ವಿಜಯಪುರ: ಹೋರಿ ಬೆದರಿಸುವ ಕಾಳಗ


ವಿಜಯಪುರ 04: ಅದೊಂದು ಮೈ ರೋಮಾಂಚನಗೊಳಿಸುವ ಆಟ....ಎದೆ ಝಲ್ ಎಂದರೂ ಉತ್ಸಾಹಕ್ಕೆ ಮಾತ್ರ ಕೊರತೆಯಿಲ್ಲ...ಶರವೇಗದಲ್ಲಿ ಎತ್ತುಗಳ ಓಟ, ಓಡಾಟ.... ಎತ್ತುಗಳನ್ನು ಹಿಡಿಯಲು ಯುವಕರ ದಂಡು....ಈ ಎಲ್ಲ ದೃಶ್ಯ ಕಂಡು ಪ್ರತಿಯೊಬ್ಬರ ಮೈ ಜುಂ ಎನಿಸುವುದಂತೂ ಸತ್ಯ....

ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಬುಧವಾರ ನಡೆದ ಕರಿ ಹರಿಯುವ ಹಾಗೂ ಹೋರಿ ಬೆದರಿಸುವ ಆಟವನ್ನು ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸಿ ಖುಷಿ ಅನುಭವಿಸಿದರು. ಕಾಖಂಡಕಿ ಕಾರಹುಣ್ಣಿಮೆ ಪ್ರಯುಕ್ತ ನಡೆಯುವ ಕರಿ ಹರಿಯುವ ಹಾಗೂ ಹೋರಿ ಬೆದರಿಸುವ ಆಟ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ಕಾರ ಹುಣ್ಣಿಮೆಯಾದ ಎಳುದಿನಕ್ಕೆ ಆಚರಿಸುತ್ತಾ ಎಲ್ಲೆಡೆ ತನ್ನದೆ ಆದ ಜನಪ್ರಿಯತೆ ಪಡೆದಿದೆ. 

ಒಳ್ಳೆ ಕಸುವುಳ್ಳ ಎತ್ತುಗಳನ್ನು ಮೈದಾನಕ್ಕೆ ತಂದು ಒಂದು ಎತ್ತಿಗೆ 10 ರಿಂದ 15 ಜನ ಯುವಕರು, ರೈತರು ಕೊಳ್ಳಿಗೆ ಹಗ್ಗ ಕಟ್ಟಿ ಹಿಡಿದು,  ಅದರಲ್ಲೂ ಒಬ್ಬ ಮಾತ್ರ ಎತ್ತಿಗೆ 'ತಾಕತ್ತಿದ್ದೆರೆ ನನ್ನ ಜತೆ ಹಾಯು ಅಥವಾ ಇರಿ' ಎಂದು ಸ್ಪಧರ್ೆ ಒಡ್ಡಿದ ದೃಶ್ಯ ಪ್ರತಿಯೊಬ್ಬರ ಎದೆ ಝಲ್ ಎನಿಸುತ್ತಿತ್ತು. ಎಲ್ಲಿ ಎತ್ತುಗಳು ನಮ್ಮ ಬಳಿ ಬಂದವೇನೋ ಎಂಬಂತೆ ಭಾಸವಾಗಿ ದೂರ ದೂರ ಓಡಿ ಹೋಗುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಈ ದೃಶ್ಯ ಅನುಭವಿಸುತ್ತಿದ್ದ ಜನಸ್ತೋಮದಿಂದ ಕೇಕೆ ಸಿಳ್ಳೆ.... ಹೌದ್ ಹುಲಿ.....ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಲೇ....ಭಲೇ....ಬಿಡಬ್ಯಾಡ.....ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಲೇ ಇದ್ದವು. 

ಕಾಖಂಡಕಿ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿಮರ್ಾಣಗೊಂಡಿತ್ತು. ರೈತರು ಬೆಳಿಗ್ಗೆಯಿಂದಲೇ ತಮ್ಮ ಜಾನುವಾರುಗಳ ಮೈಗೆಲ್ಲಾ ರಂಗುರಂಗಿನ ಚಿತ್ತಾರ ಬಿಡಿಸಿ, ಕೊಂಬುಗಳಿಗೆ ರಿಬ್ಬನ್ ಕಟ್ಟಿ ವಿಶೇಷವಾಗಿ ಅಲಂಕರಿಸಿ ಖುಷಿ ಅನುಭವಿಸಿದರು.  

ಅನೇಕ ಯುವಕರು ಎತ್ತು ಹಾಯಲು ಬಂದಾಗ ಚಾಣಾಕ್ಷತನದಿಂದ ಪಾರಾಗುತ್ತಾನೆ. ಇದೊಂದು ಅಪಾಯವಾದರೂ ಕುತೂಹಲವಾದ ಪ್ರದರ್ಶನ. ಎತ್ತುಗಳ ಮತ್ತು ಜನರ ಮಧ್ಯೆ ನಡೆಯುವ ಈ ಶಕ್ತಿ ಪ್ರದರ್ಶನವನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರು.  

