ  ನಾಯಕ, ಬಿ.ಆಯ. ಈಳಿಗೇರ, ಡಾ. ಸ್ಫೂರ್ತಿ ನಾಯಕ, ಶ್ರೀಮತಿ ಬೇಬಿ ನಾಯಕ, ನಾಗವೇಣಿ ನಾಯಕ, ಬಿ.ಬಿ. ನಾಯಕ, ಕೆ.ಜಿ. ದೇವರಮನಿ ಸೇರಿದಂತೆ ನಾಯಕ ಪರಿವಾರದವರು ಉಪಸ್ಥಿತರಿದ್ದರು.