ಪ್ರತಿ ವರ್ಷ ಕಾಖಂಡಕಿ ಕರಿ ನೋಡಲು ಎಲ್ಲಿದ್ದರೂ ಬರುತ್ತೇನೆ, ಉತ್ಸಾಹದಿಂದ ಹಾಗೂ ಅಷ್ಟೇ ಧೈರ್ಯದಿಂದ ಕೂಡಿದ ಈ ಆಟವನ್ನು ಪ್ರತಿಯೊಬ್ಬರು ನೋಡಿ ಕಣ್ತುಂಬಿಕೊಳ್ಳಬೇಕು. ಇದು ಅತ್ಯಂತ ವಿಶಿಷ್ಟವಾದ ಆಚರಣೆ ಎಂದು ಬಾಗಲಕೋಟೆಯಿಂದ ಈ ಕರಿ ನೋಡಲು ಬಂದ ಸುನೀಲ ಸಿಂದಗಿ , ಮಂಜುನಾಥ ಮುದ್ದೇಬಿಹಾಳ ತಮ್ಮ ಸಂತಸ ಹಂಚಿಕೊಂಡರು. '


ಮಾಳಿಗೆ ಮೇಲೆ ನಿಂತ ಜನಸ್ತೋಮ 

ಕಾಖಂಡಕಿ ಕಾರಹುಣ್ಣಿಮೆಯ ಎದೆ ಝಲ್ ಎನಿಸುವ ಈ ಆಟವನ್ನು ಕಾಣಲು ದೂರದ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಳಿಗ್ಗೆಯಿಂದಲೇ ಕಾಖಂಡಕಿಗೆ ಆಗಮಿಸಿದ್ದರು. ತಮ್ಮ ಪರಿಚಯಸ್ಥರ ಮನೆಗೆ ತೆರಳಿ ಅವರ ಮನೆಯ ಮಾಳಿಗೆ ಮೇಲೆ ಸ್ಥಾನವನ್ನು ಭದ್ರಪಡಿಸಿಕೊಂಡರು.

ಇನ್ನೂ ಸೂರ್ಯ ನೆತ್ತಿಯ ಮೇಲೆ ಬಾರದ ಇದ್ದಾಗಲೇ ಜನತೆ ತಮ್ಮ ತಮ್ಮ ಸುರಕ್ಷಿತ ಸ್ಥಳಗಳಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ನೆಲದ ಮೇಲೆ ನಿಂತು ನೋಡಿದರೆ ಅಪಾಯವೇ ಹೆಚ್ಚು. ಹೀಗಾಗಿ ಎತ್ತ ಕಣ್ಣು ಹಾಯಿಸಿದರೂ ಜನ ಸಾಗರ, ಮನೆಯ ಮಾಳಿಗೆಯ ಮೇಲೆ ನಿಂತ ಜನ ಕಂಡು ಬರುತ್ತಿದ್ದರು. ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆಯಿಂದಲೂ ಜನರು ಆಗಮಿಸಿದ್ದರು. 



ಜಾನಪದ ಹಿನ್ನೆಲೆ

ಕಾಖಂಡಕಿ ಕರಿಗೆ ಜಾನಪದ ಹಿನ್ನೆಲೆಯೂ ಇದೆ. ಜಾನಪದ ಸಂಗತಿಯೊಂದರಂತೆ ಈ ಹಿಂದೆ ಗ್ರಾಮದ ತಾಯಿಯೋರ್ವಳು ಹೊಲದಲ್ಲಿ ದುಡಿದು ಬಂದ ಮಗನಿಗೆ ಊಟ ಬಡಿಸುವಾಗ ಮಗನ ಅತೀವ ಅವಸರದ ಹಸಿವಿನ ಬಯಕೆಯನ್ನು ಕಂಡ ತಾಯಿ "ನೀನೇನು ಏಳೂರ ಕರಿ ಹರಿದು ಬಂದೀಯೇನ್" ಎಂದು ತಾಯಿ ಕೇಳುತ್ತಾಳೆ, ಆಗ ಈ  ಮಾತೃವಾಕ್ಯವನ್ನು ಪರಿಪಾಲಿಸಿದ ಪ್ರಯುಕ್ತ ಕಾರ ಹುಣ್ಣಿಮೆ  ನಡೆಯುತ್ತದೆ ಎಂಬುದನ್ನು ಗ್ರಾಮದ ಹಿರಿಯರು ವಿವರಿಸುತ್ತಾರೆ.